ಉಡುಪಿ ಜಿಲ್ಲೆಯಲ್ಲಿ ಗುಪ್ತವಾಗಿ ಮಲಹೊರುವ ಪದ್ಧತಿ ಜೀವಂತ?

ಪರೋಕ್ಷ ಮಲಹೊರುವ ಪದ್ಧತಿಗೆ ಸಿಲುಕಿಕೊಂಡಿರುವ ಕೊರಗ ಜನಾಂಗ

Update: 2023-02-23 05:17 GMT

► ಮಲಹೊರುವವರೇ ಇಲ್ಲ: ದಕ್ಷಿಣಕನ್ನಡ, ಉಡುಪಿ ಜಿಲ್ಲಾಡಳಿತಗಳ ವರದಿ

► ಪರೋಕ್ಷ ಮಲಹೊರುವ ಪದ್ಧತಿಗೆ ಸಿಲುಕಿಕೊಂಡಿರುವ ಕೊರಗ ಜನಾಂಗ

► ಮಲಹೊರುವವರ ಸಮೀಕ್ಷೆಯ ಕುರಿತು ಕೊರಗ ಜನಾಂಗಕ್ಕೆ ಮಾಹಿತಿಯೇ ಇಲ್ಲ

ಉಡುಪಿ/ಮಂಗಳೂರು: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲ ಹೊರುವ ಪದ್ಧತಿಯಿಲ್ಲ ಎಂದು ಒಂದೆಡೆ ಜಿಲ್ಲಾಡಳಿತ ಸ್ಪಷ್ಟೀಕರಣ ನೀಡಿದೆಯಾದರೂ, ಉಭಯ ಜಿಲ್ಲೆಗಳಲ್ಲಿ ಗುಪ್ತವಾಗಿ ಮಲಹೊರುವ ಪದ್ಧತಿ ಜೀವಂತವಿದೆ ಎಂದು ಪೌರ ಕಾರ್ಮಿಕ ಸಂಘಟನೆಗಳ ಮುಖಂಡರು ಆರೋಪಿಸುತ್ತಿದ್ದಾರೆ.

ಮಲಹೊರುವ ಪದ್ಧತಿ ಇಂದಿಗೂ ಜೀವಂತವಾಗಿದೆ ಎಂದು ಉಡುಪಿ ಪೌರಕಾರ್ಮಿಕ ಸಂಘಟನೆಯ ಮುಖಂಡರಾದ ನಾಗರಾಜುರವರು ಒಪ್ಪಿಕೊಳ್ಳುತ್ತಾರೆ. ಇದಕ್ಕೆ ತಮ್ಮ ದಿನ ನಿತ್ಯದ ಬದುಕಿನ ಅನುಭವವನ್ನೇ ನಿದರ್ಶನವಾಗಿ ನೀಡುತ್ತಾರೆ.

‘‘ಇಂದಿಗೂ ಉಡುಪಿ ಜಿಲ್ಲೆಯಲ್ಲಿ ಮಲಹೊರುವ ಪದ್ಧತಿ ಜೀವಂತವಾಗಿದೆ. ಅವರನ್ನು ಗುರುತಿಸಿ ಅವರಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸಿಕೊಡಬೇಕು.  ಕುಂದಾಪುರ ಪಟ್ಟಣವೊಂದರಲ್ಲೇ 20ರಿಂದ 30 ಮ್ಯಾನುವಲ್ ಸ್ಕ್ಯಾವೆಂಜರ್ಸ್‌ ಇದ್ದಾರೆ. ಈ ಕುರಿತು ಯಾರಾದರೂ ಸರ್ವೇ ಮಾಡಲು ಬಂದರೆ ಖುದ್ದು ನಾವೇ ಹುಡುಕಿಕೊಡುತ್ತೇವೆ’’ ಎಂದು ಅವರು ಹೇಳುತ್ತಾರೆ.

