Fact Check:1984ರ ಸಿಖ್ ನರಮೇಧದ ಕುರಿತು BBC ಸಾಕ್ಷ್ಯಚಿತ್ರ ನಿರ್ಮಿಸಿಲ್ಲ ಎಂಬ ಜೈಶಂಕರ್ ಹೇಳಿಕೆ ನಿಜವೇ?
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು 2002ರ ಗುಜರಾತ್ ಗಲಭೆಗಳ ಕುರಿತ ಬಿಬಿಸಿಯ ಇತ್ತೀಚಿನ ಸಾಕ್ಷ್ಯಚಿತ್ರದ ವಿರುದ್ಧ ಅಧಿಕೃತ ಟೀಕೆಯನ್ನು ಹೆಚ್ಚಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ (S. Jaishankar) ಅವರು, ಬಿಬಿಸಿ ರಾಜಕೀಯವನ್ನು ಆಡುತ್ತಿದೆ ಎಂದು ಆರೋಪಿಸಿದ್ದಾರೆ. 1984ರ ಸಿಖ್-ವಿರೋಧಿ ನರಮೇಧದ ಕುರಿತು ಬಿಬಿಸಿ ಏಕೆ ಸಾಕ್ಷ್ಯಚಿತ್ರವನ್ನು ನಿರ್ಮಿಸಿರಲಿಲ್ಲ ಎಂದೂ ಅವರು ಪ್ರಶ್ನಿಸಿದ್ದಾರೆ.
2002ರ ಹಿಂಸಾಚಾರ ಬಿಜೆಪಿ ಅಧಿಕಾರಾವಧಿಯಲ್ಲಿ ನಡೆದಿದ್ದರೆ 1984ರ ಹತ್ಯೆಗಳು ಕಾಂಗ್ರೆಸ್ ಆಡಳಿತದಲ್ಲಿ ನಡೆದಿದ್ದವು. ಈ ಆರೋಪವನ್ನು ಎತ್ತುವ ಮೂಲಕ ಬಿಬಿಸಿ ಕಾಂಗ್ರೆಸ್ ಪರ ಪಕ್ಷಪಾತಿಯಾಗಿದೆ ಎನ್ನುವುದನ್ನು ಜೈಶಂಕರ್ ಬಿಂಬಿಸಲು ಮುಂದಾಗಿದ್ದಾರೆ ಎಂದು thewire.in ವರದಿ ಮಾಡಿದೆ.
ಆದರೆ ಇಂಟರ್ನೆಟ್ ನಲ್ಲಿ ವೀಡಿಯೊ ಮತ್ತು ಪಠ್ಯ ದಾಖಲೆಗಳ ತ್ವರಿತ ಹುಡುಕಾಟವು ಬಿಬಿಸಿಯು 1984ರ ಹಿಂಸಾಚಾರಗಳು ನಡೆದ ತಕ್ಷಣ ಅದನ್ನು ವರದಿ ಮಾಡಿತ್ತು ಮತ್ತು ಪದೇ ಪದೇ ಆ ವಿಷಯವನ್ನು ಪ್ರಸ್ತಾಪಿಸಿತ್ತು ಎನ್ನುವುದನ್ನು ಸ್ಪಷ್ಟವಾಗಿಸಿದೆ. ವಾಸ್ತವದಲ್ಲಿ ಬಿಬಿಸಿಯು 2010ರಲ್ಲಿ ‘1984:ಎ ಸಿಖ್ ಸ್ಟೋರಿ’ ಹೆಸರಿನ, ಸಾಕ್ಷ್ಯಚಿತ್ರದಷ್ಟೇ ಉದ್ದದ ಕಾರ್ಯಕ್ರಮವನ್ನು ಪ್ರಸಾರಿಸಿತ್ತು. ಕಾರ್ಯಕ್ರಮವು ಜೂನ್ 1984ರಲ್ಲಿ ಅಮೃತಸರದ ಸ್ವರ್ಣ ಮಂದಿರದ ಮೇಲಿನ ದಾಳಿ ಹಾಗೂ ನವಂಬರ್ 1984ರಲ್ಲಿ ದಿಲ್ಲಿಯಲ್ಲಿ ಮತ್ತು ಇತರೆಡೆಗಳಲ್ಲಿ ಸಾಮಾನ್ಯ ಸಿಖ್ ಕುಟುಂಬಗಳ ವಿರುದ್ಧದ ನರಮೇಧದ ಹಿಂಸಾಚಾರದ ಮೇಲೆ ಗಮನವನ್ನು ಕೇಂದ್ರೀಕರಿಸಿತ್ತು.
