×
Ad

ಅದಾನಿಯ ಬೆಂಬಲಕ್ಕೆ ನಿಲ್ಲಬೇಕೆಂದು ವಿತ್ತಸಚಿವೆಗೆ ಒತ್ತಡವಿದೆಯೇ?: ಮಹುವಾ ಮೊಯಿತ್ರಾ ಪ್ರಶ್ನೆ

Update: 2023-02-25 22:30 IST

ಹೊಸದಿಲ್ಲಿ, ಫೆ.25: ಹಿಂಡನ್ಬರ್ಗ್ ವರದಿಯ ಹೊಡೆತದಿಂದ ಅದಾನಿ ಗ್ರೂಪ್ ಕಂಪನಿಗಳ ಶೇರುಗಳ ಬೆಲೆಗಳಲ್ಲಿ ಕುಸಿತ ಮುಂದುವರಿದಿರುವಂತೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು,ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಅದಾನಿ ಗ್ರೂಪ್ ಬೆಂಬಲಿಸಲು ಒತ್ತಡಕ್ಕೆ ಸಿಲುಕಿದ್ದಾರೆಯೇ ಎಂದು ಪ್ರಶ್ನಿಸಿದಾರೆ.

ಅದಾನಿ ಕಂಪನಿಗಳಲ್ಲಿ ಎಲ್ಐಸಿಯ ಹೂಡಿಕೆಗಳ ವೌಲ್ಯ ಖರೀದಿ ಬೆಲೆಗಿಂತ 3,200 ಕೋ.ರೂ. ಕಡಿಮೆಯಾಗಿದೆ ಎಂಬ ಮಾಧ್ಯಮ ವರದಿಯ ತುಣುಕನ್ನು ಲಗತ್ತಿಸಿ ಶುಕ್ರವಾರ ಟ್ವೀಟಿಸಿರುವ ಮೊಯಿತ್ರಾ,‘ಭಾರತೀಯರನ್ನು ಬಲಿಗೊಟ್ಟು ಅದಾನಿಯನ್ನು ಬೆಂಬಲಿಸಲು ಅದ್ಯಾವ ಒತ್ತಡ ಸೀತಾರಾಮನ್ ಮೇಲಿದೆ? ನಮಗೆ ಉತ್ತರಗಳು ಬೇಕು ’ ಎಂದು ಹೇಳಿದ್ದಾರೆ.

ಬಾಂಗ್ಲಾದೇಶವು ಅದಾನಿ ಪವರ್ ವಿದ್ಯುತ್ ದರವನ್ನು ಪರಿಷ್ಕರಿಸುವಂತೆ ಮಾಡುವ ಮೂಲಕ ಒಂದೇ ಒಪ್ಪಂದದಲ್ಲಿ ಬುದ್ಧಿವಂತಿಕೆಯನ್ನು ಮೆರೆದಿದೆ. ಆದರೆ ಭಾರತದ ವಿದ್ಯುತ್ ಸಚಿವಾಲಯ ಮತ್ತು ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್ಟಿಪಿಸಿ) ಮೂರ್ಖರಾಗಿಯೇ ಮುಂದುವರಿದಿವೆ ಎಂದೂ ಅವರು ಸರಣಿ ಟ್ವೀಟ್ನಲ್ಲಿ ಹೇಳಿದ್ದಾರೆ.

ಕಲ್ಲಿದ್ದಲು ಉತ್ಪಾದಿತ ವಿದ್ಯುತ್ಗೆ ಬೆಲೆ ತುಂಬ ದುಬಾರಿಯಾಗಿ ಕಂಡು ಬಂದಿದ್ದರಿಂದ ಬಾಂಗ್ಲಾದೇಶದ ಸರಕಾರಿ ಸ್ವಾಮ್ಯದ ವಿದ್ಯುತ್ ಅಭಿವೃದ್ಧಿ ಮಂಡಳಿಯು ಅದಾನಿ ಪವರ್ನೊಂದಿಗಿನ 2017ರ ಒಪ್ಪಂದವನ್ನು ಪರಿಷ್ಕರಿಸುವಂತೆ ಈ ತಿಂಗಳ ಆರಂಭದಲ್ಲಿ ಅದಕ್ಕೆ ಸೂಚಿಸಿತ್ತು. ಗುರುವಾರ ಅದಾನಿ ಪವರ್ ಬಾಂಗ್ಲಾದೇಶಕ್ಕೆ ಕಡಿಮೆ ದರದಲ್ಲಿ ವಿದ್ಯುತ್ ಪೂರೈಸುವುದಾಗಿ ಭರವಸೆ ನೀಡಿತ್ತು.

‘ಅದಾನಿಯ ವಂಚನೆಯನ್ನು ಬಯಲಿಗೆಳೆಯುವ ಮೂಲಕ ಮಾಧ್ಯಮಗಳ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದು ಅನಿಸುತ್ತಿದೆ. ಭಾರತೀಯ ಮಾಧ್ಯಮಗಳು ಮತ್ತು ನಿಯಂತ್ರಣ ಸಂಸ್ಥೆಗಳು ತಮ್ಮ ಕರ್ತವ್ಯ ನಿರ್ವಹಿಸಲು ವಿಫಲಗೊಂಡಿವೆ ’ ಎಂದೂ ಮೊಯಿತ್ರಾ ಟ್ವೀಟಿಸಿದ್ದಾರೆ.

Similar News