ಹೆಬ್ರಿ: ಕಬ್ಬಿಣದ ಕೊಳವೆಯಿಂದ ಹೊಡೆದು ಮಗನನ್ನೇ ಕೊಂದ ತಂದೆ; ಪ್ರಕರಣ ದಾಖಲು

Update: 2023-02-25 13:31 GMT

ಹೆಬ್ರಿ, ಫೆ.25: ಮದ್ಯ ಸೇವಿಸಿ ಬಂದು ಗಲಾಟೆ ಮಾಡಿದ ಮಗನನ್ನೇ ತಂದೆ ಕಬ್ಬಿಣದ ಕೊಳವೆಯಿಂದ ಹೊಡೆದು ಕೊಲೆ ಮಾಡಿದ್ದಾರೆ ಎನ್ನಲಾದ ಘಟನೆ ಫೆ.24ರಂದು ರಾತ್ರಿ 9ಗಂಟೆ ಸುಮಾರಿಗೆ ವರಂಗ ಗ್ರಾಮದ ಮೂಡುಬೆಟ್ಟು ಎಂಬಲ್ಲಿ ನಡೆದಿದೆ.

ವರಂಗ ಗ್ರಾಮದ ಮೂಡಬೆಟ್ಟು ನಿವಾಸಿ ಸತೀಶ್ ಪೂಜಾರಿ (40) ಮೃತರು ಎಂದು ಗುರುತಿಸಲಾಗಿದೆ. ಇವರ ತಂದೆ ಕುಟ್ಟಿ ಪೂಜಾರಿ ಕೊಲೆ ಆರೋಪಿ. ಇವರಿಬ್ಬರು ಪ್ರತಿದಿನ ಮದ್ಯಪಾನ ಮಾಡಿ ಗಲಾಟೆ ಮಾಡಿಕೊಳ್ಳು ತ್ತಿದ್ದರೆನ್ನಲಾಗಿದೆ. ರಾತ್ರಿ ವೇಳೆ ಕುಟ್ಟಿ ಪೂಜಾರಿ ಮನೆಯ ಒಳಗೆ ಮಲಗಿದ್ದಾಗ ಸತೀಶ ಪೂಜಾರಿಯು ವಿಪರೀತ ಮದ್ಯಪಾನ ಸೇವಿಸಿ ಬಂದಿದ್ದರು.

ತಂದೆ ಮಲಗಿದ್ದ ಕೋಣೆಯ ಬಾಗಿಲಿಗೆ ಕಾಲಿನಿಂದ ಒದ್ದ ಸತೀಶ್ ಪೂಜಾರಿ, ಕುಟ್ಟಿ ಪೂಜಾರಿಯನ್ನು ಮನೆಯ ಹೊರಗೆ ಅಂಗಳಕ್ಕೆ ಎಳೆದು ತಂದರು. ಇದರಿಂದ ಕೋಪಗೊಂಡ ಕುಟ್ಟಿ ಪೂಜಾರಿ ಅಡುಗೆ ಕೋಣೆಯಲ್ಲಿದ್ದ ಒಲೆ ಬೆಂಕಿ ಊದುವ ಕಬ್ಬಿಣದ ಕೊಳವೆಯಿಂದ ಸತೀಶ ಪೂಜಾರಿಯ ಕೈಕಾಲುಗಳಿಗೆ ಹಲ್ಲೆ ನಡೆಸಿದರು. ಇದರ ಪರಿಣಾಮ ಸತೀಶ ಪೂಜಾರಿ ಮೃತಪಟ್ಟಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News