×
Ad

ಹಿಂಡೆನ್‌ಬರ್ಗ್‌ ವರದಿ ನಂತರ ಮೊದಲ ಬಾರಿ ಖರೀದಿ ಮೌಲ್ಯಕ್ಕಿಂತ ಕಡಿಮೆಯಾದ ಅದಾನಿ ಸಂಸ್ಥೆಗಳಲ್ಲಿನ LIC ಹೂಡಿಕೆ ಮೌಲ್ಯ

Update: 2023-02-24 12:59 IST

ಹೊಸದಿಲ್ಲಿ: ಅದಾನಿ ಸಮೂಹ ಸಂಸ್ಥೆಗಳಲ್ಲಿ ವ್ಯಾಪಕ ಅವ್ಯವಹಾರಗಳ ಕುರಿತಂತೆ ಅಮೆರಿಕಾದ ಹಿಂಡೆನ್‌ಬರ್ಗ್‌ ಸಂಸ್ಥೆ (Hindenburg) ಸಂಶೋಧನಾ ವರದಿಯನ್ನು ಜನವರಿಯಲ್ಲಿ ಪ್ರಕಟಿಸಿದ ನಂತರ ಭಾರತೀಯ ಜೀವವಿಮಾ ನಿಗಮ (LIC) ಸಂಸ್ಥೆಯು ಅದಾನಿ ಸಮೂಹದ ಐದು ದೊಡ್ಡ ಕಂಪೆನಿಗಳಲ್ಲಿ ಹೊಂದಿರುವ ಶೇರುಗಳ ಮೌಲ್ಯವು ಅವುಗಳ ಖರೀದಿ ಬೆಲೆಗಿಂತಲೂ ಕಡಿಮೆಯಾಗಿವೆ.

ಗುರುವಾರ, ಅದಾನಿ ಸಮೂಹ ಸಂಸ್ಥೆಗಳಲ್ಲಿ ಎಲ್‌ಐಸಿಯ  ಹೂಡಿಕೆಯು (ಅಂಬುಜಾ ಸಿಮೆಂಟ್‌ ಮತ್ತು ಎಸಿಸಿ ಹೊರತುಪಡಿಸಿ)  ರೂ. 26,861.9 ಕೋಟಿಗೆ, ಅಂದರೆ ಅದರ ಖರೀದಿ ದರವಾದ ರೂ. 30,127 ಕೋಟಿಗಿಂತ ಬಹುತೇಕ ಶೇ. 11 ರಷ್ಟು ಇಳಿಕೆಯಾಗಿದೆ.

ಎಲ್‌ಐಸಿ ಸಂಸ್ಥೆಯು ಅದಾನಿ ಸಮೂಹ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿರುವ ದೊಡ್ಡ ದೇಶೀಯ ಸಾಂಸ್ಥಿಕ ಹೂಡಿಕೆದಾರನಾಗಿದೆ. ಅದಾನಿ ಪೋರ್ಟ್ಸ್‌ನಲ್ಲಿ ಶೇ 9.14 ರಷ್ಟು ಶೇರುಗಳು, ಅದಾನಿ ಟೋಟಲ್‌ ಗ್ಯಾಸ್‌ನಲ್ಲಿ ಶೇ 5.96, ಅದಾನಿ ಎಂಟರ್‌ಪ್ರೈಸಸ್‌ನಲ್ಲಿ ಶೇ 4.23, ಅದಾನಿ ಟ್ರಾನ್ಸ್‌ಮಿಷನ್‌ನಲ್ಲಿ ಶೇ 3.65 ಮತ್ತು ಅದಾನಿ ಗ್ರೀನ್‌ ಎನರ್ಜಿಯಲ್ಲಿ ಶೇ 1.28 ಷೇರುಗಳನ್ನು ಡಿಸೆಂಬರ್‌ 2022 ರಲ್ಲಿದ್ದಂತೆ ಎಲ್‌ಐಸಿ ಹೊಂದಿದೆ.

ಮ್ಯೂಚುವಲ್‌ ಫಂಡ್‌ಗಳು ಅದಾನಿ ಸಂಸ್ಥೆಗಳ ಷೇರುಗಳನ್ನು ಖರೀದಿಸಲು ಹಿಂಜರಿಕೆ ತೋರಿದ್ದಂತಹ ಸಂದರ್ಭದಲ್ಲಿ ಡಿಸೆಂಬರ್‌ 2022 ರ ತನಕದ ಹಿಂದಿನ ಒಂಬತ್ತು ತ್ರೈಮಾಸಿಕಗಳಲ್ಲಿ ಎಲ್‌ಐಸಿಯು ಅದಾನಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡುತ್ತಾ ಬಂದಿದೆ.

ಸೆಪ್ಟೆಂಬರ್‌ 2020 ಹಾಗೂ ಡಿಸೆಂಬರ್‌ 2022 ರ ನಡುವೆ ಎಲ್‌ಐಸಿಯು ಅದಾನಿ ಎಂಟರ್‌ಪ್ರೈಸಸ್‌ನಲ್ಲಿ ಮಾಡಿದ್ದ ಹೂಡಿಕೆ ಶೇ 1 ರಿಂದ ಶೇ 4.23ಗೆ ಏರಿಕೆಯಾಗಿದ್ದರೆ, ಅದಾನಿ ಟೋಟಲ್‌ ಗ್ಯಾಸ್‌ನ ಮೇಲಿನ ಹೂಡಿಕೆ ಶೇ 1 ಕ್ಕೂ ಕಡಿಮೆಯಿಂದ ಶೇ 5.96 ರಷ್ಟು, ಅದಾನಿ ಟ್ರಾನ್ಸ್‌ಮಿಷನ್‌ನಲ್ಲಿ ಶೇ 2.42 ನಿಂದ ಶೇ 3.65 ಹಾಗೂ ಅದಾನಿ ಗ್ರೀನ್‌ ಎನರ್ಜಿಯಲ್ಲಿನ ಹೂಡಿಕೆ ಶೇ 1ಕ್ಕಿಂತ ಕಡಿಮೆಯಿಂದ ಶೇ 1.28 ರಷ್ಟು ಏರಿಕೆಯಾಗಿತ್ತು.

ಇದನ್ನೂ ಓದಿ: ಅದಾನಿ-ಹಿಂಡೆನ್‌ಬರ್ಗ್ ವರದಿ ಮಾಡದಂತೆ ಮಾಧ್ಯಮಕ್ಕೆ ನಿರ್ಬಂಧಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

Similar News