ಒಂದು ಸಿನೆಮಾ ಕಥೆ, ‘ಸೌತ್ ಇಂಡಿಯನ್ ಹೀರೊ’

Update: 2023-02-26 08:10 GMT

ಸಿನೆಮಾ, ನಿರ್ದೇಶಕನ ಒಂದು ಸುಂದರ ಕನಸು. ಸಿನೆಮಾ ಒಂದು ತಪಸ್ಸು. ಸಿನೆಮಾ ಕಲಾವಿದರ ಹುಮ್ಮಸ್ಸು. ಇಂಥ ಸಿನೆಮಾಗಳನ್ನು ಅದರಲ್ಲೂ ಭಾರತೀಯ ಚಿತ್ರರಂಗವನ್ನು ಎರಡು ಭಾಗಗಳಾಗಿ ವಿಭಾಗಿಸಿ ನೋಡುವ ಅಭ್ಯಾಸ ಮೊದಲಿನಿಂದಲೂ ಇದ್ದೇ ಇದೆ. ಅದರಲ್ಲೂ ಸೌತ್ ಇಂಡಿಯನ್ ಸಿನೆಮಾಗಳು, ನಾರ್ತ್ ಇಂಡಿಯನ್ ಸಿನೆಮಾಗಳು ಎಂದು ವಿಭಾಗಿಸಿ ನೋಡುವ ಸಂಪ್ರದಾಯ ಇಂದು ನಿನ್ನೆಯದಲ್ಲ. ಸೌತ್ ಇಂಡಿಯನ್ ಸಿನೆಮಾಗಳಿಗೆ ಮಾರ್ಕೆಟ್ ಇಲ್ಲವೆಂಬ ಕಾಲವೂ ಒಂದಿತ್ತು. ಆದರೆ ಈಗ ಹಾಗಲ್ಲ. ಸೌತ್ ಇಂಡಿಯನ್ ಸಿನೆಮಾಗಳದ್ದೇ ದರ್ಬಾರ್. ಈಗ ಯಾಕೆ ಇದೆಲ್ಲ ಎಂದರೆ, ಅದಕ್ಕೂ ಕಾರಣ ಇದೆ. ಅದೇ ‘ಸೌತ್ ಇಂಡಿಯನ್ ಹೀರೊ’ ಸಿನೆಮಾ. ಈ ವಾರ ರಿಲೀಸ್ ಆಗಿ ಎಲ್ಲರ ಮೆಚ್ಚುಗೆ ಪಡೆದಿರುವ ಚಿತ್ರ.

ಸಾಮಾನ್ಯವಾಗಿ ಕೆಲವು ಪ್ರೇಕ್ಷಕರು ಆಗಾಗ ಹೇಳುತ್ತಿರುತ್ತಾರೆ, ಈ ಸೌತ್ ಇಂಡಿಯನ್ ಸಿನೆಮಾ ಗಳಲ್ಲಿ ಒಂದು ಲಾಜಿಕ್ ಇರಲ್ಲ, ಎಲ್ಲಿಂದ ಎಲ್ಲಿಗೋ ಹೋಗಿಬಿಡ್ತಾರೆ, ಬೇಕಾಬಿಟ್ಟಿ ಬಿಲ್ಡಪ್ ಕೊಟ್ಟು ಸಿನೆಮಾ ಮಾಡ್ತಾರೆ, ಇನ್ನು ಫೈಟ್ ಸೀನ್‌ಗಳಲ್ಲಂತೂ ಕೇಳೋ ಹಾಗೇ ಇಲ್ಲ ಎಂದೆಲ್ಲ ಮಾತನಾಡುತ್ತಾರೆ. ಅಂಥ ವಿಷಯವನ್ನೇ ಇಟ್ಟುಕೊಂಡು ತೆರೆಗೆ ಬಂದಿರುವ ಸಿನೆಮಾ ‘ಸೌತ್ ಇಂಡಿಯನ್ ಹೀರೊ’. ಇದು ಸಿನೆಮಾದ ಒಳಗೊಂದು ಸಿನೆಮಾ ಮಾಡುವ ಕಥೆ. ಎಲ್ಲದಕ್ಕೂ ಲಾಜಿಕ್ ಹುಡುಕುವವರೇ ನಾಯಕರಾದರೆ ಹೇಗಿರುತ್ತದೆ ಎಂಬ ಕಲ್ಪನೆಯಲ್ಲೇ ಈ ಚಿತ್ರ ಮೂಡಿಬಂದಿದೆ.

