×
Ad

ಪಾಂಗಾಳ ಶರತ್ ಶೆಟ್ಟಿ ಕೊಲೆ ಪ್ರಕರಣ: ಮತ್ತೋರ್ವ ಆರೋಪಿ ಬಂಧನ

Update: 2023-02-21 19:00 IST

ಉಡುಪಿ: ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಗಾಳದಲ್ಲಿ ಫೆ.5ರಂದು ನಡೆದ ಶರತ್ ಶೆಟ್ಟಿ (39) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಕಾಪು ಪೊಲೀಸರು ಫೆ.20ರಂದು ರಾತ್ರಿ ಪಣಂಬೂರು ಬೀಚ್ ಬಳಿ ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದ ಬಂಧಿತ ಆರೋಪಿಗಳ ಸಂಖ್ಯೆ ಐದಕ್ಕೇರಿದೆ.

ಬಂಧಿತನನ್ನು ಪಣಂಬೂರು ಕಲ್ಯ ನಿವಾಸಿ ನಾಗರಾಜ್ (19) ಎಂದು ಗುರುತಿಸಲಾಗಿದೆ. ಈತ ಈ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿದ್ದನು. ಈ ಪ್ರಕರಣದಲ್ಲಿ ಈಗಾಗಲೇ ದಿವೇಶ್ ಶೆಟ್ಟಿ, ಲಿಖಿತ್ ಕುಲಾಲ್, ಆಕಾಶ್ ಕರ್ಕೇರ, ಪ್ರಸನ್ನ ಶೆಟ್ಟಿ ಎಂಬವರನ್ನು ಬಂಧಿಸಿ, ಮೂವರನ್ನು ಒಂದು ವಾರಗಳ ಕಸ್ಟಡಿಗೆ ಪಡೆದುಕೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ನಾಗರಾಜ್ ಹಾಗೂ ಪೊಲೀಸ್ ಕಸ್ಟಡಿಯಲ್ಲಿದ್ದ ದಿವೇಶ್, ಲಿಖಿತ್ ಹಾಗೂ ಆಕಾಶ್‌ನನ್ನು ಕಾಪು ಪೊಲೀಸ್ ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ ನೇತೃತ್ವದ ಪೊಲೀಸ್ ತಂಡ ಇಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿತು. ನ್ಯಾಯಾಲಯವು ಈ ಎಲ್ಲ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. 

ಈ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕಟಪಾಡಿಯ ಯೋಗೀಶ್ ಆಚಾರ್ಯ ತಲೆಮರೆಸಿಕೊಂಡಿದ್ದು, ಇನ್ನು ಕೂಡ ಬಂಧನವಾಗಿಲ್ಲ. ಅದೇ ರೀತಿ ಈ ಪ್ರಕರಣದ ಆರೋಪಿಗಳಾಗಿರುವ ಭೂಗತ ಪಾತಕಿ ಕಲಿ ಯೋಗೀಶ್ ಮತ್ತು ಕೃತ್ಯಕ್ಕೆ ಸಹಕರಿಸಿದ ಮುಕೇಶ್ ಹಾಗೂ ಇತರರಿಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

Similar News