ಒಡಿಶಾದ ಕುಗ್ರಾಮದಲ್ಲಿರುವ ಅಂಗವಿಕಲ ವ್ಯಕ್ತಿಯ ಮನೆಬಾಗಿಲಿಗೆ ಪಿಂಚಣಿ ತಲುಪಿಸಿದ ಡ್ರೋನ್!‌

Update: 2023-02-20 11:40 GMT

ಭುಬನೇಶ್ವರ್: ಒಡಿಶಾದ ನುವಾಪಾದ ಜಿಲ್ಲೆಯ ಕುಗ್ರಾಮವಾದ ಭುಟಕಪಡಾ ಎಂಬಲ್ಲಿ ವಾಸಿಸುತ್ತಿರುವ ಅಂಗವಿಕಲ ವ್ಯಕ್ತಿ ಹೇತರಾಂ ಸತ್ನಾಮಿ ಪ್ರತಿ ತಿಂಗಳು ಸರಕಾರದಿಂದ ದೊರೆಯುವ ಪಿಂಚಣಿ ಪಡೆಯಲು ದಟ್ಟಾರಣ್ಯದ ನಡುವೆ 2 ಕಿಮೀ ದೂರ ನಡೆದುಕೊಂಡೇ ಹೋಗಬೇಕಿತ್ತು.

ಆದರೆ ಈ ತಿಂಗಳು ಅವರು ಈ ಶ್ರಮ ಪಡುವ ಅಗತ್ಯ ಬಿದ್ದಿಲ್ಲ. ಭಲೇಸ್ವರ್‌ ಪಂಚಾಯತ್‌ ವ್ಯಾಪ್ತಿಯ ಭುಟಕಪಡಾ ಗ್ರಾಮದ ಅವರ ಮನೆಬಾಗಿಲಿಗೆ ಡ್ರೋನ್‌ ಒಂದು ಪಿಂಚಣಿ ಹಣ ತಲುಪಿಸಿತ್ತು.

"ಸರಪಂಚೆ ಪಿಂಚಣಿ ಹಣವನ್ನು ಡ್ರೋನ್‌ ಸಹಾಯದಿಂದ ಕಳುಹಿಸಿದ್ದರು. ಇದು  ನನಗೆ ದೊಡ್ಡ ಸಮಾಧಾನ. ಇಲ್ಲದೇ ಇದ್ದರೆ ಪ್ರತಿ ತಿಂಗಳು ಗ್ರಾಮದಿಂದ ಸುಮಾರು 2 ಕಿಮೀ ದೂರವಿರುವ ಪಂಚಾಯತ್‌ ಕಚೇರಿಗೆ ಅರಣ್ಯ ಹಾದಿ ಮೂಲಕ ಹಾದುಹೋಗಬೇಕಿದೆ," ಎಂದು ಸರ್ಕಾರದ ಮಧು ಬಾಬು ಪಿಂಚಣಿ ಯೋಜನೆಯ ಫಲಾನುಭವಿಯಾಗಿರುವ ಸತ್ನಾಮಿ ಹೇಳಿದ್ದಾರೆ.

ಸತ್ನಾಮಿ ಎದುರಿಸುತ್ತಿದ್ದ ಸಮಸ್ಯೆ ಬಗ್ಗೆ ತಿಳಿದು ಡ್ರೋನ್‌ ಅನ್ನು ಆನ್‌ಲೈನ್‌ ಮೂಲಕ ಖರೀದಿಸಿದ್ದಾಗಿ ಸರಪಂಚೆ ಸರೋಜ್‌ ಅಗರ್ವಾಲ್‌ ತಿಳಿಸಿದ್ದಾರೆ. ಹೇತರಾಮ್‌ಗೆ ಹುಟ್ಟಿದಾಗಿನಿಂದ  ಅಂಗವಿಕಲತೆಯಿರುವುದರಿಂದ ಈ ಕ್ರಮಕೈಗೊಂಡಿದ್ದಾಗಿ ಅವರು ಹೇಳಿದ್ದಾರೆ.

ಸರಪಂಚೆಯ ಮುತುವರ್ಜಿಯಿಂದಲೇ ಇದು ಸಾಧ್ಯವಾಯಿತು, ಸರ್ಕಾರದಲ್ಲಿ ಈ ರೀತಿ ಪಿಂಚಣಿ ತಲುಪಿಸುವ ವ್ಯವಸ್ಥೆಯಿಲ್ಲ ಎಂದು ಬ್ಲಾಕ್‌ ಅಭಿವೃದ್ಧಿ ಅಧಿಕಾರಿ ಸುಬದರ್‌ ಪ್ರಧಾನ್‌ ಹೇಳಿದ್ದಾರೆ.

ಇದನ್ನೂ ಓದಿ: ಜೆಡಿಯು ತೊರೆದು ರಾಷ್ಟ್ರೀಯ ಲೋಕ ಜನತಾದಳ ಪಕ್ಷ ರಚಿಸಿದ ಉಪೇಂದ್ರ ಕುಶ್ವಾಹ

Similar News