ಭಾರತ ಮೂಲದ ಪತ್ರಕರ್ತೆ ಸೋನಿಯಾ ದೇವಲ್ ಅವರ ವೈಯಕ್ತಿಕ ಪ್ರವಾಸವನ್ನು ಆಧರಿಸಿ ಬಿಬಿಸಿ ಅಮೃತಸರ ಮಂದಿರದ ಮೇಲಿನ ದಾಳಿ ಮತ್ತು ಇಂದಿರಾ ಗಾಂಧಿಯವರ ಹತ್ಯೆಯ ಬಳಿಕ ದಿಲ್ಲಿಯಲ್ಲಿ 2,000ಕ್ಕೂ ಅಧಿಕ ಸಿಕ್ಖರ ನರಮೇಧದ ಕುರಿತು ತನಿಖೆಯನ್ನು ನಡೆಸಿತ್ತು.
ಕಾಕತಾಳೀಯವಾಗಿ 1984ರ ಹಿಂಸಾಚಾರದ ಕುರಿತು ಬಿಬಿಸಿ ಸಾಕ್ಷ್ಯಚಿತ್ರ ಸುಮಾರು 26 ವರ್ಷಗಳ ಬಳಿಕ ಬಂದಿದ್ದರೆ, 2002ರ ಗುಜರಾತ್ ಹಿಂಸಾಚಾರದಿಂದ ಸರಿಸುಮಾರು ಅಷ್ಟೇ ಅಂತರದಲ್ಲಿ ಮೋದಿ ಕುರಿತು ಅದರ ಸಾಕ್ಷ್ಯಚಿತ್ರ ಬಿಡುಗಡೆಗೊಂಡಿದೆ. ಆದರೆ 1984ರ ಕುರಿತು ಸಾಕ್ಷ್ಯಚಿತ್ರ ಬಂದಾಗ ಆಗಿನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಬಿಬಿಸಿ ಹಿಂದಿನದನ್ನು ಕೆದಕುತ್ತಿದೆ ಎಂದು ಆರೋಪಿಸಿದ್ದು ಕಂಡುಬಂದಿಲ್ಲ.
ಮಾಧ್ಯಮ ವೀಕ್ಷಕರು ಹೇಳುವಂತೆ ಜೈಶಂಕರ್ ಆರೋಪವು ವಿಶೇಷವಾಗಿ ವ್ಯಂಗ್ಯವಾಗಿದೆ, ಏಕೆಂದರೆ 1980ರ ದಶಕದ ಮಧ್ಯಭಾಗದಿಂದ ಭಾರತದಲ್ಲಿ ಬಿಬಿಸಿಯ ಶ್ರೋತೃಗಳ ಸಂಖ್ಯೆ ಹೆಚ್ಚುವಲ್ಲಿ ನಿಖರವಾಗಿ, ಇಂದಿರಾ ಗಾಂಧಿಯವರ ಹತ್ಯೆ ಮತ್ತು ನಂತರದ ರಕ್ತಪಾತಗಳ ಕುರಿತು ಅದರ ವರದಿಗಾರಿಕೆ ಪ್ರಮುಖ ಕಾರಣವಾಗಿತ್ತು.
ಅಧಿಕೃತ ಮುಖವಾಣಿಗಳೆಂದೇ ಪರಿಗಣಿಸಲಾಗಿದ್ದ ಭಾರತೀಯ ಸರಕಾರಿ ಪ್ರಸಾರ ಸಂಸ್ಥೆಗಳಿಗೆ ವ್ಯತಿರಿಕ್ತವಾಗಿ ಬಿಬಿಸಿ ಹೆಚ್ಚು ವಿಶ್ವಾಸಾರ್ಹವಾಗಿದೆ ಎಂದು 2013ರಲ್ಲಿ ಸ್ವತಃ ಮೋದಿಯವರೇ ಪ್ರಶಂಸಿಸಿದ್ದರು.
ಮಂಗಳವಾರ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಜೈಶಂಕರ್, ಗುಜರಾತ್ ಗಲಭೆಗಳ ಕುರಿತು ಸಾಕ್ಷ್ಯಚಿತ್ರದ ಬಿಡುಗಡೆ ಸಮಯವು ‘ಆಕಸ್ಮಿಕವಲ್ಲ’ ಮತ್ತು ಅದು ರಾಜಕೀಯಕ್ಕೆ ಸಂಬಂಧಿಸಿದೆ ಎಂದು ಹೇಳಿದ್ದಾರೆ.