‘‘ನಾನು ಸಕ್ಕಿಂಗ್ ಯಂತ್ರದಲ್ಲೇ ಕೆಲಸ ಮಾಡುವುದು.  70ರಿಂದ 80 ಅಡಿ ದೂರದವರೆಗೂ ಮಿಷಿನ್‌ನಲ್ಲಿ ಸ್ವಚ್ಛ ಮಾಡಬಹುದು. ಅದಕ್ಕಿಂತಲೂ ದೂರದಲ್ಲಿದ್ದರೆ ಯಂತ್ರ ಎಳೆಯುವುದಿಲ್ಲ. ನಮ್ಮ ಉಡುಪಿ ಕಡೆಯಲ್ಲಿ ಶೌಚಾಲಯದ ಗುಂಡಿಗಳ ಮೇಲೆ ಯಾವುದೇ ರೀತಿಯ ಶೀಲ್ಡ್ ಮಾಡದೆ ಚಪ್ಪಡಿ ಎಳೆದು ಮಣ್ಣು ತುಂಬಿಸಿರುತ್ತಾರೆ. ಆ ಮಣ್ಣು ದಿನ ಕಳೆದಂತೆ ಗುಂಡಿಯ ಒಳಕ್ಕೆ ಹೋಗುತ್ತದೆ. ನೀರಿನ ಅಂಶವಿದ್ದರೆ ಮಾತ್ರ ನಮ್ಮ ವಾಹನ ಎಳೆಯುತ್ತದೆ. ಮಣ್ಣು ಮಿಶ್ರಿತವಾಗಿದ್ದರೆ ಎಳೆಯುವುದಿಲ್ಲ. ಅಂತಹ ಸಂದರ್ಭದಲ್ಲಿ ನಾವು ಬಿಟ್ಟು ಬರುತ್ತೇವೆ. ಮಣ್ಣು ಮಿಶ್ರಿತವಾಗಿ ಆಗದ ಸಂದರ್ಭದಲ್ಲಿ ಪುರಸಭೆಯಿಂದ ಹಣ ವಾಪಸ್ ಕೊಡುತ್ತಾರೆ. ಹಣ ವಾಪಸ್ ಕೊಟ್ಟ ಮನೆಗಳಿಗೆ ಇವತ್ತೂ ಹೋಗಿ ನೋಡಿದರೆ ಅವರು ಹೊಸ ಶೌಚಗುಂಡಿಯನ್ನು ಮಾಡಿರಲ್ಲ, ಬದಲಿಗೆ ಅದೇ ಗುಂಡಿಯನ್ನು ಮ್ಯಾನುವಲ್ ಸ್ಕ್ಯಾವೆಂಜರ್ ಕಡೆಯಿಂದ ಶುಚಿ ಮಾಡಿಸಿಕೊಂಡಿರುತ್ತಾರೆ. ನಮ್ಮ ನಗರ ಸಭೆಯ ದಾಖಲೆಗಳೇ ಇದನ್ನು ಹೇಳುತ್ತದೆ’’ ಎಂದು ಅವರು ವಿವರಿಸುತ್ತಾರೆ.  ಮಲಹೊರುವ ಪದ್ಧತಿಯ ನಿಷೇಧ ಮತ್ತು ಪುನರ್ವಸತಿ ಕಾಯ್ದೆ ಜಾರಿಯಾದ ಬಳಿಕ 2013ರಲ್ಲೇ ಸಮೀಕ್ಷೆಗಳು ಆರಂಭಗೊಂಡವು. ಆದರೆ ಸಮೀಕ್ಷೆಗಳಲ್ಲಿ ಲೋಪಗಳಿದ್ದ ಕಾರಣದಿಂದ ಮರು

