ಮಹಿಳಾ ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಋತುಚಕ್ರ ರಜೆ: ಅರ್ಜಿ ವಿಚಾರಣೆಗೆ ನಿರಾಕರಿಸಿದ ಸುಪ್ರೀಂಕೋರ್ಟ್

Update: 2023-02-24 08:40 GMT

ಹೊಸ ದಿಲ್ಲಿ: ಮಹಿಳಾ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಅವರು ವ್ಯಾಸಂಗ ಮತ್ತು ಉದ್ಯೋಗ ಮಾಡುವ ಸ್ಥಳಗಳಲ್ಲಿ ಋತುಚಕ್ರ ರಜೆ ನೀಡಲು ಅನುವಾಗುವಂತೆ ಎಲ್ಲ ರಾಜ್ಯಗಳಿಗೂ ನಿಯಮ ರೂಪಿಸಲು ನಿರ್ದೇಶನ ನೀಡಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಶುಕ್ರವಾರ ಸುಪ್ರೀಂಕೋರ್ಟ್ ನಿರಾಕರಿಸಿದೆ ಎಂದು timesofindia.com ವರದಿ ಮಾಡಿದೆ.

ಈ ವಿಚಾರವು ಸರ್ಕಾರದ ನೀತಿ ನಿರೂಪಣೆ ಅಧಿಕಾರ ವ್ಯಾಪ್ತಿಗೆ ಒಳಪಡಲಿದೆ ಎಂಬ ಅಂಶವನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು, ಈ ಕುರಿತು ನಿರ್ಣಯ ಕೈಗೊಳ್ಳಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಪ್ರಸ್ತಾಪ ಸಲ್ಲಿಸಬಹುದು ಎಂದು ಸೂಚಿಸಿತು.

ಹೆರಿಗೆ ಸೌಲಭ್ಯ ಕಾಯ್ದೆ, 1961ರ ಸೆಕ್ಷನ್ 14 ಅನ್ನು ಜಾರಿಗೊಳಿಸುವಂತೆ ಕೇಂದ್ರ ಮತ್ತು ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸಬೇಕು ಎಂದು ದಿಲ್ಲಿ ನಿವಾಸಿಯಾದ ಶೈಲೇಂದ್ರ ಮನಿ ತ್ರಿಪಾಠಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಹೆರಿಗೆ ಸೌಲಭ್ಯ ಕಾಯ್ದೆಯ ಸೆಕ್ಷನ್ 14ರ ಪ್ರಕಾರ, ಪರೀಕ್ಷಕರ ನೇಮಕಾತಿಗೆ ಅವಕಾಶ ಕಲ್ಪಿಸಲಾಗಿದ್ದು, ಈ ಅಧಿಕಾರಿಗಳು ಈ ಕಾಯ್ದೆಯಡಿ ಸ್ಥಳೀಯ ವ್ಯಾಪ್ತಿ ಮಿತಿಯನ್ನು ವ್ಯಾಖ್ಯಾನಿಸಿ, ತಮ್ಮ ಅಧಿಕಾರವನ್ನು ಚಲಾಯಿಸಬಹುದಾಗಿದೆ.

Similar News