ಎನ್‌ಐಎಯಿಂದ ದೇಶಾದ್ಯಂತ ದಾಳಿ: ಖಲಿಸ್ತಾನ್ ಸಿದ್ಧಾಂತಿ, ಕ್ರಿಮಿನಲ್‌ಗಳು ಸೇರಿ ಆರು ಮಂದಿಯ ಬಂಧನ
ಹೊಸದಿಲ್ಲಿ,ಫೆ.23: ಕ್ರಿಮಿನಲ್ ಗ್ಯಾಂಗ್‌ಗಳು,ಭಯೋತ್ಪಾದಕ ಗುಂಪುಗಳು ಮತ್ತು ಡ್ರಗ್ ಮಾಫಿಯಾ ನಡುವಿನ ಅಪವಿತ್ರ ಮೈತ್ರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕೆನಡಾ ಮೂಲದ ಘೋಷಿತ ಭಯೋತ್ಪಾದಕ ಅರ್ಷದೀಪ್ ಸಿಂಗ್ ಅಲಿಯಾಸ್ ಅರ್ಷ ದಲಾನ ನಿಕಟವರ್ತಿ ಲಕಿ ಖೋಖರ್ ಅಲಿಯಾಸ್ ಡೆನಿಸ್ ಸೇರಿದಂತೆ ಆರು ಜನರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯು ಬಂಧಿಸಿದೆ ಎಂದು ಅಧಿಕೃತ ವಕ್ತಾರರು ಗುರುವಾರ ತಿಳಿಸಿದರು.
ಎನ್‌ಐಎ ಮಂಗಳವಾರ ದೇಶದ ಎಂಟು ರಾಜ್ಯಗಳಲ್ಲಿಯ 76 ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿತ್ತು. ಲಖವೀರ್ ಸಿಂಗ್,ಹರ್ಪ್ರೀತ್,ದಲೀಪ್ ಬಿಷ್ಣೋಯಿ,ಸುರಿಂದರ್ ಅಲಿಯಾಸ್ ಚಿಕು ಚೌಧರಿ ಮತ್ತು ಹರಿ ಓಂ ಅಲಿಯಾಸ್ ಟಿಟು ಇತರ ಬಂಧಿತರಾಗಿದ್ದು,ಇವರೆಲ್ಲ ಗ್ಯಾಂಗ್‌ಸ್ಟರ್‌ಗಳಾದ ಲಾರೆನ್ಸ್ ಬಿಷ್ಣೋಯಿ,ಜಗ್ಗು ಭಗವಾನಪುರಿಯಾ ಮತ್ತು ಗೋಲ್ಡಿ ಬ್ರಾರ್ ಅವರ ಸಹಚರರಾಗಿದ್ದಾರೆ.
ಪಂಜಾಬಿನ ಬಠಿಂಡಾ ನಿವಾಸಿಯಾಗಿರುವ ಖೋಖರ್‌ನನ್ನು ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಬಂಧಿಸಲಾಗಿದೆ. ಅರ್ಷದೀಪ್ ಜೊತೆ ನೇರ ಸಂಪರ್ಕ ಹೊಂದಿದ್ದ ಈತ ಆತನ ಗ್ಯಾಂಗ್‌ಗಾಗಿ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದ ಮತ್ತು ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳಿಗೆ ಹಣವನ್ನು ಸಂಗ್ರಹಿಸುತ್ತಿದ್ದ. ಖೋಖರ್ ಪಂಜಾಬಿನಲ್ಲಿಯ ಅರ್ಷದೀಪ್‌ನ ಸಹಚರರಿಗೆ ಶಸ್ತ್ರಾಸ್ತ್ರಗಳನ್ನೂ ಪೂರೈಸಿದ್ದು,ಅರ್ಷದೀಪ್ ನಿರ್ದೇಶನದ ಮೇರೆಗೆ ಇತ್ತೀಚಿಗೆ ಜಗ್ರಾಂವ್‌ನಲ್ಲಿ ಕೊಲೆಯೊಂದನ್ನು ನಡೆಸಲು ಅವುಗಳನ್ನು ಬಳಸಲಾಗಿತ್ತು ಎಂದು ಎನ್‌ಐಎ ತಿಳಿಸಿದೆ.
