ಮೇಘಾಲಯ ಸ್ಟೇಡಿಯಂನಲ್ಲಿ ಮೋದಿ ರ‍್ಯಾಲಿಗೆ ಅವಕಾಶ ನಿರಾಕರಣೆ
ತುರಾ: ಮೇಘಾಲಯ ಮುಖ್ಯಮಂತ್ರಿ ಕೊರ್ನಾಡ್ ಸಂಗ್ಮಾ ಅವರ ಸ್ವಕ್ಷೇತ್ರವಾದ ತುರಾ ದಕ್ಷಿಣ ಕ್ಷೇತ್ರದ ವ್ಯಾಪ್ತಿಯ ಪಿ.ಎ.ಸಂಗ್ಮಾ ಸ್ಟೇಡಿಯಂನಲ್ಲಿ ರಾಜ್ಯ ಬಿಜೆಪಿ ಆಯೋಜಿಸಲು ಉದ್ದೇಶಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ರ‍್ಯಾಲಿಗೆ ರಾಜ್ಯದ ಕ್ರೀಡಾ ಇಲಾಖೆ ಅವಕಾಶ ನಿರಾಕರಿಸಿದೆ.
ಈ ಘಟನೆಯಿಂದ ಕಂಗೆಟ್ಟಿರುವ ಬಿಜೆಪಿ, ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP), ತೃಣಮೂಲ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಜತೆ ಸೇರಿ, ರಾಜ್ಯದಲ್ಲಿ ಕೇಸರಿ ಪಕ್ಷದ ಅಲೆ ತಡೆಯಲು ಹುನ್ನಾರ ನಡೆಸಿದೆ ಎಂದು ಟೀಕಿಸಿದೆ.
ಫೆಬ್ರುವರಿ 24ರಂದು ಶಿಲ್ಲಾಂಗ್ ಮತ್ತು ತುರಾದಲ್ಲಿ ಚುನಾವಣಾ ಪ್ರಚಾರ ರ‍್ಯಾಲಿನಡೆಸಲು ಮೋದಿ ಉದ್ದೇಶಿಸಿದ್ದರು.
"ಕ್ರೀಡಾಂಗಣದಲ್ಲಿ ನಿರ್ಮಾ ಕಾರ್ಯ ಪ್ರಗತಿಯಲ್ಲಿರುವುದರಿಂದ ಮತ್ತು ಕಟ್ಟಡ ಸಾಮಗ್ರಿಗಳನ್ನು ಅಲ್ಲಿ ದಾಸ್ತಾನು ಮಾಡಿರುವುದರಿಂದ ಭದ್ರತಾ ಆತಂಕದ ಹಿನ್ನೆಲೆಯಲ್ಲಿ ಕ್ರೀಡಾ ಇಲಾಖೆ ಅನುಮತಿ ನಿರಾಕರಿಸಿದೆ. ಆದ್ದರಿಂದ Alotgre Cricket Stadium ನಲ್ಲಿ ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆ ಪರಿಶೀಲಿಸಲಾಗುತ್ತಿದೆ" ಎಂದು ಜಿಲ್ಲಾ ಚುನಾವಣಾಧಿಕಾರಿ ಸ್ವಪ್ನಿಲ್ ತೆಂಬೆ ಹೇಳಿದ್ದಾರೆ.
127 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಈ ಕ್ರೀಡಾಂಗಣಕ್ಕೆ ಶೇಕಡ 90ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ನೀಡಿದ್ದು, ಕಳೆದ ವರ್ಷದ ಡಿಸೆಂಬರ್ 16ರಂದು ಮುಖ್ಯಮಂತ್ರಿ ಇದನ್ನು ಉದ್ಘಾಟಿಸಿದ್ದರು.
ಎರಡು ತಿಂಗಳ ಹಿಂದೆ ಉದ್ಘಾಟನೆಯಾದ ಕ್ರೀಡಾಂಗಣವನ್ನು ಪ್ರಧಾನಿ ರ‍್ಯಾಲಿಗೆ ಅಪೂರ್ಣ ಹಾಗೂ ಅಲಭ್ಯ ಎಂದು ಹೇಗೆ ಪರಿಗಣಿಸಲಾಗುತ್ತದೆ? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಋತುರಾಜ್ ಸಿನ್ಹಾ ಪ್ರಶ್ನಿಸಿದ್ದಾರೆ.