×
Ad

512 ಕೆ.ಜಿ ಈರುಳ್ಳಿ ಮಾರಲು 70 ಕಿ.ಮೀ ಪ್ರಯಾಣ ಬೆಳೆಸಿದ ಮಹಾರಾಷ್ಟ್ರ ರೈತನಿಗೆ ಸಿಕ್ಕಿದ್ದೇನು ಗೊತ್ತೇ?

Update: 2023-02-24 13:50 IST

ಕೊಲ್ಹಾಪುರ/ನಾಸಿಕ್: ಸೊಲ್ಲಾಪುರ ಜಿಲ್ಲೆಯ ಬರ್ಶಿ ತಾಲ್ಲೂಕಿನ ಬೋರ್ಗಾಂವ್ ಗ್ರಾಮದ 58 ವರ್ಷದ ರಾಜೇಂದ್ರ ತುಕಾರಾಂ ಚವಾಣ್ ಎಂಬ ಈರುಳ್ಳಿ ಬೆಳೆಗಾರ ತಾನು ಬೆಳೆದಿದ್ದ 512 ಕೆಜಿ ಈರುಳ್ಳಿಯನ್ನು ಸೊಲ್ಲಾಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹರಾಜು ಹಾಕಲು 70 ಕಿಮೀ ಪ್ರಯಾಣ ಬೆಳೆಸಿದ್ದು, ಈರುಳ್ಳಿ ಹರಾಜಾದ ನಂತರ ಪ್ರತಿ ಒಂದು ಕೆಜಿ ಈರುಳ್ಳಿಗೆ ಕೇವಲ ಒಂದು ರೂಪಾಯಿ ಮಾತ್ರ ದೊರೆತಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯ ಎಲ್ಲ ಕಡಿತಗಳನ್ನು ಕಳೆದ ನಂತರ ಆತನಿಗೆ ದೊರೆತಿರುವುದು ಕೇವಲ ರೂ. 2.49 ಮಾತ್ರ. ಈ ಮೊತ್ತವನ್ನೂ 15 ದಿನಗಳ ನಂತರದ ದಿನಾಂಕ ನಮೂದಿಸಿ ಚೆಕ್ ನೀಡಲಾಗಿದೆ ಎಂದು timesofindia.com ವರದಿ ಮಾಡಿದೆ.

ಈ ಮೊತ್ತವನ್ನು ಚವಾಣ್ ವರ್ತಕರಿಂದ  ನೇರವಾಗಿ ಪಡೆಯಬೇಕಿದ್ದು, ತನ್ನ ಶ್ರಮಕ್ಕೆ ಇದು ತಕ್ಕ ಪ್ರತಿಫಲವಲ್ಲ ಎಂಬುದು ಅವರ ಅಳಲಾಗಿದೆ. "ನನಗೆ ಪ್ರತಿ ಒಂದು ಕೆಜಿ ಈರುಳ್ಳಿಗೆ ಒಂದು ರೂಪಾಯಿಯಂತೆ 512 ರೂಪಾಯಿ ದೊರೆಯಿತು. ನಂತರ ವರ್ತಕನು ಸಾಗಾಣಿಕೆ ವೆಚ್ಚ, ಸರಕನ್ನು ಕೆಳಗಿಳಿಸುವ ವೆಚ್ಚ ಹಾಗೂ ಮಾಪನದ ವೆಚ್ಚವೆಂದು ರೂ. 509.50 ಕಡಿತಗೊಳಿಸಿದ" ಎಂದ ನಿರಾಸೆಗೊಳಗಾದ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಹಂಗಾಮಿನಲ್ಲಿ ಅವರು ಪ್ರತಿ ಕೆಜಿ ಈರುಳ್ಳಿಗೆ ರೂ. 20 ಗಳಿಸುವಲ್ಲಿ ಯಶಸ್ವಿಯಾಗಿದ್ದರು.

"ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ಬೆಲೆ ದುಪ್ಪಟ್ಟಾಗಿದೆ. ಸುಮಾರು 500 ಕೆಜಿ ಈರುಳ್ಳಿ ಬೆಳೆಯಲು ನಾನು ಈ ಬಾರಿ ರೂ. 40,000 ವೆಚ್ಚ ಮಾಡಿದ್ದೆ" ಎಂದು ಚವಾಣ್ ತಿಳಿಸಿದ್ದಾರೆ.

ಎರಡು ರೂಪಾಯಿಗೂ ಚೆಕ್ ನೀಡಿರುವ ಕುರಿತು ವಿವರಿಸಿರುವ ಈರುಳ್ಳಿ ಖರೀದಿಸಿದ ವರ್ತಕ ನಾಸಿರ್ ಖಲೀಫಾ, "ನಾವು ರಶೀದಿ, ಚೆಕ್ ನೀಡುವ ವ್ಯವಸ್ಥೆಯನ್ನು ಗಣಕೀಕರಣಗೊಳಿಸಿದ್ದೇವೆ. ಇದರ ಫಲಿತಾಂಶವಾಗಿ ಚವಾಣ್ ಚೆಕ್‌ಗೆ 15 ದಿನಗಳ ನಂತರದ ದಿನಾಂಕ ನಮೂದಿಸಲಾಗಿದೆ. ಚೆಕ್ ಮೊತ್ತದ ಹೊರತಾಗಿ ಇದು ಸಾಮಾನ್ಯ ಪ್ರಕ್ರಿಯೆಯಾಗಿದ್ದು, ನಾವು ಈ ಹಿಂದೆಯೂ ಸಣ್ಣ ಮೊತ್ತದ ಚೆಕ್ ವಿತರಿಸಿದ್ದೇವೆ" ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸ್ವಾಭಿಮಾನಿ ಶೇತ್ಕಾರಿ ಸಂಘಟನೆಯ ಮುಖ್ಯಸ್ಥ ರಾಜು ಶೆಟ್ಟಿ, "ರೈತರ ಜೀವನವನ್ನು ನಾಶ ಮಾಡುವ ಮೂಲಕ ಅವರು ತಮ್ಮ ಬೆಳೆಗಳಿಗೆ ಗೌರವಾನ್ವಿತ ಬೆಲೆ ಪಡೆಯದಂತೆ ತಡೆಯಲು ಸರ್ಕಾರಕ್ಕೆ ಹೇಗೆ ಸಾಧ್ಯ? ಅಧಿಕ ಈರುಳ್ಳಿ ಆವಕವನ್ನು ರಫ್ತು ಮಾಡಬೇಕೆಂದು ನಾವು ಆಗ್ರಹಿಸುತ್ತೇವೆ. ಹಣದುಬ್ಬರ ನಿಯಂತ್ರಿಸುವ ನೆಪದಲ್ಲಿ ರೈತರು ಮತ್ತಷ್ಟು ಹತಾಶರಾಗುವಂಥ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ" ಎಂದು ಕಿಡಿ ಕಾರಿದ್ದಾರೆ.

ನಾಸಿಕ್ ಜಿಲ್ಲೆಯ ಉಸ್ತುವಾರಿ ಮಂತ್ರಿ ದಾದಾ ಭೂಸ್ಲೆ ಕೂಡಾ ನಾಫೆಡ್ ಮೇಲೆ ಆಶಾವಾದ ಹೊಂದಿದ್ದಾರೆ. ಕೇಂದ್ರ ಸರ್ಕಾರಿ ಸಂಸ್ಥೆಯಾದ ನಾಫೆಡ್‌ಗೆ ಈರುಳ್ಳಿ ಕೊಳ್ಳುವುದನ್ನು ಆರಂಭಿಸುವಂತೆ ರಾಜ್ಯ ಸರ್ಕಾರದ ವತಿಯಿಂದ ಮನವಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

Similar News