ಗೋಧಿ ಬೆಳೆಯುವ ರಾಜ್ಯಗಳಲ್ಲಿ ಶೇಕಡ 99ರಷ್ಟು ಫೆಬ್ರವರಿ ಮಳೆ ಕೊರತೆ

Update: 2023-02-24 02:41 GMT

ಪುಣೆ: ದೇಶ ಜನವರಿ ತಿಂಗಳಲ್ಲಿ ಶೇಕಡ 39ರಷ್ಟು ಮಳೆ ಅಭಾವದೊಂದಿಗೆ ಹೊಸ ವರ್ಷವನ್ನು ಆರಂಭಿಸಿದ್ದು, ಫೆಬ್ರವರಿಯಲ್ಲಿ ಮಳೆ ಕೊರತೆ ಪ್ರಮಾಣ ಮತ್ತಷ್ಟು ಹೆಚ್ಚಿದೆ. ಇದು ಈ ವರ್ಷ ಆರಂಭಿಕ ಹಂತದಲ್ಲೇ ಬೇಸಿಗೆಯ ಬೇಗೆ ಹೆಚ್ಚಲು ಕಾರಣವಾಗಿದೆ ಎಂದು ಹವಾಮಾನ ಮುನ್ಸೂಚನೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಗೋಧಿ ಬೆಳೆಯುವ ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್, ಹರ್ಯಾಣ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಫೆಬ್ರವರಿ ತಿಂಗಳಲ್ಲಿ ಬೀಳುವ ಮಳೆಯಲ್ಲಿ ಶೇಕಡ 99ರಿಂದ ಶೇಕಡ 100ರಷ್ಟು ಕೊರತೆ ಎದುರಾಗಿದೆ. ಇದು ಬೆಳೆಯ ದೃಷ್ಟಿಯಿಂದ ಉತ್ತಮವಲ್ಲ ಎಂದು ತಜ್ಞರು ಹೇಳಿದ್ದಾರೆ.

ಸಕಾಲಿಕ ಮಳೆ ಹಗಲಿನ ಉಷ್ಣಾಂಶವನ್ನು ಕಡಿಮೆ ಮಾಡುವುದು ಮಾತ್ರವಲ್ಲದೇ, ಹಿಂಗಾರು ಬೆಳೆಗೆ ನೀರುಣಿಸುವ ಅವಧಿಯನ್ನು ಕೂಡಾ ಕಡಿಮೆ ಮಾಡುತ್ತದೆ ಎನ್ನುವುದು ಈ ರಾಜ್ಯಗಳ ಗೋಧಿ ಬೆಳೆಗಾರರ ಅಭಿಮತ. ಫೆಬ್ರವರಿ 1-23ರ ಅವಧಿಯಲ್ಲಿ ಪಶ್ಚಿಮ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಪೂರ್ವ ಮತ್ತು ಪಶ್ಚಿಮ ಮಧ್ಯಪ್ರದೇಶಗಳಲ್ಲಿ ಶೇಕಡ 100ರಷ್ಟು ಮಳೆ ಕೊರತೆ ಇದ್ದರೆ, ಪಂಜಾಬ್, ಹರ್ಯಾಣ, ಚಂಡೀಗಢ ಮತ್ತು ದೆಹಲಿಯಲ್ಲಿ ಮಳೆ ಕೊರತೆ ಪ್ರಮಾಣ ಶೇಕಡ 99ರಷ್ಟಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ವಿವರಿಸಿದ್ದಾರೆ.

"ಫೆಬ್ರವರಿ 13-19ರ ಅವಧಿಯಲ್ಲಿ ವಾಯವ್ಯ ಭಾರತ, ಕೊಂಕಣ ಮತ್ತು ಗೋವಾದಲ್ಲಿ ಗರಿಷ್ಠ ಉಷ್ಠಾಂಶ ವಾಡಿಕೆಗಿಂತ ಹೆಚ್ಚಲು ಪ್ರಮುಖ ಕಾರಣ ಒಣಹವೆ ಈ ಪ್ರದೇಶದಲ್ಲಿ ಮುಂದುವರಿದಿರುವುದು ಮತ್ತು ಬೆಟ್ಟ ಪ್ರದೇಶಗಳಲ್ಲಿ ಮಳೆ/ ಹಿಮದ ಕೊರತೆ. ಇದರ ಜತೆಗೆ ಸಕ್ರಿಯ ಪಶ್ಚಿಮ ಪ್ರಕ್ಷುಬ್ಧತೆಯೂ ಇದಕ್ಕೆ ಕಾರಣ" ಎಂದು ಐಎಂಡಿ ವಿಜ್ಞಾನಿ ರಾಜೇಂದ್ರ ಜೇನಮನಿ ಹೇಳಿದ್ದಾರೆ.

Similar News