ಜಾತಿ, ಧರ್ಮಗಳ ಕುರಿತ ಸಂಶೋಧನೆ ಸೂಕ್ಷ್ಮವಾದದ್ದು: ಫಿಲಿಪೊ ಅಸೆಲ್ಲಾ ಗಡಿಪಾರು ಕುರಿತು ಹೈಕೋರ್ಟ್‌ ಗೆ ಕೇಂದ್ರ ಸರಕಾರ

"ಇಂಗ್ಲೆಂಡ್‌ ಮೂಲದ ಮಾನವಶಾಸ್ತ್ರಜ್ಞ ವೀಸಾ ನಿಯಮ ಉಲ್ಲಂಘಿಸಿದ್ದಾರೆ"

Update: 2023-02-24 18:35 GMT

ಹೊಸದಿಲ್ಲಿ: ಇಂಗ್ಲೆಂಡ್‌ ಮೂಲದ ಮಾನವಶಾಸ್ತ್ರಜ್ಞ ಫಿಲಿಪ್ಪೋ ಒಸೆಲ್ಲಾ ಅವರನ್ನು ಗಡೀಪಾರುಗೊಳಿಸಿದ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ, ಜಾತಿ ಮತ್ತು ಧರ್ಮಕ್ಕೆ ಸಂಬಂಧಿಸಿದ ವಿಚಾರಗಳ ಕುರಿತು ಸಂಶೋಧನೆ ʻಸೂಕ್ಷ್ಮʼ ವಿಚಾರವಾಗಿದೆ ಹಾಗೂ ಇಂತಹ ಸಂಶೋಧನೆ ಕೈಗೊಳ್ಳುವುದು ವೀಸಾ ನಿಯಮಗಳ ಉಲ್ಲಂಘನೆಯಾಗಿದೆ ಎಂದು ದಿಲ್ಲಿ ಹೈಕೋರ್ಟಿಗೆ ತಿಳಿಸಿದೆ.

ಇಂಗ್ಲೆಂಡ್‌ನ ಯುನಿವರ್ಸಿಟಿ ಆಫ್‌ ಸಸೆಕ್ಸ್‌ನ ಸ್ಕೂಲ್‌ ಆಫ್‌ ಗ್ಲೋಬಲ್‌ ಸ್ಟಡೀಸ್‌ ಇದರ ಮಾನವಶಾಸ್ತ್ರ ವಿಭಾಗದ ಮಾನವಶಾಸ್ತ್ರ ಮತ್ತು ದಕ್ಷಿಣ ಏಷ್ಯಾ ಅಧ್ಯಯನಗಳ ಪ್ರೊಫೆಸರ್‌ ಆಗಿರುವ ಒಸೆಲ್ಲಾ ಅವರು ಕಳೆದ 30 ವರ್ಷಗಳಲ್ಲಿ ಕೇರಳದ ಬಗ್ಗೆ ಬಹಳಷ್ಟು ಬರೆದಿದ್ದಾರೆ. ಕಳೆದ ವರ್ಷದ ಮಾರ್ಚ್‌ 23 ರಂದು ಅವರು ತಿರುವನಂತಪುರಂನಲ್ಲಿ ನಡೆಯಲಿರುವ ಸಮ್ಮೇಳನವೊಂದರಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದರೆ ಯಾವುದೇ ಕಾರಣ ನೀಡದೆ ಅವರನ್ನು ವಿಮಾನ ನಿಲ್ದಾಣದಿಂದಲೇ ವಾಪಸ್‌ ಕಳುಹಿಸಲಾಗಿತ್ತು.

ತನ್ನ ಗಡೀಪಾರು ಆದೇಶವನ್ನು ರದ್ದುಗೊಳಿಸುವಂತೆ ಪ್ರೊಫೆಸರ್‌ ಕೋರಿದ್ದರು. ಕೇಂದ್ರ ಸರ್ಕಾರವು ಗೃಹ ವ್ಯವಹಾರಗಳ ಸಚಿವಾಲಯದ ಇಮಿಗ್ರೇಶನ್‌ ಬ್ಯುರೋದ  ವಿದೇಶಿಗರ ಪ್ರಾದೇಶಿಕ ನೋಂದಣಿ ಅಧಿಕಾರಿಯ ಮೂಲಕ ಸಲ್ಲಿಸಿದ ಅಫಿಡವಿಟ್‌ನಲ್ಲಿ ಮೇಲಿನಂತೆ ನ್ಯಾಯಾಲಯಕ್ಕೆ ತಿಳಿಸಿತ್ತು.

ಈ ಪ್ರಕರಣದ ಮುಂದಿನ ವಿಚಾರಣೆ ಮೇ 14ಕ್ಕೆ ನಿಗದಿಯಾಗಿದೆ.

ತಾವು ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಕುರುಹಿಲ್ಲ ಹಾಗೂ ಇಮಿಗ್ರೇಶನ್‌ನಲ್ಲಿ ತಾವು ಈ ಹಿಂದೆ ಯಾವುದೇ ಸಮಸ್ಯೆಗಳನ್ನು ಎದುರಿಸಿರಲಿಲ್ಲ ಎಂದು ಪ್ರೊಫೆಸರ್‌ ಹೇಳಿದ್ದರಲ್ಲದೆ ತಮ್ಮನ್ನು ದೊಡ್ಡ ಅಪರಾಧಿಯೆಂಬಂತೆ ಬಿಂಬಿಸಿ ತಾನು ಆಗಮಿಸಿದ ವಿಮಾನದಲ್ಲಿಯೇ ವಾಪಸ್‌ ಕಳುಹಿಸಲಾಗಿತ್ತು ಎಂದು ಮಾಹಿತಿ ನೀಡಿದ್ದರು.

Similar News