ಬಜೆಟ್ ನಲ್ಲಿ ಪೊಲೀಸ್ ಇಲಾಖೆಗೆ ರೂ.2,250 ಕೋಟಿ, ಮಹಾ ಕುಂಭಕ್ಕೆ ರೂ.2,500 ಕೋಟಿ ಮೀಸಲಿರಿಸಿದ ಉತ್ತರ ಪ್ರದೇಶ ಸರಕಾರ
2022ರಲ್ಲಿ ಅಪರಾಧ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ ಎಂದ ಸರಕಾರ
ಲಕ್ನೋ: ಉತ್ತರ ಪ್ರದೇಶ ಸರ್ಕಾರದ ವಿತ್ತ ಸಚಿವ ಸುರೇಶ್ ಖನ್ನಾ ಗುರುವಾರ ಮಂಡಿಸಿದ ರಾಜ್ಯ ಬಜೆಟಿನಲ್ಲಿ ಪೊಲೀಸ್ ಇಲಾಖೆಗೆ ರೂ 2,250 ಕೋಟಿ ಮೀಸಲಿರಿಸಲಾಗಿದೆ. ರಾಜ್ಯದಲ್ಲಿ 2016 ರಲ್ಲಿ ಸಮಾಜವಾದಿ ಪಕ್ಷ ಅಧಿಕಾರವಿದ್ದ ಸಮಯಕ್ಕೆ ಹೋಲಿಸಿದಾಗ 2022 ರಲ್ಲಿ ಅಪರಾಧ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ ಎಂದು ಸರ್ಕಾರ ಹೇಳಿದೆ ಎಂದು indianexpress.com ವರದಿ ಮಾಡಿದೆ.
ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಿ, ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಸತಿ ಸೌಕರ್ಯಗಳನ್ನು ಒದಗಿಸಲು ಹಾಗೂ ಕಮಿಷನರೇಟ್ ಕಚೇರಿಗಳಿಗೆ ಸ್ವಂತ ಜಮೀನುಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲು ಹೆಚ್ಚುವರಿ ಅನುದಾನ ಬಳಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ರಾಜ್ಯದಲ್ಲಿ ವರದಕ್ಷಿಣೆ ಸಾವು ಪ್ರಕರಣಗಳಲ್ಲಿ ಶೇ 15.81 ರಷ್ಟು ಇಳಿಕೆಯಾಗಿದೆ, ಅತ್ಯಾಚಾರ ಪ್ರಕರಣಗಳು ಶೇ 21.24 ರಷ್ಟು ಇಳಿಕೆಯಾಗಿವೆ ಹಾಗೂ ಮಹಿಳೆಯರ ವಿರುದ್ಧದ ಅಪರಾಧ ಮತ್ತು ಅಪಹರಣ ಪ್ರಕರಣಗಳಲ್ಲಿ ಶೇ 9.17 ರಷ್ಟು ಇಳಿಕೆಯಾಗಿದೆ ಎಂದು ಸಚಿವರು ತಿಳಿಸಿದರು.
ಬಜೆಟಿನಲ್ಲಿ 2025 ರ ಮಹಾ ಕುಂಭ ಮೇಳಕ್ಕೆ ರೂ. 2500 ಕೋಟಿ ಮೀಸಲಿರಿಸಲಾಗಿದೆ ಎಂದು ಬಜೆಟಿನಲ್ಲಿ ತಿಳಿಸಲಾಗಿದೆ. ಕಳೆದ ವರ್ಷ ಈ ಉದ್ದೇಶಕ್ಕೆ ರೂ. 621.55 ಕೋಟಿ ಮೀಸಲಿರಿಸಲಾಗಿತ್ತು.
ಮದರಸಾಗಳಲ್ಲಿ ಕಂಪ್ಯೂಟರ್ ಲ್ಯಾಬ್ ಸ್ಥಾಪಿಸಲು ಪ್ರತಿ ಮದರಸಾಗೆ ರೂ. 1 ಲಕ್ಷ ಅನುದಾನ ಒದಗಿಸಲಾಗುವುದು ಎಂದು ಬಜೆಟಿನಲ್ಲಿ ಘೋಷಿಸಲಾಗಿದೆ. ರಾಜ್ಯದಲ್ಲಿ 23,000 ಮದರಸಾಗಳಿದ್ದು ಅವುಗಳಲ್ಲಿ ಕೇವಲ 561 ಮದರಸಾಗಳು ರಾಜ್ಯ ಸರಕಾರದ ಅನುದಾನ ಪಡೆಯುತ್ತಿವೆ.