ಸರ್ವೇಗೆ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ 2018 ರಿಂದ 2021ರವರೆಗೆ ಕರ್ನಾಟಕ ರಾಜ್ಯಾದ್ಯಂತ ಮಲ ಹೊರುವವರ ಸಮೀಕ್ಷೆ ನಡೆದಿದೆ. ಸಮೀಕ್ಷೆಯಲ್ಲಿ 5,080 ಜನ ಮಲಹೊರುವವರು ರಾಜ್ಯದಲ್ಲಿದ್ದಾರೆ ಎಂದು ಗುರುತಿಸಿ ಅಧಿಕೃತವಾಗಿ ಘೋಷಿಸಲಾಗಿದೆ. ಆದರೆ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಲ ಹೊರುವವರೇ ಇಲ್ಲ ಅನ್ನುವುದು ಈಗ ನಡೆದಿರುವ ಸಮೀಕ್ಷೆಯೂ ಲೋಪದಿಂದ ಕೂಡಿದೆ ಎನ್ನುವುದನ್ನು ಸಾಬೀತು ಪಡಿಸುತ್ತಿದೆ ಎಂದು ಕಾರ್ಮಿಕ ಮುಖಂಡರು ಆರೋಪಿಸುತ್ತಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಡಿ ಗ್ರಾಮದಲ್ಲಿ ಶೌಚದ ಗುಂಡಿಗೆ ಬಿದ್ದು ವ್ಯಕ್ತಿ ಸತ್ತು ಹೋಗಿದ್ದು ಪುರಸಭೆಯಿಂದ ಹತ್ತು ಲಕ್ಷ ರೂ. ಪರಿಹಾರ ನೀಡಿರುವ ಪ್ರಕರಣ ನಡೆದಿದೆ. ಅದೇ ರೀತಿಯಲ್ಲಿ ದ.ಕ. ಜಿಲ್ಲೆಯಲ್ಲೂ ಸಾವಿನ ಪ್ರಕರಣ ನಡೆದು ಪರಿಹಾರ ನೀಡಿದೆ. ಇಷ್ಟಾದರೂ ಮಲಹೊರುವವರು ಇಲ್ಲ ಎಂದು ವರದಿ ನೀಡಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಪೌರ ಕಾರ್ಮಿಕ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಹಿತಿಯೇ ಇಲ್ಲ:

2018ರಿಂದ 2021ರವರೆಗೆ ರಾಜ್ಯದಲ್ಲಿ ನಡೆದಿರುವ ಮಲಹೊರುವ ವರ ಸಮೀಕ್ಷೆ ಬಗ್ಗೆ ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿರುವ ಕೊರಗ ಸಮುದಾಯಕ್ಕೆ ಸಫಾಯಿ ಕರ್ಮಚಾರಿ ಮತ್ತು ಮಲಹೊರುವವರ ಸಮೀಕ್ಷೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಯಾರೊಬ್ಬರ ಬಳಿಯೂ ಮ್ಯಾನುವಲ್ ಸ್ಕ್ಯಾವೆಂಜರ್ ಅಥವಾ ಸಫಾಯಿ ಕರ್ಮಚಾರಿಯ ಗುರುತಿನ ಚೀಟಿ ಇಲ್ಲ. ಸಮುದಾಯದ ಜನರಿಗೆ ಮಾತ್ರವಲ್ಲ, ಸಮುದಾಯದ ಮುಖಂಡರಿಗೂ ಈ ಬಗ್ಗೆ ಮಾಹಿತಿ ಇಲ್ಲ. ಮಲ ಹೊರುವ ಮತ್ತು ಸ್ವಚ್ಛತಾ ಕೆಲಸಗಳಿಗೆ ಸಂಬಂಧಿಸಿದಂತೆ ಸಮುದಾಯದಲ್ಲಿ ಅಧ್ಯಯನ ನಡೆಸಿದರು ಐ.ಪಿ.ಡಿ. ಸಾಲಪ್ಪರವರು ಮಾತ್ರ. ಆ ಬಳಿಕ ಯಾವುದೇ ಸಮೀಕ್ಷೆಗಳು, ಅಧ್ಯಯನಗಳು ನಡೆದಿಲ್ಲ ಎನ್ನುತ್ತಾರೆ ಸಮುದಾಯದ ಮುಖಂಡರು.

