ಉದ್ಯೋಗಿಗಳ ನಂತರ ರೊಬೊಟ್‌ಗಳನ್ನೂ ಕೆಲಸದಿಂದ ತೆಗೆದ ಗೂಗಲ್!

Update: 2023-02-26 10:02 GMT

ಕ್ಯಾಲಿಫೋರ್ನಿಯಾ: ತನ್ನ ಕಚೇರಿಯ ಕೆಫೆಟೇರಿಯಾಗಳನ್ನು ಶುಚಿಗೊಳಿಸುತ್ತಿದ್ದ ರೊಬೊಟ್‌ಗಳಿಗೂ ಗೂಗಲ್ (Google) ವಿರಾಮ ನೀಡಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಇನ್ನುಳಿದ ಸಾಮರ್ಥ್ಯದೊಂದಿಗೆ ತನ್ನ ಕಚೇರಿಯ ಕೆಫೆಟೇರಿಯಾಗಳನ್ನು ಶುಚಿಗೊಳಿಸುವ ಎವರಿಡೇ ರೊಬೊಟ್ ತರಬೇತಿ ಹಾಗೂ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ತೊಡಗಿದ್ದ ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್ ಇಂಕ್ ತನ್ನ ಪ್ರಾಯೋಗಿಕ ಇಲಾಖೆಯನ್ನು ಮುಚ್ಚಿದೆ. 

ತಂತ್ರಜ್ಞಾನ ವಲಯದ ಕಂಪನಿಗಳಲ್ಲಿ ಭಾರಿ ವೆಚ್ಚ ಕಡಿತ ಪ್ರಕ್ರಿಯೆಗಳು ಮುಂದುವರಿದಿರುವುದರಿಂದ ತನ್ನ ಆಯವ್ಯಯವನ್ನು ಸರಿದೂಗಿಸಿಕೊಳ್ಳಲು ಗೂಗಲ್ ರೊಬೊಟ್ ಸಾಧನಗಳ ಬಳಕೆಯನ್ನು ಸ್ಥಗಿತಗೊಳಿಸಿದೆ. ಕೃತಕ ಬುದ್ಧಿಮತ್ತೆ ವಿಭಾಗದಲ್ಲಿ ಪ್ರಗತಿ ಸಾಧಿಸಿದ್ದರೂ ರೊಬೊಟ್‌ಗಳು ಹಾಗೂ ಅವುಗಳ ತರಬೇತುದಾರರು ತಮ್ಮ ತಲೆದಂಡದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.

ರೊಬೊಟ್‌ಗಳು ಅತ್ಯಂತ ಉಪಯುಕ್ತವಾಗಿದ್ದರೂ, ಅವುಗಳ ನಿರ್ವಹಣೆ ದುಬಾರಿಯಾಗಿದೆ ಎಂದು ಹೇಳಲಾಗಿದೆ. ಪ್ರತಿ ರೊಬೊಟ್‌ನ ನಿರ್ವಹಣಾ ವೆಚ್ಚ ಹತ್ತಾರು ಸಾವಿರ ಡಾಲರ್ ಆಗಿದ್ದು, ಬಜೆಟ್ ಕಡಿತಕ್ಕೆ ಮುಂದಾಗಿರುವ ಗೂಗಲ್ ಪಾಲಿಗೆ ಈ ಮೊತ್ತ ಹೊರೆಯಾಗಿ ಪರಿಣಮಿಸಿದೆ. ರೊಬೊಟ್‌ಗಳು ಆರ್ಥಿಕವಾಗಿ ಲಾಭದಾಯಕವಲ್ಲವಾದ್ದರಿಂದ ಈ ಯೋಜನೆಯನ್ನು ಹಿಂಪಡೆಯಲಾಗಿದೆ. ಹೀಗಿದ್ದೂ, ಗೂಗಲ್ ಸಂಶೋಧನಾ ಘಟಕದಲ್ಲಿ ರೊಬೊಟ್‌ನ ಕೆಲವು ತಂತ್ರಜ್ಞಾನ ಹಾಗೂ ಉದ್ಯೋಗಿಗಳು ಭಾಗವಾಗುವುದರಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಆಧುನಿಕ ಸಾಧನ ಬಳಸಿ ಇತಿಹಾಸ ನಿರ್ಮಿಸಿದ ಸುಪ್ರೀಂಕೋರ್ಟ್‌ ಗೆ ಮೂವರು ಬೆಂಗಳೂರಿಗರು ನೆರವಾಗಿದ್ದು ಹೇಗೆ?

Similar News