ಜೆಡಿಯು ತೊರೆದು ರಾಷ್ಟ್ರೀಯ ಲೋಕ ಜನತಾದಳ ಪಕ್ಷ ರಚಿಸಿದ ಉಪೇಂದ್ರ ಕುಶ್ವಾಹ

Update: 2023-02-20 11:04 GMT

ಹೊಸದಿಲ್ಲಿ: ಜನತಾದಳ (ಯುನೈಟೆಡ್) ದ ನಾಯಕ ಮತ್ತು ಸಂಸದೀಯ ಮಂಡಳಿಯ ಅಧ್ಯಕ್ಷ ಉಪೇಂದ್ರ ಕುಶ್ವಾಹಾ ಸೋಮವಾರ ಪಕ್ಷವನ್ನು ತ್ಯಜಿಸಿದ್ದು, ಹೊಸ ಪಕ್ಷ ರಾಷ್ಟ್ರೀಯ ಲೋಕ ಜನತಾ ದಳವನ್ನು ರಚಿಸಿದ್ದಾರೆ ಎಂದು ತಿಳಿದು ಬಂದಿದೆ.

"ನಾವು ಹೊಸ ಪಕ್ಷ ರಾಷ್ಟ್ರೀಯ ಲೋಕ ಜನತಾ ದಳವನ್ನು ರಚಿಸಲು ನಿರ್ಧರಿಸಿದ್ದೇವೆ. ಇದನ್ನು ಸರ್ವಾನುಮತದಿಂದ ನಿರ್ಧರಿಸಲಾಗಿದೆ. ನನ್ನನ್ನು ಅದರ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಪಕ್ಷವು ಕರ್ಪೂರಿ ಠಾಕೂರ್ ಅವರ ಪರಂಪರೆಯನ್ನು ಮುನ್ನಡೆಸುತ್ತದೆ ಎಂದು ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕಳೆದ ಎರಡು ದಿನಗಳಿಂದ ಪಾಟ್ನಾದಲ್ಲಿ ಸಭೆಗಳು ಮತ್ತು ಚರ್ಚೆಗಳು ನಡೆದಿವೆ ಮತ್ತು ನಾಯಕರು ಸರ್ವಾನುಮತದಿಂದ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಅವರು ಹೇಳಿದರು. ಕುಶ್ವಾಹಾ ಅವರು ವಿಧಾನ ಪರಿಷತ್ತಿನ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಕುಶ್ವಾಹ ಅವರು ಭಿನ್ನಾಭಿಪ್ರಾಯ ಹೊಂದಿದ್ದಾರೆ. ಅವರು ಫೆಬ್ರವರಿ 19, 20 ರಂದು ಎರಡು ದಿನಗಳ ಬಹಿರಂಗ ಅಧಿವೇಶನವನ್ನು ಕರೆದಿದ್ದು, ಇದರಲ್ಲಿ ಪಾಟ್ನಾದಲ್ಲಿ ಹಲವಾರು ಜೆಡಿಯು ಕಾರ್ಯಕರ್ತರು ಭಾಗವಹಿಸಿದ್ದರು. ಸಭೆಯಲ್ಲಿ ಮುಂದಿನ ರಾಜಕೀಯ ಕಾರ್ಯತಂತ್ರದ ಬಗ್ಗೆ ಪಕ್ಷದ ಕಾರ್ಯಕರ್ತರಿಂದ ಸಲಹೆಗಳನ್ನು ಕೇಳಿದ್ದರು.

"ಇಂದು ಹೊಸ ರಾಜಕೀಯ ಇನ್ನಿಂಗ್ಸ್ ಶುರುವಾಗಿದೆ, ಕೆಲವರನ್ನು ಹೊರತುಪಡಿಸಿ, ಜೆಡಿಯುನಲ್ಲಿ ಎಲ್ಲರೂ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಚುನಾಯಿತ ಸಹೋದ್ಯೋಗಿಗಳೊಂದಿಗೆ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಿತೀಶ್ ಕುಮಾರ್ ಆರಂಭದಲ್ಲಿ ಒಳ್ಳೆಯದನ್ನು ಮಾಡಿದರು ಆದರೆ ಬಳಿಕ ಅವರು ನಡೆದ ಹಾದಿ ಅವರಿಗೆ ಮತ್ತು ಬಿಹಾರಕ್ಕೆ ಕೆಟ್ಟದಾಗಿದೆ" ಎಂದು ಉಪೇಂದ್ರ ಕುಶ್ವಾಹ ಹೇಳಿದರು.

"ಸಿಎಂ ತಮ್ಮ ಸ್ವಂತ ಇಚ್ಛೆಯಿಂದ ವರ್ತಿಸುತ್ತಿಲ್ಲ, ಈಗ ಅವರು ತಮ್ಮ ಸುತ್ತಮುತ್ತಲಿನ ಜನರ ಸಲಹೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ, ಉತ್ತರಾಧಿಕಾರಿಯನ್ನು ಮಾಡುವ ಪ್ರಯತ್ನವನ್ನು ಅವರು ಎಂದಿಗೂ ಮಾಡದ ಕಾರಣ ಇಂದು ಅವರು ಸ್ವಂತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ" ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

Similar News