‘ಫಸ್ಟ್ ರ್ಯಾಂಕ್ ರಾಜು’, ‘ರಾಜು ಕನ್ನಡ ಮೀಡಿಯಂ’ ನಂತಹ ಹಾಸ್ಯಪ್ರಧಾನ ಚಿತ್ರಗಳನ್ನು ನಿರ್ದೇಶನ ಮಾಡಿದ ನಿರ್ದೇಶಕ ನರೇಶ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಶಿಲ್ಪಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಿನೆಮಾದ ಬಗ್ಗೆ ಆಸಕ್ತಿ ಇರುವವರಿಗೆ ಈ ಸಿನೆಮಾ ಒಂದು ಸ್ಪೆಷಲ್ ಕಥೆ ಅನಿಸುತ್ತದೆ. ಯಾಕೆಂದರೆ ಈ ಕಥೆ ಸುತ್ತುವುದೇ ಸಿನೆಮಾದ ಸುತ್ತ. ಚಿತ್ರರಂಗದ ಕೆಲವು ಆಂತರಿಕ ವಿಚಾರಗಳನ್ನೂ ಈ ಚಿತ್ರದ ಮೂಲಕ ತೆರೆಯ ಮೇಲೆ ತಂದಿದ್ದಾರೆ ನಿರ್ದೇಶಕರು. ಪ್ರದೇಶದಿಂದ ಪ್ರದೇಶಕ್ಕೆ ಸಿನೆಮಾ ಸಂಸ್ಕೃತಿ ಹೇಗೆ ಭಿನ್ನವಾಗಿರುತ್ತದೆ? ಸಿನೆಮಾದ ಮೇಕಿಂಗ್ ಸ್ಟೈಲ್‌ನಲ್ಲಿರುವ ವ್ಯತ್ಯಾಸಗಳೇನು? ಪ್ರೇಕ್ಷಕರು ಸಿನೆಮಾಗಳನ್ನು ನೋಡುವ ಪರಿ ಎಂಥದ್ದು ಎನ್ನುವುದನ್ನು ‘ಸೌತ್ ಇಂಡಿಯನ್ ಹೀರೊ’ ಚಿತ್ರದ ಮೂಲಕ ತೆರೆಗೆ ತರಲಾಗಿದೆ.

ಸೌತ್ ಇಂಡಿಯಾದಲ್ಲಿ ಕಲಾವಿದರನ್ನು ಪ್ರೇಕ್ಷಕರು ಹೇಗೆಲ್ಲಾ ನೋಡುತ್ತಾರೆ, ಕಲಾವಿದರನ್ನು ಆರಾಧಿಸುವ ಪರಿ ಎಂಥದ್ದು, ಕೆಲವೊಮ್ಮೆ ಅದು ಹುಚ್ಚು ಅಭಿಮಾನ ಎಂದು ಕರೆಸಿಕೊಳ್ಳುವ ಪರಿ, ಚಿತ್ರರಂಗದಲ್ಲಿ ನಡೆಯುವ ನಂಬರ್ ಗೇಮ್, ಸೋಲು ಗೆಲುವಿನ ಆಟ -ಇವೇ ಈ ಸಿನೆಮಾದ ಹೈಲೆಟ್ಸ್. ಪ್ರತಿಯೊಂದಕ್ಕೂ ಲಾಜಿಕ್ ಕೇಳುವ ಮಾಸ್ಟರ್, ತಾವೇ ಹೀರೊ ಆದಾಗ, ಲಾಜಿಕ್ ಹುಡುಕಲು ಹೋಗಿ ಏನೆಲ್ಲಾ ತೊಂದರೆ ಅನುಭವಿಸುತ್ತಾರೆ ಎನ್ನುವುದನ್ನು ಹಾಸ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ. ನಟ ಸಾರ್ಥಕ್, ಲಾಜಿಕ್ ಲಕ್ಷಣ್ ರಾವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸೌತ್ ಇಂಡಿಯಾದ ಕೆಲ ಹೀರೊಗಳ ಗೆಟಪ್‌ನಲ್ಲೂ ಎಂಟ್ರಿ ಕೊಟ್ಟು, ಭರ್ಜರಿ ಮನರಂಜನೆ ನೀಡುತ್ತಾರೆ. ಕಿರುತೆರೆಯಿಂದ, ಹಿರಿತೆರೆಗೆ ಕಾಲಿಟ್ಟಿರುವ ಸಾರ್ಥಕ್, ತಮ್ಮ ಪಾತ್ರದ ಮೂಲಕವೇ ಗಮನ ಸೆಳೆಯುತ್ತಾರೆ.

