‘ಮೊಗಾಂಬೋ ಖುಷ್ ಹುವಾ’ ಎಂದು ಹೇಳಿ ಅಮಿತ್ ಶಾ ಅವರನ್ನು ಕೆಣಕಿದ ಉದ್ಧವ್ ಠಾಕ್ರೆ

Update: 2023-02-20 07:28 GMT

ಮುಂಬೈ: ಚುನಾವಣಾ ಆಯೋಗವು ತನ್ನ ಪಕ್ಷದ ಹೆಸರು ಹಾಗೂ  ಅದರ ಚುನಾವಣಾ ಚಿಹ್ನೆಯನ್ನು ಕಸಿದುಕೊಂಡಿರುವುದರಿಂದ ತೀವ್ರ ಆಕ್ರೋಶಗೊಂಡಿರುವ ಶಿವಸೇನ ಬಣದ ಮುಖ್ಯಸ್ಥ ಉದ್ಧವ್ ಠಾಕ್ರೆ(Uddhav Thackeray), "ಮಿಸ್ಟರ್ ಇಂಡಿಯಾ" ಚಿತ್ರದ ಅತ್ಯಂತ ಪ್ರಸಿದ್ಧವಾದ ಡೈಲಾಗ್ ನಲ್ಲಿ ಒಂದಾದ 'ಮೊಗಾಂಬೋ ಖುಷ್ ಹುವಾ". ಎಂದು ಹೇಳುವ ಮೂಲಕ ಬಿಜೆಪಿ ಹಾಗೂ  ಅದರ ಮುಖ್ಯ ತಂತ್ರಗಾರ ಅಮಿತ್ ಶಾ ಅವರನ್ನು ಕೆಣಕಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರನ್ನೂ ಗುರಿಯಾಗಿಸಿ ವಾಗ್ದಾಳಿ ನಡೆಸಿರುವ ಠಾಕ್ರೆ,  1993 ರ ಸರಣಿ ಸ್ಫೋಟದ ಸಂದರ್ಭದಲ್ಲಿ ಶಿವಸೈನಿಕರು ಮುಂಬೈಯನ್ನು ರಕ್ಷಿಸಿದಾಗ, "ಹಿಂದುತ್ವದ ಬಗ್ಗೆ ಮಾತನಾಡುವವರು ಆಗ ಎಲ್ಲಿದ್ದರು? ಆಗ  ಅವರ ವಿಳಾಸ ಇರಲಿಲ್ಲ. ಈಗ ಅವರು 56 ಇಂಚಿನ ಎದೆಯ ಬಗ್ಗೆ ಹೆಮ್ಮೆಪಡುತ್ತಾರೆ. ಆಗ ಆ 56 ಇಂಚಿನ ಎದೆ ಎಲ್ಲಿತ್ತು? ಆಗ ಅವರು ಬೆವರುತ್ತಿದ್ದರು ”ಎಂದು ಅವರು ಹೇಳಿದರು.

"ನಿನ್ನೆ ಯಾರೋ (ಅಮಿತ್ ಶಾ) ಪುಣೆಗೆ ಬಂದಿದ್ದರು. ಅವರು ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಹೇಗಿದೆ ಎಂದು ಕೇಳಿದರು. ತುಂಬಾ ಒಳ್ಳೆಯ ದಿನ, ಏಕೆಂದರೆ ನಮ್ಮೊಂದಿಗೆ ಬಂದ ಗುಲಾಮರಿಗೆ ಶಿವಸೇನೆಯ ಹೆಸರು ಹಾಗೂ  ಚಿಹ್ನೆಯನ್ನು ನೀಡಲಾಗಿದೆ ಎಂದು ಆಗ ಯಾರೋ ಹೇಳಿದರು. ಅವರು (ಶಾ) 'ಬಹಳ ಒಳ್ಳೆಯದಾಯಿತು' ಎಂದರು. ಮೊಗಾಂಬೋ ಖುಷ್ ಹುವಾ' ಎಂದು ಠಾಕ್ರೆ ಹೇಳಿದರು.

"ಇವರೇ ಇಂದಿನ ಮೊಗಾಂಬೋಗಳು. ಮೂಲ ಮೊಗಾಂಬೊ ಅವರಂತೆ, ಜನರು ಪರಸ್ಪರ ಜಗಳವಾಡಬೇಕೆಂದು ಅವರು ಬಯಸುತ್ತಾರೆ, ಅದರಿಂದ ಅವರು ಅಧಿಕಾರವನ್ನು ಆನಂದಿಸಬಹುದು" ಎಂದು ಮುಂಬೈನ ಅಂಧೇರಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಠಾಕ್ರೆ ಹೇಳಿದರು.

Similar News