×
Ad

​ಬಿಜೆಪಿ ಆಡಳಿತದಲ್ಲಿ ಹಿಂದೂಗಳು ಬಡವರಾಗಿದ್ದಾರೆ: ಮೆಹಬೂಬಾ ಮುಫ್ತಿ

Update: 2023-02-20 07:31 IST

ಜಮ್ಮು: ಬಿಜೆಪಿಗೆ ದೇಶ ಕಟ್ಟುವ ಇರಾದೆ ಇಲ್ಲ; ಬದಲಾಗಿ ಭಾರತವನ್ನು ಬಿಜೆಪಿ ರಾಷ್ಟ್ರವಾಗಿ ಪರಿವರ್ತಿಸುವುದು ಮಾತ್ರ ಅದರ ಉದ್ದೇಶ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ವಾಗ್ದಾಳಿ ನಡೆಸಿದ್ದಾರೆ. ಯುಪಿಎ ಅಧಿಕಾರಾವಧಿಯಲ್ಲಿ ಬಡತನ ರೇಖೆಯಿಂದ ಮೇಲಕ್ಕೆತ್ತಿದ್ದ 26 ಕೋಟಿ ಮಂದಿಯನ್ನು ಬಿಜೆಪಿ ಮತ್ತೆ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿನವರು) ವರ್ಗಕ್ಕೆ ತಳ್ಳಿದೆ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯೂ ಆದ ಮುಫ್ತಿ ಆಪಾದಿಸಿದರು.
ಜಮ್ಮು ಕಾಶ್ಮೀರವನ್ನು ಬಿಜೆಪಿ ತನ್ನ ಪ್ರಯೋಗಾಲಯವಾಗಿ ಪರಿವರ್ತಿಸಿ, ಪ್ರಯೋಗಗಳನ್ನು ಮಾಡುತ್ತಿದೆ. ಬಿಜೆಪಿ ಆಡಳಿತದಲ್ಲಿ ಹಿಂದೂಗಳು ಬಡವರಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

"ರೈಲ್ವೆ, ವಿಮಾನ ನಿಲ್ದಾಣ, ಬ್ಯಾಂಕ್ಗಳು ಸೇರಿದಂತೆ ಇಡೀ ದೇಶವನ್ನು ಬಿಜೆಪಿ ಮಾರಾಟ ಮಾಡಿದೆ. ಇದು ರಾಷ್ಟ್ರೀಯತೆ ಅಲ್ಲ. ಅವರು ಹಿಂದೂ- ಮುಸ್ಲಿಮರ ಬಗ್ಗೆ ಕೇವಲ ಮಾತನಾಡುತ್ತಾರೆ. ಯುಪಿಎ ಆಡಳಿತಾವಧಿಯಲ್ಲಿ 26 ಕೋಟಿ ಮಂದಿಯನ್ನು ಬಡತನ ರೇಖೆಗಿಂತ ಮೇಲೆತ್ತಲಾಗಿತ್ತು. ಬಿಜೆಪಿ ಅವರನ್ನು ಮತ್ತೆ ಬಿಪಿಎಲ್ ಮಟ್ಟಕ್ಕೆ ತಳ್ಳಿದೆ. ಇವರೆಲ್ಲ ಮುಸ್ಲಿಮರೇ? ಜಮ್ಮು ಕಾಶ್ಮೀರದಲ್ಲಿ ಮಾದಕ ವಸ್ತು ದಂಧೆಯ ಸಂತ್ರಸ್ತರು ಮುಸ್ಲಿಮರು ಮಾತ್ರವೇ ಎಂದು ಪ್ರಶ್ನಿಸಿದರು.

"ಜಮ್ಮು ಕಾಶ್ಮೀರ ಕೇವಲ ಪ್ರಯೋಗಾಲಯ. ಇಲ್ಲಿ ಪ್ರಯೋಗಗಳು ನಡೆಯುತ್ತವೆ. ಇಲ್ಲಿ ನಡೆದ ಪ್ರಾಯೋಗಿಕ ಅಂಶಗಳನ್ನು ಇಡೀ ದೇಶಕ್ಕೆ ಜಾರಿ ಮಾಡಲಾಗುತ್ತದೆ. ಜಮ್ಮು ಜನತೆಗೆ ನಾನು ಹೇಳಬಯಸುವುದೇನೆಂದರೆ, ಅವರು ಮುಸ್ಲಿಮರ ಹಿಂದೆ ಬಿದ್ದಿದ್ದಾರೆ ಎಂದು ಬಿಂಬಿಸಲು ಪ್ರಯತ್ನಿಸಿದರೆ, ಈ ಕನಸಿನಿಂದ ಹೊರಬನ್ನಿ. ನಾವು ದೇಶ ಕಟ್ಟಲು ಹೊರಟಿದ್ದೇವೆ ಎಂದು ಅವರು ಹೇಳುತ್ತಾರೆ. ಆದರೆ ಅವರಿಗೆ  ಯಾವುದೇ ದೇಶ ಕಟ್ಟುವ ಬಯಕೆ ಇಲ್ಲ. ಅವರ ಉದ್ದೇಶ ಬಿಜೆಪಿ ರಾಷ್ಟ್ರ ನಿರ್ಮಾಣ" ಎಂದು ಟೀಕಿಸಿದರು.

Similar News