ಹರ್ವಿಂದರ್ ಸಿಂಗ್ ಅಲಿಯಾಸ್ ರಿಂದಾ,ಲಖಬೀರ ಸಿಂಗ್ ಸಂಧು ಅಲಿಯಾಸ್ ಲಾಂಡಾ ಮತ್ತು ಅರ್ಷದೀಪ್ ಸಿಂಗ್ ಸೇರಿದಂತೆ ಏಳು ಜನರ ವಿರುದ್ಧ ಎನ್‌ಐಎ ಕಳೆದ ವರ್ಷದ ಆ.20ರಂದು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಕ ರಂಗಾ ಎಂಬಾತನನ್ನು ಎನ್‌ಐಎ ಈ ಹಿಂದೆಯೇ ಬಂಧಿಸಿತ್ತು.
ಅರ್ಷದೀಪ್ ಅಂತರರಾಷ್ಟ್ರೀಯ ಮತ್ತು ಅಂತರರಾಜ್ಯ ಗಡಿಗಳ ಮೂಲಕ ಭಾರತದಲ್ಲಿ ಖಲಿಸ್ತಾನ್ ಲಿಬರೇಷನ್ ಫೋರ್ಸ್, ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ ಮತ್ತು ಇಂಟರ್‌ನ್ಯಾಷನಲ್ ಸಿಖ್ ಯೂಥ್ ಫೆಡರೇಷನ್ ಸೇರಿದಂತೆ ಹಲವು ನಿಷೇಧಿತ ಭಯೋತ್ಪಾದಕ ಸಂಘಟನೆಗಳಿಗಾಗಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು,ಸ್ಫೋಟಕಗಳು ಮತ್ತು ಐಇಡಿಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿಕೊಂಡಿದ್ದು,ಖೋಖರ್ ಆತನಿಗಾಗಿ ಕೆಲಸ ಮಾಡುತ್ತಿದ್ದ ಎಂದು ಎನ್‌ಐಎ ವಕ್ತಾರರು ತಿಳಿಸಿದರು.
ಭಾರತದಲ್ಲಿ ಪ್ರಮುಖ ಗ್ಯಾಂಗ್‌ಸ್ಟರ್‌ಗಳಾಗಿದ್ದ ಹಲವಾರು ಕ್ರಿಮಿನಲ್‌ಗಳು ಪಾಕಿಸ್ತಾನ,ಕೆನಡಾ,ಮಲೇಶಿಯಾ,ಫಿಲಿಪ್ಪೀನ್ಸ್ ಮತ್ತು ಆಸ್ಟ್ರೇಲಿಯಾಗಳಂತಹ ದೇಶಗಳಿಗೆ ಪರಾರಿಯಾಗಿದ್ದು, ಅಲ್ಲಿಂದಲೇ ವಿವಿಧ ರಾಜ್ಯಗಳ ಜೈಲುಗಳಲ್ಲಿರುವ ಕ್ರಿಮಿನಲ್‌ಗಳೊಂದಿಗೆ ಸೇರಿಕೊಂಡು ಭಯೋತ್ಪಾದಕ ಮತ್ತು ಕ್ರಿಮಿನಲ್ ಕೃತ್ಯಗಳಿಗೆ ಯೋಜನೆಗಳನ್ನು ರೂಪಿಸುತ್ತಿದ್ದರು ಎನ್ನುವುದು ಎನ್‌ಐಎದ ಈವರೆಗಿನ ತನಿಖೆಯಲ್ಲಿ ಬೆಳಕಿಗೆ ಬಂದಿದೆ.