ಕುಂದಾಪುರದಲ್ಲಿ ಕೊರಗರ ಕಾಲನಿಯ ನಿವಾಸಿಯಾಗಿರುವ ಆಶಾರವರನ್ನು ಸಫಾಯಿ ಕರ್ಮಚಾರಿ ಆಯೋಗದ ವತಿಯಿಂದ ಸರ್ವೇ ಆಗಿದೆಯೇ ಎಂದು ಕೇಳಿದರೆ ಏಕಾಏಕಿ ಆಶ್ಚರ್ಯಕ್ಕೆ ಒಳಗಾದರು. ಆ ತರದವರು ಯಾರು ಬಂದೂ ಇಲ್ಲ, ನಮ್ಮನ್ನು ಕೇಳಿಯೂ ಇಲ್ಲ ಎನ್ನುತ್ತಾರೆ. ‘‘ಸಫಾಯಿ ಕರ್ಮಚಾರಿಗಳ ಬಗ್ಗೆ ನಗರಸಭೆಯಲ್ಲಿ ದೊಡ್ಡದಾದ

ಬೋರ್ಡ್ ಮಾತ್ರ ಹಾಕಿದ್ದಾರೆ. ಅದರಲ್ಲಿ ನಮಗೆ ಎಂಥಾ ಸವಲತ್ತುಗಳು ಇದೆ ಎಂದು ಅದರಲ್ಲಿ ಹಾಕಿದ್ದಾರೆ. ಆದರೆ ಯಾವ ಸೌಲಭ್ಯಗಳೂಸಿಗುತ್ತಿಲ್ಲ. ಸವಲತ್ತುಗಳ ಮಾಹಿತಿ ಕೊಟ್ಟರೆ ಡ್ರೈನೇಜ್‌ನಲ್ಲಿ ಕೆಲಸ ಮಾಡಲು ಜನ ಬೇಕಲ್ಲ? ಡ್ರೈನೇಜ್ ಕೆಲಸ ಮಾಡಲು ಕೊರಗರನ್ನು ಬಿಟ್ಟು ಬೇರೆ ಯಾರು ಬರುವುದಿಲ್ಲ’’ ಎನ್ನುತ್ತಾರೆ ಉಡುಪಿ ನಗರಸಭೆಯ ಯುಡಿಜಿ ವಿಭಾಗದಲ್ಲಿ ಗುತ್ತಿಗೆ ಪೌರಕಾರ್ಮಿಕರಾಗಿರುವ ಪ್ರಸಾದ್.

ಒಳಚರಂಡಿ ವಿಭಾಗದ ಪೌರಕಾರ್ಮಿಕರಿಗೆ ಇಲ್ಲ ವೃತ್ತಿ ಖಾಯಂ

ಒಳಚರಂಡಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರು ಬಹುತೇಕ ಕೊರಗ ಸಮುದಾಯದವರು. ಒಳಚರಂಡಿ ಸ್ವಚ್ಛಗೊಳಿಸುವ ಯಂತ್ರ ಗಳು ಬರುವುದಕ್ಕೂ ಪೂರ್ವದಲ್ಲಿ ಮ್ಯಾನ್‌ಹೋಲ್ ಒಳಗೆ ಇಳಿದು ಕೆಲಸ ಮಾಡುತ್ತಿದ್ದವರು ಇದೇ ಒಳಚರಂಡಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದವರು. ಇಷ್ಟು ಮಾತ್ರವಲ್ಲದೇ ಮಲದ ಗುಂಡಿಯನ್ನು ಸ್ವಚ್ಛಗೊಳಿಸುತ್ತಿದ್ದವರು ಇದೇ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೊರಗರೇ ಆಗಿದ್ದರು. ಆದರೆ ಇದುವರೆಗೂ ಒಳಚರಂಡಿ ವಿಭಾಗದಲ್ಲಿ ನೇರ ನೇಮಕಾತಿಯೂ ಆಗಿಲ್ಲ, ನೇರ ಪಾವತಿಯೂ ಆಗಿಲ್ಲ. ಕಾರಣ ಕೇಳಿದರೆ ‘ನೀವು ಒಳಚರಂಡಿ ವಿಭಾದ ಪೌರಕಾರ್ಮಿಕರಾಗಿದ್ದು ನಗರ ಸಭೆಯ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಉಡುಪಿ ನಗರಸಭೆಯಲ್ಲಿ ಹೇಳುತ್ತಿದ್ದಾರೆ ಎಂದು ಕಾರ್ಮಿಕರು ಆರೋಪಿಸುತ್ತಿದ್ದಾರೆ. 

