ಬದಲಾಗುವ ಭಾವನೆಗಳ ಸುತ್ತ ‘ಲವ್ ಬರ್ಡ್ಸ್’

Update: 2023-02-19 07:25 GMT

ಸ್ಯಾಂಡಲ್‌ವುಡ್‌ನ ರಿಯಲ್ ಲವ್ ಬರ್ಡ್ಸ್, ರೀಲ್‌ನಲ್ಲಿ ಮತ್ತೆ ಲವ್ ಬರ್ಡ್ಸ್ ಆಗಿ ಹಾರಾಟ ಶುರು ಮಾಡಿದ್ದಾರೆ. ಈ ಪ್ರೇಮಪಕ್ಷಿಗಳನ್ನು ಹಾರಾಟಕ್ಕೆ ಬಿಟ್ಟು ಸೂತ್ರ ಕೈಯಲ್ಲಿ ಹಿಡಿದು, ಪಕ್ಷಿಗಳಿಗೆ ಮಾರ್ಗದರ್ಶನ ಮಾಡಿರುವುದು ಪಿ.ಸಿ.ಶೇಖರ್. ಅಂದಹಾಗೆ ಇದು ‘ಲವ್ ಬರ್ಡ್ಸ್’ ಎಂಬ ಕನ್ನಡ ಸಿನೆಮಾ ವಿಚಾರ. ಈ ವಾರ ರಿಲೀಸ್ ಆಗಿರುವ ಕನ್ನಡ ಸಿನೆಮಾಗಳಲ್ಲಿ ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಗೆ ಬಂದ ಸಿನೆಮಾ    ‘ಲವ್ ಬರ್ಡ್ಸ್’. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಾಯಕ, ನಾಯಕಿಯಾಗಿ ಅಭಿನಯಿಸಿರುವ ಸಿನೆಮಾ ಈ ಲವ್ ಬರ್ಡ್ಸ್.

ಕೃಷ್ಣ ಮತ್ತು ಮಿಲನಾ ಜೋಡಿಯ ಸಿನೆಮಾಗಳು ಎಂದರೇನೇ ಒಂದು ಬಗೆಯ ಕುತೂಹಲ. ಈ ಜೋಡಿ ತೆರೆಯ ಮೇಲೆ ಬಂದಾಗಲೆಲ್ಲ ಹಿಟ್ ಆಗಿದೆ. ಈಗಲೂ ಅಂಥದ್ದೇ ನಿರೀಕ್ಷೆಯ ಜೊತೆ ರಿಲೀಸ್ ಆಗಿದೆ ಲವ್ ಬರ್ಡ್ಸ್ ಸಿನೆಮಾ. ಲವ್ ಮಾಕ್ಟೇಲ್, ಲವ್ ಮಾಕ್ಟೇಲ್-2 ಸಿನೆಮಾ ಹಿಟ್ ಆದ ರೀತಿಯಲ್ಲೇ ಈ ಚಿತ್ರ ಕೂಡ ಹಿಟ್ ಆಗಲಿದೆ ಎಂಬ ನಿರೀಕ್ಷೆಯಲ್ಲೇ ಸಿನೆಮಾ ತೆರೆಗೆ ಬಂದಿದೆ. ಸಂಬಂಧಗಳ ತೀಕ್ಷ್ಣತೆ, ತೀವ್ರತೆ, ಸಂಬಂಧಗಳ ಮಹತ್ವದ ಸುತ್ತ ಕಥೆ ಸುತ್ತುತ್ತದೆ. ಅದರಲ್ಲೂ ಗಂಡ ಹೆಂಡತಿ ಸಂಬಂಧ ಹೇಗಿದ್ದರೆ ಚೆನ್ನ ಎಂಬ ವಿಷಯವನ್ನೇ ಇಟ್ಟುಕೊಂಡು ಸಿನೆಮಾ ಮಾಡಿದ್ದಾರೆ ನಿರ್ದೇಶಕ ಪಿ.ಸಿ.ಶೇಖರ್.

ನಾಯಕ ದೀಪಕ್ (ಡಾರ್ಲಿಂಗ್ ಕೃಷ್ಣ) ಇಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಪಾತ್ರ ನಿರ್ವಹಿಸಿದ್ದಾರೆ. ನಾಯಕಿ ಪೂಜಾ (ಮಿಲನಾ ನಾಗರಾಜ್) ಇವರಿಬ್ಬರ ಪ್ರೀತಿ, ಮದುವೆ ಮತ್ತು ಜೀವನದ ಕಥೆಯೇ ಲವ್ ಬರ್ಡ್ಸ್ ಸಿನೆಮಾದ ಒನ್‌ಲೈನ್ ಸ್ಟೋರಿ. ಮ್ಯಾಟ್ರಿಮೋನಿ ಎನ್ನುವ ಮ್ಯಾರೇಜ್ ಸೈಟ್‌ನಲ್ಲಿ ಪರಿಚಯವಾಗಿ, ಆ ಪರಿಚಯ ಪ್ರೀತಿಗೆ ತಿರುಗಿ, ಆ ಪ್ರೀತಿಗೆ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗುವ ಈ ಜೋಡಿಯ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ನಿರ್ದೇಶಕರು.

