ಕರ್ನಾಟಕವಿಲ್ಲದೆ ನಾವು ಭಾರತವನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ: ಪ್ರಧಾನಿ ಮೋದಿ
ಹೊಸದಿಲ್ಲಿ,ಫೆ.25: ಕರ್ನಾಟಕದ ಕೊಡುಗೆಗಳಿಲ್ಲದೆ ಭಾರತದ ಅನನ್ಯತೆ,ಸಂಪ್ರದಾಯಗಳು ಮತ್ತು ಸ್ಫೂರ್ತಿಗಳನ್ನು ನಾವು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ಶನಿವಾರ ದಿಲ್ಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವದ ಪ್ರಯುಕ್ತ ಇಲ್ಲಿಯ ತಾಲ್ಕಟೋರಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ‘ಬಾರಿಸು ಕನ್ನಡ ಡಿಂಡಿಮವ ’ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಮೋದಿ,ದಿಲ್ಲಿ ಕರ್ನಾಟಕ ಸಂಘವು ವೈಭವಪೂರ್ಣ ಸಂಪ್ರದಾಯವನ್ನು ಮುನ್ನಡೆಸುತ್ತಿದೆ. ಸಂಘದ ಅಮೃತ ಮಹೋತ್ಸವ ಆಚರಣೆಯು ದೇಶದ ಸ್ವಾತಂತ್ರ ಅಮೃತ ಮಹೋತ್ಸವದ ಸಂಭ್ರಮದ ಸಂದರ್ಭದಲ್ಲಿಯೇ ನಡೆಯುತ್ತಿದೆ. 75 ವರ್ಷಗಳ ಹಿಂದಿನಿಂದ ಸಂದರ್ಭಗಳು ಮತ್ತು ಸನ್ನಿವೇಶಗಳನ್ನು ನಾವು ವಿಶ್ಲೇಷಿಸಿದರೆ ಭಾರತದ ಅಮರ ಆತ್ಮವನ್ನು ಕಾಣಬಹುದು ಎಂದು ಹೇಳಿದರು.
ಕರ್ನಾಟಕ ಸಂಘದ ಸ್ಥಾಪನೆಯು ದೇಶದ ಮೊದಲ ಕೆಲವು ವರ್ಷಗಳಲ್ಲಿ ಅದನ್ನು ಸದೃಢಗೊಳಿಸುವ ಜನತೆಯ ದೃಢ ನಿರ್ಧಾರಕ್ಕೆ ಪುರಾವೆಯಾಗಿದೆ ಮತ್ತು ಇಂದು ಅಮೃತ ಕಾಲದ ಆರಂಭದಲ್ಲಿ ಅದೇ ಸಮರ್ಪಣಾ ಮನೋಭಾವ ಮತ್ತು ಶಕ್ತಿಯು ಗೋಚರವಾಗುತ್ತಿದೆ ಎಂದ ಮೋದಿ,ಕರ್ನಾಟಕ ಸಂಘದ 75 ವರ್ಷಗಳ ಸುದೀರ್ಘ ಪಯಣದಲ್ಲಿ ಜೊತೆಯಾಗಿದ್ದ ಎಲ್ಲರನ್ನೂ ಅಭಿನಂದಿಸಿದರು.
ಪೌರಾಣಿಕ ಕಾಲದ ಹನುಮಂತನ ಪಾತ್ರಕ್ಕೆ ಹೋಲಿಸಿದ ಮೋದಿ,ಭಾರತಕ್ಕಾಗಿ ಕರ್ನಾಟಕವು ಅಂತಹುದೇ ಪಾತ್ರವನ್ನು ನಿರ್ವಹಿಸಿದೆ. ಯುಗ ಬದಲಾವಣೆಯ ಆಂದೋಲನವು ಅಯೋಧ್ಯೆಯಿಂದ ಆರಂಭಗೊಂಡು ರಾಮೇಶ್ವರಂನಲ್ಲಿ ಅಂತ್ಯಗೊಂಡರೂ ಅದು ಕರ್ನಾಟಕದಿಂದ ಶಕ್ತಿಯನ್ನು ಪಡೆದುಕೊಂಡಿತ್ತು ಎಂದರು.