ಲಾಜಿಕ್, ಆ್ಯಕ್ಷನ್, ಕಾಮಿಡಿ, ಸೆಂಟಿಮೆಂಟ್ ಎಲ್ಲಾ ಶೇಡ್‌ನಲ್ಲೂ ನಾಯಕನ ಅಭಿನಯ ಮೆಚ್ಚುವಂತಿದೆ. ನಾಯಕಿಯಾಗಿ ಕಾಶಿಮಾ ಕೂಡ ಗಮನ ಸೆಳೆಯುತ್ತಾರೆ. ಬೋಲ್ಡ್ ಪಾತ್ರದಲ್ಲಿ ಕಾಶಿಮಾ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಇನ್ನೋರ್ವ ನಾಯಕಿ ಊರ್ವಶಿ ಕೂಡ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದು, ಸೆಂಟಿಮೆಂಟಾಗಿ ಪ್ರೇಕ್ಷಕರನ್ನು ಕಟ್ಟಿಹಾಕುವ ಪ್ರಯತ್ನ ಮಾಡಿದ್ದಾರೆ. ಜೊತೆಗೆ ಪೋಷಕ ಪಾತ್ರಗಳಲ್ಲಿ ಬಣ್ಣ ಹಚ್ಚಿರುವ ವಿಜಯ್ ಚಂಡೂರು, ಅಮಿತ್, ಅಶ್ವಿನ್ ರಾವ್ ಪಲ್ಲಕ್ಕಿ ಕೂಡ ಪ್ರೇಕ್ಷಕರನ್ನು ನಗಿಸುತ್ತಾರೆ. ಸಿನೆಮಾದಲ್ಲಿ ಪಂಚಿಂಗ್ ಡೈಲಾಗ್‌ಗಳಿದ್ದು, ಗಮನ ಸೆಳೆಯುತ್ತವೆ.

ಸಿನೆಮಾದ ಬಗ್ಗೆ ಅತೀವ ಆಸಕ್ತಿ ಹೊಂದಿರುವವರಿಗೆ ಈ ಸಿನೆಮಾ ಖಂಡಿತ ಇಷ್ಟವಾಗುತ್ತದೆ. ಚಿತ್ರ ರಂಗದ ಒಳಗಿನ ಕೆಲವು ವಿಚಾರಗಳು, ವಿಮರ್ಶೆ, ಅಭಿಮಾನಿಗಳ ಪ್ರೀತಿ, ಆಕ್ರೋಶ, ಅಭಿಮಾನ ಎಲ್ಲವೂ ಈ ಸಿನೆಮಾದಲ್ಲಿ ಬಂದು ಹೋಗುತ್ತವೆ. ಇಲ್ಲೊಂದು ಕ್ಯೂಟ್ ಲವ್ ಸ್ಟೋರಿ ಕೂಡ ಇದೆ. ಕೆಲವೊಂದು ಕಡೆ, ಮೇಕಿಂಗ್ ಬಗ್ಗೆ ತಗಾದೆ ತೆಗೆಯಬಹುದು. ಜೊತೆಗೆ ಅನವಶ್ಯಕವಾಗಿ ಕೆಲವೊಂದಿಷ್ಟು ದೃಶ್ಯಗಳ ಸೇರ್ಪಡೆಯಾಗಿದೆ. ನಿರ್ದೇಶಕರು, ನಿರ್ದೇಶನದ ಕಡೆ ಇನ್ನೊಂದಿಷ್ಟು ಗಮನ ಹರಿಸಿದ್ದರೆ ಸಿನೆಮಾ ಇನ್ನೂ ಚೆನ್ನಾಗಿ ಮೂಡಿಬರುತ್ತಿತ್ತು. ಆದರೂ ಲಾಜಿಕ್ ಹುಡುಕದೆ ಸಿನೆಮಾ ನೋಡಬೇಕು ಎನ್ನುವ ಮೆಸೇಜ್ ಪ್ರೇಕ್ಷಕರಿಗೆ ತಲುಪಿದೆ.


ಚಿತ್ರ: ಸೌತ್ ಇಂಡಿಯನ್ ಹೀರೊ
ತಾರಾಗಣ: ಸಾರ್ಥಕ್, ಕಾಶಿಮಾ, ಊರ್ವಶಿ, ವಿಜಯ್ ಚಂಡೂರು, ಅಶ್ವಿನ್ ರಾವ್, ಅಮಿತ್ ನಿರ್ದೇಶಕ: ನರೇಶ್ ಕುಮಾರ್
ಸಂಗೀತ: ಹರ್ಷವರ್ಧನ್ ರಾಜ್
ನಿರ್ಮಾಣ: ಶಿಲ್ಪಾ ಎಲ್.ಎಸ್.

Similar News