ಉಡುಪಿ ನಗರದ ಕಾಡುಬೆಟ್ಟು, ಕುಂದಾಪುರ, ಬಾರ್ಕೂರು ಕಾಲನಿಯಲ್ಲಿ ಕೊರಗ ಜನಾಂಗದವರು ವಾಸವಾಗಿದ್ದಾರೆ. ಇಲ್ಲಿನ ಜನರೇ ಉಡುಪಿ ಜಿಲ್ಲೆಯಾದ್ಯಂತ ಮಲದಗುಂಡಿಗಳನ್ನು ಸ್ವಚ್ಛಗೊಳಿಸು ತ್ತಿದ್ದವರು, ಜೊತೆಗೆ ಸರಕಾರ ನಿರ್ಮಿಸಿರುವ ಮ್ಯಾನ್‌ಹೋಲ್‌ಗಳಲ್ಲಿ ಇಳಿದು ಕೆಲಸ ಮಾಡುತ್ತಿದ್ದವರು. ಸುಮಾರು 40 ವರ್ಷಕ್ಕೂ ಹೆಚ್ಚಿನ ಕಾಲದಿಂದ ಪೌರಕಾರ್ಮಿಕರಾಗಿ ದುಡಿಯುತ್ತಿದ್ದರು. ಇಂದಿಗೂ ಗುತ್ತಿಗೆ ಆಧಾರದಲ್ಲೇ ದುಡಿಯುತ್ತಿದ್ದಾರೆ ಎಂದು ಕೊರಗ ಮುಖಂಡರು ಆರೋಪಿಸುತ್ತಿದ್ದಾರೆ.

ಉಡುಪಿ ಜಿಲ್ಲೆಯ ಬಾರ್ಕೂರಿನವರಾದ 60 ವರ್ಷದ ಭಾಸ್ಕರ್‌ರವರು ಉಡುಪಿ ನಗರಸಭೆಯಲ್ಲಿ 40 ವರ್ಷದಿಂದ ಒಳಚರಂಡಿ ವಿಭಾಗದಲ್ಲಿ ಗುತ್ತಿಗೆ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಆಯಸ್ಸು ಮುಗಿದರೂ ಇವರ ವೃತ್ತಿ ಖಾಯಂ ಆಗಲಿಲ್ಲ. ಒಳಚರಂಡಿ ವಿಭಾದಲ್ಲಿ ಈಗ 15 ಸಾವಿರ ರೂ. ವೇತನ ಇದೆ. ಭಾಸ್ಕರ್‌ರವರ ಜೀವಿತ ಅವಧಿಯ ಗರಿಷ್ಠ ಸಂಪಾದನೆ 15 ಸಾವಿರ ರೂ.ಮಾತ್ರ ಆಗಿರುತ್ತದೆ.

ಇಲ್ಲಿನ 55 ವರ್ಷದ ಜಗದೀಶ್‌ರವರು ಸುಮಾರು 20 ವರ್ಷ ಡ್ರೈನೇಜ್‌ನಲ್ಲಿ ಕೆಲಸ ಮಾಡಿದ್ದಾರೆ. ನಂತರ ಸಕ್ಕಿಂಗ್ ಮಿಷನ್ ವಿಭಾಗದಲ್ಲಿ 10 ವರ್ಷ ಕೆಲಸ ಮಾಡಿದ್ದಾರೆ. ಸದ್ಯ ಗುಡಿಸುವ ಮತ್ತು ಗಾಡಿಗಳಿಗೆ ಲೋಡ್ ಮಾಡುವ ಪೌರಕಾರ್ಮಿಕರಾಗಿ ಕೆಲಸವನ್ನು ಮಾಡುತ್ತಿ ದ್ದಾರೆ. ಆದರೆ ಇದುವರೆಗೂ ಇವರ ವೃತ್ತಿ ಖಾಯಂಗೊಂಡಿಲ್ಲ. ಉಡುಪಿ ನಗರದಲ್ಲಿರುವ ಹಲವಾರು ಸಂಘ ಸಂಸ್ಥೆಗಳು ಜಗದೀಶ್‌ರವರು ಅತ್ಯುತ್ತಮ ಕೆಲಸಗಾರನೆಂದು ಬಣ್ಣಿಸಿ ಸನ್ಮಾನಗಳನ್ನು ಮಾಡಿವೆ. ಅಷ್ಟಾಗಿಯೂ ವೃತ್ತಿ ಸಂಬಂಧಿಸಿದ ಸೌಕರ್ಯಗಳನ್ನು ಕೊಡಿಸುವ ನಿಟ್ಟಿನಲ್ಲಿ ಯಾರು ಮುಂದಾಗಿಲ್ಲ.

