ಚೀನಾ ಆರ್ಥಿಕವಾಗಿ ಬಲಿಷ್ಠ; ಅದರೊಂದಿಗೆ ಜಗಳ ಅಸಾಧ್ಯ: ವಿದೇಶ ಸಚಿವ ಎಸ್. ಜೈಶಂಕರ್
ಹೊಸದಿಲ್ಲಿ, ಫೆ. 23: ಚೀನಾ ಬಲಿಷ್ಠ ಆರ್ಥಿಕತೆ ಹೊಂದಿರುವ ದೇಶವಾಗಿದೆ; ಹಾಗಾಗಿ ಗಡಿ ಒಪ್ಪಂದಗಳನ್ನು ಉಲ್ಲಂಘಿಸುವ ಮೂಲಕ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಚೀನಾ ನಿರ್ಮಿಸುತ್ತಿರುವ ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸುವ ಕೆಲಸವನ್ನಷ್ಟೇ ನಾವು ಮಾಡುತ್ತಿದ್ದೇವೆ ಎಂದು ಭಾರತದ ವಿದೇಶ ಸಚಿವ ಎಸ್. ಜೈಶಂಕರ್(S. Jaishankar) ಹೇಳಿದ್ದಾರೆ.
‘‘ಅವರು ಬಲಿಷ್ಠ ಆರ್ಥಿಕತೆ ಹೊಂದಿರುವ ದೇಶ. ನಾನು ಏನು ಮಾಡಲಿ? ನನ್ನದು ಸಣ್ಣ ಆರ್ಥಿಕತೆ ಹೊಂದಿರುವ ಬಡ ದೇಶ. ಬಲಿಷ್ಠ ಆರ್ಥಿಕತೆ ಹೊಂದಿರುವ ದೇಶದೊಂದಿಗೆ ನಾನು ಜಗಳ ಮಾಡಲು ಸಾಧ್ಯವೇ? ಘಟನೆಗಳಿಗೆ ಪ್ರತಿಕ್ರಿಯೆ ಮಾತ್ರ ನೀಡುತ್ತಿದ್ದೇವೆ ಎಂದು ಹೇಳಬಾರದು. ಇದು ಸಾಮಾನ್ಯ ಜ್ಞಾನ. ಗಡಿಗಳಿಗೆ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಾವು ಕಳುಹಿಸುವಂತಿಲ್ಲ. ಇದಕ್ಕೆ ನಾವು ಬದ್ಧರಾಗಿದ್ದೇವೆ. ಯಾಕೆಂದರೆ, ನಮ್ಮ ಗಡಿಗಳಲ್ಲಿ ಸ್ಥಿರತೆ ಕಾಪಾಡುವುದು ನಮ್ಮ ಹಿತಾಸಕ್ತಿಗೆ ಪೂರಕವಾಗಿದೆ. ಪ್ರೀತಿ, ವಾತ್ಸಲ್ಯ ಅಥವಾ ಭಾವನೆಗಳು ತುಂಬಿರುವ ಪರಿಸ್ಥಿತಿ ನಮಗೆ ಬೇಕಾಗಿದೆ. ಈ ಎಲ್ಲಾ ಲೆಕ್ಕಾಚಾರಗಳನ್ನು ನಾವು ಮಾಡಿದ್ದೇವೆ’’ ಎಂದು ಎಎನ್‌ಐ ಸುದ್ದಿಸಂಸ್ಥೆಯ ಸ್ಮಿತಾ ಪ್ರಕಾಶ್‌ಗೆ ನೀಡಿದ ಸಂದರ್ಶನವೊಂದರಲ್ಲಿ ವಿದೇಶ ಸಚಿವರು ಹೇಳಿದ್ದಾರೆ.
ನಿಶ್ಶರ್ತ ಶರಣಾಗತಿಗೂ ಉತ್ತಮ ಪದಗಳನ್ನು ಬಳಸಲಾಗುತ್ತದೆ: ವಿದೇಶ ಸಚಿವರ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ
ಚೀನಾದೊಂದಿಗಿನ ಗಡಿ ವಿವಾದಕ್ಕೆ ಸಂಬಂಧಿಸಿ ಇತ್ತೀಚೆಗೆ ನೀಡಿರುವ ಹೇಳಿಕೆಗಾಗಿ ವಿದೇಶ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, ‘‘ನಿಶ್ಶರ್ತ ಶರಣಾಗತಿಗೂ ಇದಕ್ಕಿಂತ ಉತ್ತಮ ಪದಗಳನ್ನು ಬಳಸಲಾಗುತ್ತದೆ’’ ಎಂದು ಹೇಳಿದ್ದಾರೆ.
‘‘ಸಚಿವ ಎಸ್. ಜೈಶಂಕರ್ ಅವರೇ, ನಿಶ್ಶರ್ತ ಶರಣಾಗತಿಯಾದರೂ ಅದನ್ನು ವಿವರಿಸಲು ಕನಿಷ್ಠ ಉತ್ತಮ ಪದಗಳನ್ನಾದರೂ ಬಳಸಲಾಗುತ್ತದೆ. ನಿಮ್ಮದು ಸೋಲು ಒಪ್ಪಿಕೊಂಡಿರುವ ಮನೋಸ್ಥಿತಿ. ಹಾಗಾಗಿ, 2020 ಸೆಪ್ಟಂಬರ್‌ನಿಂದಲೂ ಸಂಸತ್‌ನಲ್ಲಿ ಚೀನಾ ಕುರಿತ ಚರ್ಚೆಯಿಂದ ಪಲಾಯನಗೈಯುತ್ತಾ ಬಂದಿರುವುದರಲ್ಲಿ ಅಚ್ಚರಿಯೇನಿಲ್ಲ’’ ಎಂಬುದಾಗಿ ತಿವಾರಿ ಟ್ವೀಟ್ ಮಾಡಿದ್ದಾರೆ.