ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ ರಾಜಾಜಿ ಮರಿಮೊಮ್ಮಗ ಕೇಶವನ್
ಚೆನ್ನೈ,ಫೆ.23: ‘ರಾಜಾಜಿ ’ಎಂದೇ ಖ್ಯಾತರಾಗಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಸಿ.ರಾಜಗೋಪಾಲಾಚಾರಿ(C. Rajagopalachari) ಯವರ ಮರಿಮೊಮ್ಮಗ ಸಿ.ಆರ್.ಕೇಶವನ್(C.R.Kesavan) ಅವರು ತಾನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ತಮಿಳುನಾಡು ಕಾಂಗ್ರೆಸ್ ಕಮಿಟಿ ಚ್ಯಾರಿಟೇಬಲ್ ಟ್ರಸ್ಟ್‌ನ ಖಜಾಂಚಿ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಗುರುವಾರ ಇಲ್ಲಿ ಪ್ರಕಟಿಸಿದರು. ಕೇಶವನ್ 2001ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು.
‘ಎರಡು ದಶಕಗಳಿಗೂ ಅಧಿಕ ಕಾಲ ನಾನು ಪಕ್ಷಕ್ಕಾಗಿ ಸಮರ್ಪಣಾ ಮನೋಭಾವದೊಂದಿಗೆ ದುಡಿಯುವಂತೆ ಮಾಡಿದ್ದ ಮೌಲ್ಯಗಳ ಯಾವುದೇ ಕುರುಹುಗಳು ಇತ್ತೀಚಿಗೆ ಕಂಡು ಬಂದಿಲ್ಲ ಎಂದು ಹೇಳಲು ವಿಷಾದವಾಗುತ್ತಿದೆ ’ಎಂದು ಕೇಶವನ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಇದೇ ಕಾರಣದಿಂದ ತಾನು ಇತ್ತೀಚಿಗೆ ರಾಷ್ಟ್ರಮಟ್ಟದ ಸಂಘಟನೆ ಹೊಣೆಗಾರಿಕೆಯನ್ನು ನಿರಾಕರಿಸಿದ್ದೆ ಮತ್ತು ಭಾರತ ಜೋಡೊ ಯಾತ್ರೆಯಿಂದ ದೂರವಿದ್ದೆ ಎಂದೂ ಅವರು ತಿಳಿಸಿದ್ದಾರೆ.