ಕೇಂದ್ರದಿಂದ 20 ಲಕ್ಷ ಟನ್ ಹೆಚ್ಚುವರಿ ಗೋಧಿ ಬಿಡುಗಡೆ

Update: 2023-02-22 03:07 GMT

ಹೊಸದಿಲ್ಲಿ: ಭಾರತದ ಆಹಾರ ನಿಗಮದಲ್ಲಿ ದಾಸ್ತಾನು ಇರುವ ಗೋಧಿಯ ಪೈಕಿ 20 ಲಕ್ಷ ಟನ್‌ಗಳನ್ನು ಇ- ಹರಾಜಿನ ಮೂಲಕ ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಪ್ರಕಟಿಸಿದೆ. ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಈಗಾಗಲೇ 30 ಲಕ್ಷ ಟನ್ ಗೋಧಿ ಮಾರಾಟ ಪ್ರಕ್ರಿಯೆ ನಡೆದಿದ್ದು, ಹೆಚ್ಚುವರಿಯಾಗಿ 20 ಲಕ್ಷ ಟನ್ ಬಿಡುಗಡೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.

ಮೀಸಲು ಬೆಲೆ ಇಳಿಸಿರುವುದು ಮತ್ತು ಹೆಚ್ಚುವರಿಯಾಗಿ 20 ಲಕ್ಷ ಟನ್ ಗೋಧಿ ಬಿಡುಗಡೆ ಮಾಡಿರುವುದು ಗೋಧಿ ಹಾಗೂ ಗೋಧಿಯ ಉತ್ಪನ್ನಗಳ ಬೆಲೆ ಇಳಿಸಿ ಗ್ರಾಹಕರಿಗೆ ನೆರವಾಗಲಿವೆ ಎಂದು ಆಹಾರ ಸಚಿವಾಲಯದ ಪ್ರಕಟಣೆ ಹೇಳಿದೆ.

ಎಫ್‌ಸಿಐ ಉನ್ನತ ಅಧಿಕಾರಿಗಳು, ಗೋಧಿ ಹಿಟ್ಟು ಗಿರಣಿಗಳ ಸಂಘದ ಪ್ರತಿನಿಧಿಗಳು, ಸಂಘ ಸಂಸ್ಥೆಗಳು ಮತ್ತು ಗೋಧಿಹಿಟ್ಟು ಹಾಗೂ ರವೆ ಉತ್ಪಾದಕರ ಜತೆ ಸಭೆ ನಡೆಸಿದ ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ, ಎಫ್‌ಸಿಐ ಹರಾಜು ಮಾಡಿದ ಗೋಧಿಯ ಸಾಗಾಣಿಕೆ ಬಗ್ಗೆ ಪರಾಮರ್ಶೆ ನಡೆಸಿದರು. ಗೋಧಿಯ ಮಾರುಕಟ್ಟೆ ಬೆಲೆ ಇಳಿಕೆ ಹಿನ್ನೆಲೆಯಲ್ಲಿ ಗೋಧಿ ಹಿಟ್ಟಿನ ಬೆಲೆ ಕಡಿಮೆ ಮಾಡುವಂತೆ ಅವರು ಗಿರಣಿದಾರರಿಗೆ ಸೂಚಿಸಿದರು.

ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಪ್ರಕಟಿಸಿದ ತಕ್ಷಣ ಗೋಧಿಯ ಬೆಲೆ ಇಳಿದಿದೆ ಎಂದು ಸಚಿವಾಲಯ ಹೇಳಿಕೊಂಡಿದೆ.

Similar News