×
Ad

ಸಚಿವನ ಕೊಲೆ ಪ್ರಕರಣ: ಆರೋಪಿ ಪೊಲೀಸ್‌ ಅಧಿಕಾರಿಯನ್ನು ಮಾನಸಿಕ ಅಸ್ವಸ್ಥನೆಂದು ಬಿಂಬಿಸಲು ಪ್ರಯತ್ನ; ಮಾಜಿ ಡಿಜಿಪಿ ಆರೋಪ

Update: 2023-02-24 14:00 IST

ಭುವನೇಶ್ವರ: ಒಡಿಶಾ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ದಾಸ್‌ನನ್ನು ಮಾನಸಿಕ ಅಸ್ವಸ್ಥ ಎಂದು ಸಾಬೀತುಪಡಿಸಿ, ಆತನ ಶಿಕ್ಷೆಯ ಪ್ರಮಾಣದಲ್ಲಿ ರಿಯಾಯಿತಿ ಕೊಡಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮಾಜಿ ಪೊಲೀಸ್ ಮಹಾ ನಿರ್ದೇಶಕ ಹಾಗೂ ಹಿರಿಯ ಬಿಜೆಪಿ ನಾಯಕ ಪ್ರಕಾಶ್ ಮಿಶ್ರಾ ಗಂಭೀರ ಆರೋಪ ಮಾಡಿದ್ದಾರೆ.

ಇದಲ್ಲದೆ, ಜನವರಿ 29ರಂದು ಝಾರ್ಸುಗುಡಾ ಜಿಲ್ಲೆಯ ಬ್ರಜರಾಜ್‌ನಗರ್‌ನಲ್ಲಿ ಹತ್ಯೆಗೀಡಾದ ಆರೋಗ್ಯ ಸಚಿವರ ಮರಣವನ್ನು ಘೋಷಿಸಿದ ಸಮಯದ ಕುರಿತೂ ಅವರು ಪ್ರಶ್ನೆ ಎತ್ತಿದ್ದಾರೆ. "ಅಪರಾಧ ವಿಭಾಗದ ತನಿಖೆಯು ಸರಿಯಾದ ಹಳಿಯಲ್ಲಿ ಸಾಗುತ್ತಿಲ್ಲ. ಆರೋಪಿ ಗೋಪಾಲ್ ದಾಸ್ ಶಿಕ್ಷೆಯ ಪ್ರಮಾಣದಲ್ಲಿ ರಿಯಾಯಿತಿ ಒದಗಿಸುವ ಪ್ರಯತ್ನಗಳು ನಡೆಯುತ್ತಿವೆ. ತನಿಖೆ ಸಾಗುತ್ತಿರುವ ದಿಕ್ಕು ನೋಡಿದರೆ, ಆರೋಪಿ ಗೋಪಾಲ್ ದಾಸ್ ಮಾನಸಿಕ ಅಸ್ವಸ್ಥ ಎಂದು ರುಜುವಾತು ಮಾಡುವ ಪ್ರಯತ್ನಗಳು ನಡೆಯುತ್ತಿರುವಂತೆ ಕಾಣುತ್ತಿದೆ" ಎಂದು ಗುರುವಾರ ಅವರು ವರದಿಗಾರರಿಗೆ ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ, ಗುಂಡು ಸಚಿವರ ಎದೆಯ ಎಡಭಾಗಕ್ಕೆ ತಗುಲಿದೆ. ಇಂತಹ ಸಂದರ್ಭಗಳಲ್ಲಿ ಸಾಮಾನ್ಯವಾಗಿ ವ್ಯಕ್ತಿಯೊಬ್ಬ ಕೇವಲ ಐದು ನಿಮಿಷದಲ್ಲಿ ಸಾವನ್ನಪ್ಪುತ್ತಾನೆ ಎಂದಿರುವ ಪ್ರಕಾಶ್ ಮಿಶ್ರಾ, ಹೀಗಿದ್ದೂ ಅವರನ್ನು ಹೇಗೆ ಏರ್‌ಲಿಫ್ಟ್ ಮೂಲಕ ಖಾಸಗಿ ಆಸ್ಪತ್ರೆಗೆ ಸಾಗಿಸಿ, ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ಪ್ರಶ್ನಿಸಿದ್ದಾರೆ.

ಮೃತಪಟ್ಟ ಸಮಯವನ್ನು ಮುಚ್ಚಿಡುವುದು ಅಪರಾಧವಾಗಿದ್ದು, ಇಂತಹ ಪ್ರಯತ್ನ ನಡೆಸುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿರುವ ಮಿಶ್ರಾ, ಗುಜರಾತ್‌ನಲ್ಲಿ ಗೋಪಾಲ್ ದಾಸ್ ಮೇಲೆ ನಡೆಸಿದ ಸುಳ್ಳು ಪತ್ತೆ ಪರೀಕ್ಷೆ ಹಾಗೂ ಮಂಪರು ಪರೀಕ್ಷೆ ವರದಿಯನ್ನು ಏಕೆ ಸಾರ್ವಜನಿಕಗೊಳಿಸಲಾಗಿಲ್ಲ ಎಂದೂ ಪ್ರಶ್ನಿಸಿದ್ದಾರೆ.

ಈ ನಡುವೆ, ತನಿಖೆಯು ಸರಿಯಾದ ಹಳಿಯಲ್ಲಿ ಸಾಗುತ್ತಿದ್ದು, ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಎಲ್ಲ ಬಗೆಯ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಟಿ.ಕೆ‌.ಬೆಹೆರಾ ಸ್ಪಷ್ಟಪಡಿಸಿದ್ದಾರೆ.

Similar News