ಇದೇ ಪ್ರದೇಶದಲ್ಲಿ ವಾಸಿಸುತ್ತಿರುವ 53 ವರ್ಷದ ಸಂಜೀವರವರು ಸಹ ಒಳಚರಂಡಿ ಪೌರಕಾರ್ಮಿರಾಗಿ 25 ವರ್ಷಗಳಿಗೂ ಮಿಗಿಲಾಗಿ ಕೆಲಸ ಮಾಡುತ್ತಿದ್ದಾರೆ. ಇಂದಿಗೂ ಗುತ್ತಿಗೆ ನೌಕರರಾಗಿಯೇ ದುಡಿಯುತ್ತಿದ್ದಾರೆ. ಇವರು ಸಹ ಈ ಹಿಂದೆ ಶೌಚಾಲಯದ ಗುಂಡಿಗಳಲ್ಲಿನ ಮಲವನ್ನು ಬಕೆಟ್‌ನಲ್ಲಿ ಹೊರಗೆ ತೆಗೆದು ಹಾಕುವಂತಹ ಕೆಲಸಗಳನ್ನು ಮಾಡಿದ್ದಾರೆ. ಈಗ ಕಾನೂನಿಗೆ ವಿರುದ್ಧ ಅನ್ನುವ ಕಾರಣ ಈ ಕೆಲಸಗಳನ್ನು ಮಾಡುವುದು ಬಿಟ್ಟಿದ್ದಾರೆ.

ಉಡುಪಿಯ ನಿಟ್ಟೂರಿನಲ್ಲಿರುವ ಒಳಚರಂಡಿ ಮತ್ತು ಸಂಸ್ಕರಣಾ ಘಟಕದಲ್ಲೂ ಕೊರಗ ಸಮುದಾಯದ ಯುವಕರು ಕೆಲಸ ಮಾಡುತ್ತಿ ದ್ದಾರೆ. ಇಲ್ಲಿ ಆಸ್ಪತ್ರೆ, ಹೊಟೇಲ್, ಅಪಾರ್ಟ್‌ಮೆಂಟ್, ನಗರದ ಒಳಚರಂಡಿಯ ಕೊಳಚೆ ನೀರು ಸೇರಿದಂತೆ ಮನೆಗಳ ಶೌಚಾಲಯದ ಗುಂಡಿಗಳನ್ನು ಸ್ವಚ್ಛಗೊಳಿಸುವ ಸಕ್ಕಿಂಗ್ ಮಿಷನ್‌ನಲ್ಲಿರುವ ಮಲವನ್ನು ತಂದು ಇಲ್ಲಿಯೇ ಶುದ್ಧೀಕರಿಸುತ್ತಾರೆ. ಶುದ್ಧೀಕರಿಸಿದ ನೀರನ್ನು ಸಮುದ್ರಕ್ಕೆ ಬಿಡಲಾಗುತ್ತಿದೆ. ಪೌರಕಾರ್ಮಿಕರಿಗಿಂತಲೂ ನಮ್ಮ ಕೆಲಸ ತುಂಬಾ ಆಪಾಯಕಾರಿ, ಒಳಚರಂಡಿಯಲ್ಲಿ ಕಟ್ಟಿಕೊಂಡರೆ ಮಿಷನ್ ಮೂಲಕ