ಮದುವೆಯಾದ ಹೊಸದರಲ್ಲಿ ಎಲ್ಲದಕ್ಕೂ ಹೊಂದಿಕೊಳ್ಳುವವರು, ಆನಂತರ ಎಲ್ಲದಕ್ಕೂ ಆಕ್ಷೇಪ ವ್ಯಕ್ತಪಡಿಸಿದರೆ ಜೀವನ ಹೇಗೆ ಬದಲಾಗುತ್ತದೆ ಎನ್ನುವುದೇ ಈ ಸಿನೆಮಾ ಕಥೆ. ಸಣ್ಣಪುಟ್ಟ ವಿಚಾರಕ್ಕೂ ಕಿತ್ತಾಡುವ ಜೋಡಿ ಸಾಮರಸ್ಯವಿಲ್ಲದೆ, ಕೊನೆಗೆ ವಿಚ್ಛೇದನದ ಮೊರೆ ಹೋಗುತ್ತದೆ. ಈ ಜೋಡಿ ವಿಚ್ಛೇದನ ಪಡೆದು ಬೇರೆ ಬೇರೆಯಾಗುವುದೇ, ಇಲ್ಲ ತಪ್ಪುತಿದ್ದಿಕೊಂಡು, ಒಟ್ಟಿಗೆ ಬಾಳುವುದೇ ಎಂಬ ಕುತೂಹಲವಿದ್ದರೆ ನೀವು ಖಂಡಿತ ಸಿನೆಮಾ ನೋಡಲೇಬೇಕು.

ನಾಯಕಿ ಪೂಜಾ ಅಭಿನಯವಂತೂ ಪ್ರೇಕ್ಷಕರನ್ನು ಕಾಡುತ್ತದೆ. ಇನ್ನು ನಾಯಕ ದೀಪಕ್ ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ವಕೀಲೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಯುಕ್ತ ಹೊರನಾಡು ಪಾತ್ರ ಕೂಡ ಪ್ರಮುಖವಾಗಿದ್ದು, ಸಂಯುಕ್ತ ಅಭಿನಯಕ್ಕೆ ಪ್ರೇಕ್ಷಕರು ಚಪ್ಪಾಳೆ ತಟ್ಟುತ್ತಾರೆ. ಸಿನೆಮಾದ ಮೊದಲಾರ್ಧದಲ್ಲಿ ಕಾಮಿಡಿ ಕಿಕ್ ಜೋರಾಗಿಯೇ ಇದೆ. ರಂಗಾಯಣ ರಘು ಮತ್ತು ಸಾಧುಕೋಕಿಲಾ ಕಾಮಿಡಿ ಮಾಡಿ ಮತ್ತೆ ಜನರ ಮನಸ್ಸು ಕದ್ದಿದ್ದಾರೆ. ಉತ್ತರ ಕರ್ನಾಟಕ ಶೈಲಿಯ ಭಾಷೆಯಲ್ಲಿ ರಂಗಾಯಣ ರಘು ಗಮನ ಸೆಳೆಯುತ್ತಾರೆ.

ಹಾಸ್ಯದ ಜೊತೆ ಜೊತೆಗೆ ರೊಮ್ಯಾನ್ಸ್ ಕಥೆಯನ್ನು ಹೇಳುತ್ತ ಸಾಗುವ ಸಿನೆಮಾ, ಮಧ್ಯಂತರದ ವೇಳೆಗೆ ಟ್ವಿಸ್ಟ್ ಇಟ್ಟು ಪ್ರೇಕ್ಷಕರಿಗೆ ಥ್ರಿಲ್ ನೀಡಿದೆ. ಸೆಕೆಂಡ್ ಹಾಫ್‌ನಲ್ಲಿ ಸಿನೆಮಾ ಗಂಭೀರತೆ ಪಡೆದುಕೊಳ್ಳುತ್ತ ಹೋಗುತ್ತದೆ. ಒಲಿದ ಮನಸ್ಸಿನ ಬದಲಾಗುವ ಭಾವನೆಗಳನ್ನು ಈ ಸಿನೆಮಾದ ಮೂಲಕ ತೆರೆಗೆ ತರಲಾಗಿದೆ. ಕ್ಲೈಮ್ಯಾಕ್ಸ್ ನಲ್ಲಿ ಟ್ವಿಸ್ಟ್ ಇದ್ದರೂ ಆ ಟ್ವಿಸ್ಟ್ ಏನು ಎಂಬುದನ್ನು ಪ್ರೇಕ್ಷಕರು ಮೊದಲೇ ಊಹಿಸಿಬಿಡುತ್ತಾರೆ. ಆ ಬಗ್ಗೆ ಇನ್ನೂ ಸ್ವಲ್ಪಗಮನ ಹರಿಸಿದ್ದರೆ, ಸಿನೆಮಾ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗುತ್ತಿತ್ತು. ಪ್ರಶಾಂತ್ ರಾಜಪ್ಪ ಸಂಭಾಷಣೆ ಇಷ್ಟವಾಗುತ್ತದೆ. ಅರ್ಜುನ್ ಜನ್ಯ ಸಂಗೀತ ಸಿನೆಮಾದ ಪ್ಲಸ್ ಪಾಯಿಂಟ್.

Similar News