‘ನಾನೋರ್ವ ಮಾನವತಾವಾದಿ ಮತ್ತು ಅನ್ಯಾಯವನ್ನು ಅನುಭವಿಸಿದವರಿಗೆ ನ್ಯಾಯ ದೊರೆಯಲೇಬೇಕು ಎಂದು ನೀವು ಹೇಳಿದರೆ ಅದು ರಾಜಕೀಯ ಕ್ಷೇತ್ರಕ್ಕೆ ಬರಲು ಧೈರ್ಯವಿಲ್ಲದವರು ಆಡುವ ರಾಜಕೀಯವಾಗಿದೆ’ ಎಂದು ಸಂದರ್ಶನದಲ್ಲಿ ಹೇಳಿರುವ ಜೈಶಂಕರ್, ಬಿಬಿಸಿ ಸಾಕ್ಷ್ಯಚಿತ್ರವು ವಾಕ್ ಸ್ವಾತಂತ್ರ್ಯದ ಕುರಿತು ಅಲ್ಲ, ಅದು ರಾಜಕೀಯವಾಗಿದೆ. ‘ಇತರ ಮಾರ್ಗಗಳ ಮೂಲಕ ಯುದ್ಧ’ ಎಂಬ ವಿಶೇಷಣವಿದೆ, ಇದು ಇತರ ಮಾರ್ಗಗಳ ಮೂಲಕ ರಾಜಕೀಯವಾಗಿದೆ ಎಂದಿದ್ದಾರೆ.
2002ರಲ್ಲಿ ಗುಜರಾತ್ ಗಲಭೆಗಳು ನಡೆದಿದ್ದಾಗ ಬಿಬಿಸಿಯು ಅದನ್ನು ವರದಿ ಮಾಡಿರಲಿಲ್ಲ, ಆದರೆ ಭಾರತದಲ್ಲಿ ಮಂಬರುವ ಚುನಾವಣೆಗಳ ಮೇಲೆ ಪ್ರಭಾವವನ್ನು ಬೀರುವ ಏಕಮಾತ್ರ ಉದ್ದೇಶದೊಂದಿಗೆ ಈಗ ಅದನ್ನು ಮಾಡುತ್ತಿದೆ ಎಂದೂ ಜೈಶಂಕರ್ ಆರೋಪಿಸಿದ್ದಾರೆ. 2023ರ ಸಾಕ್ಷ್ಯಚಿತ್ರವು 2002ರಲ್ಲೇ ಬಿಬಿಸಿಯು ಚಿತ್ರೀಕರಿಸಿದ್ದ ಮತ್ತು ಪ್ರಸಾರ ಮಾಡಿದ್ದ ಹಲವಾರು ಫೂಟೇಜ್ ಗಳನ್ನು ಒಳಗೊಂಡಿರುವುದರಿಂದ ಈ ಆರೋಪವು ವಿಚಿತ್ರವಾಗಿದೆ ಎಂದು thewire.in ವರದಿ ಮಾಡಿದೆ.
1984ರಲ್ಲಿ ದಿಲ್ಲಿಯಲ್ಲಿ ಸಂಭವಿಸಿದ್ದನ್ನು ಬಿಬಿಸಿ ಮತ್ತು ಇತರ ಪಾಶ್ಚಾತ್ಯ ಮಾಧ್ಯಮಗಳು ನಿರ್ಲಕ್ಷಿಸಿದ್ದವು ಎಂಬ ಜೈಶಂಕರ್ ಹೇಳಿಕೆಯು ವಾಸ್ತವ ದಾಖಲೆಗಳಿಗೆ ವಿರುದ್ಧವಾಗಿದೆ. ಆಗ ಬಿಬಿಸಿಯ ದಿಲ್ಲಿ ಕಚೇರಿಯ ಮುಖ್ಯಸ್ಥರಾಗಿದ್ದ ಖ್ಯಾತ ಪತ್ರಕರ್ತ ಮಾರ್ಕ್ ಟುಲಿ ಅವರು ಸಿಖ್ ವಿರೋಧಿ ಹಿಂಸಾಚಾರವನ್ನು ವರದಿ ಮಾಡಿದ್ದರು, ಅಮೆರಿಕ ಮತ್ತು ಬ್ರಿಟನ್ ನ ವೃತ್ತಪತ್ರಿಕೆಗಳೂ ವರದಿ ಮಾಡಿದ್ದವು ಮತ್ತು ಇದು ಆ ದಿನಗಳ ವಿದೇಶಾಂಗ ಮತ್ತು ಸಚಿವರಿಗೆ ದಿಗ್ಭ್ರಮೆಯನ್ನುಂಟು ಮಾಡಿತ್ತು. ಬ್ರಿಟನ್ ನ ಎಲ್ಡಬ್ಲ್ಯುಟಿ ಚಾನೆಲ್ ಕೂಡ 1984ರ ಹತ್ಯೆಗಳನ್ನು ವರದಿ ಮಾಡಿತ್ತು ಎಂದು ಆ ಸಮಯದಲ್ಲಿ ಆ ಚಾನೆಲ್ ನೊಂದಿಗೆ ಕೆಲಸ ಮಾಡಿದ್ದ ಕರಣ್ ಥಾಪರ್ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ಇಬ್ಬರು ಯುವಕರನ್ನು ಸುಟ್ಟು ಕೊಂದ ಪ್ರಕರಣ: ಆರೋಪಿ ಮೋನು ಮನೇಸರ್‌ಗೆ ರಾಜಸ್ಥಾನ ಪೊಲೀಸರಿಂದ ಕ್ಲೀನ್ ಚಿಟ್; ವರದಿ