ಸ್ವಚ್ಛ ಮಾಡುತ್ತಾರೆ. ಇಲ್ಲಿ ಎಲ್ಲಾ ಕಡೆಯ ಗಲೀಜು ಬರುತ್ತವೆ. ಅದರಲ್ಲೂ ಮಹಿಳೆಯರ ಪ್ಯಾಡ್‌ಗಳು ಹೆಚ್ಚಾಗಿ ಬರುತ್ತದೆ. ಅದೇ ಒಂದು ಲಾರಿಯಷ್ಟು ಆಗುತ್ತದೆ ಎಂದು ವಿವರಿಸುತ್ತಾರೆ ಇಲ್ಲಿನ ಕಾರ್ಮಿಕರು.

ವೃತ್ತಿಯಲ್ಲೂ ಜಾತಿ ತಾರತಮ್ಯ

ನಿರಂತರವಾಗಿ ನಡೆದ ಚಳವಳಿಗಳಿಂದಾದ ಗುತ್ತಿಗೆ ಪದ್ಧತಿ ರದ್ದು, ಯಾಂತ್ರೀಕರಣಗೊಳ್ಳುತ್ತಿರುವ ಒಳಚರಂಡಿ ವ್ಯವಸ್ಥೆಯಿಂದ ಕರಾವಳಿ ಕರ್ನಾಟಕದ ಅನ್ಯ ಜಾತಿಯವರು ಪೌರಕಾರ್ಮಿಕ ವೃತ್ತಿಯನ್ನು ಪಡೆದುಕೊಂಡಿದ್ದಾರೆ. ಉತ್ತರ ಕರ್ನಾಟಕದಿಂದ ವಲಸೆ ಬಂದಿರುವ ಜನರು ಉಡುಪಿ ಮತ್ತು ಮಂಗಳೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೌರಕಾರ್ಮಿಕ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವುದನ್ನು ಕಾಣಬಹುದಾಗಿದೆ.

ಕರಾವಳಿ ಕರ್ನಾಟಕದ ಪ್ರಬಲ ಜಾತಿಯವರು ಸಹ ಪೌರಕಾರ್ಮಿಕರಾಗಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಆದರೆ ಇವರು ಸ್ವಚ್ಛತೆ ಕೆಲಸವನ್ನು ಮಾಡುವುದಿಲ್ಲ. ಪೌರಕಾರ್ಮಿಕ ವೃತ್ತಿಗೆ ಸೇರಿ ಬಳಿಕ ತಮ್ಮ ಜಾತಿ ಬಲ, ಹಣದ ಬಲದಿಂದ ಕಚೇರಿ ಕೆಲಸಗಳಿಗೆ ವರ್ಗಾಯಿಸಿಕೊಂಡು ಸರಕಾರಿ ಕೆಲಸದ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಇಷ್ಟೆಲ್ಲಾ ಬದಲಾವಣೆಗಳು ಆದರೂ ಒಳಚರಂಡಿ ಮತ್ತು ಶೌಚಗುಂಡಿಯನ್ನು ಕ್ಲೀನ್ ಮಾಡುವ ಸಕ್ಕಿಂಗ್ ಮಿಷನ್‌ಗಳಲ್ಲಿ ಕಾರ್ಯನಿರ್ವಹಿಸುವುದು ಕೊರಗರು ಮಾತ್ರ ಆಗಿದ್ದಾರೆ.

