ಇದು ಯಾವ ಜಗತ್ತಿನಲ್ಲಿ ಸರಿ?: ತಮ್ಮ ಖಾಸಗಿತನ ಆಕ್ರಮಿಸಿದ ಮಾಧ್ಯಮವನ್ನು ಪ್ರಶ್ನಿಸಿದ ಆಲಿಯಾ ಭಟ್

Update: 2023-02-22 13:38 GMT

ಮುಂಬೈ: ತಾವು ತಮ್ಮ ನಿವಾಸದಲ್ಲಿರುವಾಗ ತಮ್ಮ ಫೋಟೋಗಳನ್ನು ಕ್ಲಿಕ್ಕಿಸಿ ಪ್ರಕಟಿಸಿ ತಮ್ಮ ಖಾಸಗಿತನ್ನು ಅತಿಕ್ರಮಿಸಿದ ಮಾಧ್ಯಮ ಸಂಸ್ಥೆ Times Group ವಿರುದ್ಧ ಬಾಲಿವುಡ್‌ ನಟಿ ಆಲಿಯಾ ಭಟ್ ಕಿಡಿಕಾರಿದ್ದಾರೆ. ತಾವು ತಮ್ಮ ಮನೆಯಲ್ಲಿರುವಾಗ ತಮ್ಮತ್ತ ಗುರಿಯಾಗಿಸಿ ನೆರೆಯ ಕಟ್ಟಡದ ಟೆರೇಸಿನಿಂದ ಕ್ಯಾಮರಾ ದೃಷ್ಟಿ ನೆಟ್ಟಿದ್ದ ಇಬ್ಬರನ್ನು ಗಮನಿಸಿದ್ದಾಗಿ ಆಲಿಯಾ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

"ಯಾವ ಜಗತ್ತಿನಲ್ಲಿ ಇದು ಸರಿ ಮತ್ತು ಅನುಮತಿಸಲಾಗಿದೆ?" ಎಂದು ಅವರು ಬರೆದಿದ್ದಾರೆ. "ಇದು ಒಬ್ಬರ ಖಾಸಗಿತನದ ಬಹಿರಂಗ ಅತಿಕ್ರಮಣ. ನೀವು ದಾಟಲು ಸಾಧ್ಯವಿಲ್ಲದ ಒಂದು ಗೆರೆಯಿದೆ ಆದರೆ ಇಂದು ಎಲ್ಲ ಗೆರೆಗಳನ್ನು ದಾಟಲಾಗಿದೆ ಎಂದು ಹೇಳಬಹುದು!" ಎಂದು ಆಲಿಯಾ ಬರೆದಿದ್ದಾರೆ.

ಆಲಿಯಾ ಭಟ್  ಅವರ ಫೋಟೋಗಳನ್ನು ತನ್ನ ಇನ್‌ಸ್ಟಾಗ್ರಾಂ ಹ್ಯಾಂಡಲ್‌ನಲ್ಲಿ ETimes ಶೇರ್‌ ಮಾಡಿತ್ತಲ್ಲದೆ #ETimesExclusive ಎಂಬ ಹ್ಯಾಶ್‌ ಟ್ಯಾಗ್‌ ಅನ್ನೂ ಹಾಕಿಕೊಂಡಿತ್ತು.

"ಆಲಿಯಾ ಭಟ್ ಅವರು ಇಂದು ತಮ್ಮ ನಿವಾಸದಲ್ಲಿ ಮಜಾ ಮಾಡುತ್ತಿರುವುದು (ಚಿಲ್ಲಿಂಗ್)‌ ಕಾಣಿಸಿತು" ಎಂದೂ ಪೋಸ್ಟ್‌ ಮಾಡಲಾಗಿದೆ.

ಆಲಿಯಾ ಅವರ ಖಾಸಗಿತನವನ್ನು ಆಕ್ರಮಿಸಿದ ಈ ಪ್ರಕರಣದ ಕುರಿತು ಆಕ್ಷೇಪಿಸಿ ಹಲವು ಬಾಲಿವುಡ್‌ ಸೆಲೆಬ್ರಿಟಿಗಳು  ಬರೆದುಕೊಂಡಿದ್ದಾರೆ. "ನಿಜವಾಗಿಯೂ ಲಜ್ಜೆಗೇಡು" ಎಂದು ಅರ್ಜುನ್‌ ಕಪೂರ್‌ ಬರೆದಿದ್ದಾರೆ. ನಟಿ ಅನುಷ್ಕಾ ಶರ್ಮ ಕೂಡ ಎರಡು ವರ್ಷಗಳ ಹಿಂದೆ ತಮ್ಮ ಮಗಳ ಫೋಟೋಗಳನ್ನು ಕೆಲವು ಸುದ್ದಿತಾಣಗಳು ಪ್ರಕಟಿಸಿದ್ದನ್ನು ಉಲ್ಲೇಖಿಸಿದ್ದಾರೆ. ನಿರ್ದೇಶಕ ಕರಣ್‌ ಜೋಹರ್ ಕೂಡ ಪ್ರತಿಕ್ರಿಯಿಸಿ ಎಲ್ಲರಿಗೂ ಅವರ ಮನೆಗಳಲ್ಲಿ ಸುರಕ್ಷಿತವಾಗಿ ಇರುವ ಹಕ್ಕಿದೆ ಎಂದು ಬರೆದಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಆಲಿಯಾ ಅವರು ಮುಂಬೈ ಪೊಲೀಸರನ್ನೂ ಟ್ಯಾಗ್‌ ಮಾಡಿದ್ದಾರೆ. ಈ ಕುರಿತು ದೂರು ದಾಖಲಿಸುವಂತೆ ಮುಂಬೈ ಪೊಲೀಸರು ಅವರಿಗೆ ಸಲಹೆ ನೀಡಿದ್ದರೆನ್ನಲಾಗಿದೆ.

ಸೆಲೆಬ್ರಿಟಿಗಳ ಖಾಸಗಿತನವನ್ನು ಮಾಧ್ಯಮಗಳು ಅತಿಕ್ರಮಿಸಿದ್ದು ಇದೇ ಮೊದಲ ಬಾರಿಯಲ್ಲ. ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಾವಿನ ನಂತರ ಕೆಲ ಮಾಧ್ಯಮ ಸಂಸ್ಥೆಗಳು ನಟಿ ರಿಯಾ ಚಕ್ರವರ್ತಿ ಅವರ ನಿವಾಸವನ್ನು ಸುತ್ತುವರಿದು ನೆರೆಯ ನಿವಾಸಿಗಳಿಂದ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದರು.

ಇದನ್ನೂ ಓದಿ: ಗುಜರಾತ್: ಐವರು ಮುಸ್ಲಿಮರನ್ನು ಕಟ್ಟಿಹಾಕಿ ಥಳಿಸಿದ್ದು ಶಾಂತಿ ಸೌಹಾರ್ದತೆ ಕಾಪಾಡುವ ಕ್ರಮ ಎಂದು ಸಮರ್ಥಿಸಿದ ಎಸ್ಪಿ

Similar News