‘ಏಕ್ ಭಾರತ ಶ್ರೇಷ್ಠ ಭಾರತ ’ ಮಂತ್ರಕ್ಕೆ ಅನುಗುಣವಾಗಿ ಬದುಕುತ್ತಿರುವುದಕ್ಕಾಗಿ ಕರ್ನಾಟಕದ ಜನರನ್ನು ಹೊಗಳಿದ ಅವರು,ರಾಷ್ಟ್ರಕವಿ ಕುವೆಂಪು ಅವರು ರಚಿಸಿದ್ದ ನಾಡಗೀತೆಯ ಕುರಿತೂ ಮಾತನಾಡಿದರು. ಅದರಲ್ಲಿ ರಾಷ್ಟ್ರೀಯ ಭಾವನೆಗಳನ್ನು ಸುಂದರವಾಗಿ ಅಭಿವ್ಯಕ್ತಿಸಲಾಗಿದೆ ಎಂದು ಪ್ರಶಂಸಿಸಿದರು.
ಭಾರತವು ಜಿ-20ಯಂತಹ ಜಾಗತಿಕ ಸಂಘಟನೆಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳುತ್ತಿರುವಾಗ ‘ಪ್ರಜಾಪ್ರಭುತ್ವದ ಮಾತೆ’ಯ ಆದರ್ಶಗಳಿಂದ ಮಾರ್ಗದರ್ಶನವನ್ನು ಪಡೆದಿದೆ. ಅನುಭವ ಮಂಟಪದ ಮೂಲಕ ಬಸವೇಶ್ವರರ ವಚನಗಳು ಮತ್ತು ಪ್ರಜಾಸತ್ತಾತ್ಮಕ ಧರ್ಮೋಪದೇಶಗಳು ಭಾರತಕ್ಕೆ ಬೆಳಕಿನ ಕಿರಣವಾಗಿದೆ ಎಂದ ಮೋದಿ,ಲಂಡನ್ನಲ್ಲಿ ಅವರ ಪ್ರತಿಮೆಯನ್ನು ಅನಾವರಣಗೊಳಿಸುವ ಅವಕಾಶ ತನಗೆ ದೊರಕಿದ್ದು ತನ್ನ ಸೌಭಾಗ್ಯವಾಗಿತ್ತು ಎಂದರು.
ವಿಶ್ವಾದ್ಯಂತ ಆಚರಿಸಲಾಗುತ್ತಿರುವ ‘ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ’ದ ಕುರಿತೂ ಮಾತನಾಡಿದ ಮೋದಿ,ಕರ್ನಾಟಕವು ಭಾರತದ ಸಿರಿಧಾನ್ಯಗಳ ಪ್ರಮುಖ ಉತ್ಪಾದನಾ ಕೇಂದ್ರವಾಗಿದೆ.ಶ್ರೀ ಅನ್ನ ರಾಗಿಯು ಕರ್ನಾಟಕದ ಸಂಸ್ಕೃತಿ ಮತ್ತು ಸಾಮಾಜಿಕ ಅನನ್ಯತೆಯ ಭಾಗವಾಗಿದೆ ಎಂದರು. ಯಡಿಯೂರಪ್ಪನವರ ಕಾಲದಿಂದಲೂ ಕರ್ನಾಟಕದಲ್ಲಿ ಸಿರಿ ಧಾನ್ಯಗಳ ಉತ್ತೇಜನಕ್ಕಾಗಿ ಉಪಕ್ರಮಗಳನ್ನು ಪ್ರಮುಖವಾಗಿ ಬಿಂಬಿಸಿದ ಮೋದಿ,ಇಡೀ ದೇಶವು ಕರ್ನಾಟಕದ ಮಾರ್ಗವನ್ನು ಅನುಸರಿಸುತ್ತಿದೆ ಮತ್ತು ಈ ಧಾನ್ಯಗಳನ್ನು ‘ಶ್ರೀ ಅನ್ನ’ಎಂದು ಕರೆಯತೊಡಗಿದೆ ಎಂದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಆದಿಚುಂಚನಗಿರಿ ಮಠದ ಪೀಠಾಧೀಶ ಶ್ರೀ ನಿರ್ಮಲಾನಂದನಾಥ,ಅಮೃತ ಮಹೋತ್ಸವ ಆಚರಣೆ ಸಮಿತಿಯ ಅಧ್ಯಕ ಸಿ.ಟಿ.ರವಿ ಮತ್ತು ದಿಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಂ.ನಾಗರಾಜ ಮತ್ತಿತರರು ಉಪಸ್ಥಿತರಿದ್ದರು.