ಎಲ್ಲಾ ಸಮುದಾಯದವರು ಮೀಸಲಾತಿಯಲ್ಲಿ ಕೆಲಸ ಪಡೆದುಕೊಳ್ಳುತ್ತಾರೆ. ನಮ್ಮ ಕುಂದಾಪುರದಲ್ಲಿ ಬ್ರಾಹ್ಮಣ ಸಮುದಾಯ ಸಮೇತ ಪೌರಕಾರ್ಮಿಕ ವೃತ್ತಿಯನ್ನು ಪಡೆದುಕೊಂಡಿದ್ದಾರೆ. ಆದರೆ ಸ್ವಚ್ಛತಾ ಕೆಲಸವನ್ನು ಮಾತ್ರ ಅವರು ನಿರ್ವಹಿಸುತ್ತಿಲ್ಲ. ಪೌರಕಾರ್ಮಿಕ ಹುದ್ದೆ ಇರುವುದು ಸ್ವಚ್ಛತಾ ಕೆಲಸಕ್ಕೆ, ಆ ಪೌರಕಾರ್ಮಿಕರನ್ನು ಕಚೇರಿ ಸಿಬ್ಬಂದಿಗೆ ನೇಮಿಸಿಕೊಂಡರೆ ಈ ವೃತ್ತಿ ಮಾಡುವವರು ಯಾರು? ಈಗ ಸರಕಾರವು 700 ಜನರಿಗೆ ಒಬ್ಬ ಪೌರಕಾರ್ಮಿಕ ನೇಮಕ ಎಂದು ಹೇಳಿದೆ.

700 ಜನರ ಕಸವನ್ನು ಒಬ್ಬ ಪೌರಕಾರ್ಮಿಕ ವಿಂಗಡಿಸುವುದೇ ಅವೈಜ್ಞಾನಿಕ. ಇತರ ಸಮುದಾಯದವರು ನಿಗದಿತ ಕೆಲಸ ನಿರ್ವಹಿಸದೇ ಇರುವುದರಿಂದ ಕೊರಗ ಸಮುದಾಯದ ಪೌರ ಕಾರ್ಮಿಕರ ಮೇಲೆ ಹೆಚ್ಚಿನ ಹೊರೆ ಬಿಳುತ್ತದೆ. ಇದಕ್ಕೆ ಸಾಕ್ಷಿ ಕುಂದಾಪುರದ ಪುರಸಭೆಯಲ್ಲಿ ಇದೆ. ನಾವು ಜಿಲ್ಲಾಧಿಕಾರಿಗಳೂ ಮನವಿ ಮಾಡಿದ್ದೇವೆ. ಸರ್ಕಾರದವರಿಗೂ ಮನವಿ ಮಾಡಿದ್ದೇವೆ. ನಮ್ಮ ಶಾಸಕರಿಗೂ ಮನವಿ ಮಾಡಿದ್ದೇವೆ. ಆದರೆ ಯಾರು ಇದಕ್ಕೆ ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ಉಡುಪಿ ಪೌರಕಾರ್ಮಿಕ ಮುಖಂಡ ರಾದ ನಾಗರಾಜು.

ಮ್ಯಾನ್‌ಹೋಲ್ ಬ್ಲಾಕ್ ಕ್ಲಿಯರ್ ಮಾಡುವುದು ಮಾತ್ರ ಕೊರಗರೆ. ಕ್ಲೀನ್ ಮಾಡುವಾಗ ನಮಗೆ ಆ ವಾಸನೆಯೇ ಗೊತ್ತಾಗುವುದಿಲ್ಲ ಅಷ್ಟು ಅಭ್ಯಾಸ ಆಗಿ ಹೋಗಿದೆ. ಇದು ಸಮಸ್ಯೆ ಆಗಬ ಹುದು, ಮ್ಯಾನ್‌ಹೋಲ್ ಓಪನ್ ಮಾಡಿದಾಗ ಅದರಲ್ಲಿರುವ ಗ್ಯಾಸ್‌ನಿಂದ ನಮಗೆ ಎಫೆಕ್ಟ್ ಆಗುತ್ತದೆ. ನಮ್ಮ ಮಾವ ಮೊದಲಿಂದ ಈ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕಣ್ಣಿಗೆ ತೊಂದರೆ ಆಗಿದೆ ಎನ್ನುತ್ತಾರೆ ಯುಜಿಡಿಯಲ್ಲಿ ಕೆಲಸ ಮಾಡುತ್ತಿರುವ ಪ್ರಸಾದ್.

Similar News