ಅಂಬಾಲ ಪಾಲಿಕೆಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ: ಪ್ರಕರಣ ದಾಖಲು
ಅಂಬಾಲ: ಮಹಾನಗರ ಪಾಲಿಕೆ ಆವರಣದಲ್ಲಿ ತುದಿ ಹರಿದ ರಾಷ್ಟ್ರಧ್ವಜ ಹಾರಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರು ಶನಿವಾರ ಪಾಲಿಕೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಹರಿದ ಧ್ವಜವನ್ನು ಹಾಗೆಯೇ ಬಿಟ್ಟ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ವೆಬ್ ಚಾನಲ್ ಒಂದು ವರದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ರಾಷ್ಟ್ರಧ್ವಜದ ವಿಡಿಯೊವನ್ನು ತಮ್ಮ ಮೊಬೈಲ್‌ನಲ್ಲಿ ನೋಡಿದ ಬಳಿಕ ಈ ಪ್ರಕರಣ ದಾಖಲಿಸಿದ್ದಾಗಿ ಎಎಸ್‌ಐ, ಪೊಲೀಸ್ ಚೌಕಿ ಸಂಖ್ಯೆ 4ರ ಉಸ್ತುವಾರಿ ಹಾಗೂ ಈ ಪ್ರಕರಣದಲ್ಲಿ ದೂರುದಾರರಾಗಿರುವ ಸತೀಶ್ ಕುಮಾರ್ ಹೇಳಿದ್ದಾರೆ. "ಅಂಬಾಲ ನಗರದ ಪಾಲಿಕೆ ಕಚೇರಿಯಲ್ಲಿ ಹಾರಿಸಿರುವ ರಾಷ್ಟ್ರಧ್ವಜವನ್ನು ವಿಡಿಯೊ ಬಿಂಬಿಸಿದೆ. ಇದು ಹರಿದಿರುವುದು ಮಾತ್ರವಲ್ಲದೇ ಕೊಳಕಾಗಿದೆ. ಇದು ತ್ರಿವರ್ಣ ಧ್ವಜಕ್ಕೆ ಅಗೌರವ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯ ಗೌರವಗಳಿಗೆ ಅವಮಾನ ತಡೆ ಕಾಯ್ದೆಯ ಸೆಕ್ಷನ್ 2ರ ಅನ್ವಯ ಅಂಬಾಲ ಸಿಟಿ ಪೊಲೀಸರು ಪಾಲಿಕೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ಸ್ವಾತಂತ್ರ್ಯ ದಿನಾಚರಣೆಯಂದು ಈ ಧ್ವಜವನ್ನು ಹಾರಿಸಿದ್ದು, ಅ ಬಳಿಕ ಅದನ್ನು ತೆಗೆದಿಲ್ಲ ಅಥವಾ ಬದಲಿಸಿಲ್ಲ ಎನ್ನುವ ಅಂಶ ದೃಢಪಟ್ಟಿದೆ ಎಂದು ಅಂಬಾಲ ನಗರ ಠಾಣೆ ಇನ್‌ಸ್ಪೆಕ್ಟರ್ ರಾಮ್ ಕುಮಾರ್ ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ದಾಖಲೆಗಳನ್ನು ಕೇಳಿ, ಹೊಣೆಗಾರಿಕೆ ನಿಗದಿಪಡಿಸಲಾಗುವುದು. ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಹರ್ ಘರ್ ತಿರಂಗ ಅಭಿಯಾನವನ್ನು ಆಗಸ್ಟ್ 13 ರಿಂದ 15ರವರೆಗೆ ದೇಶಾದ್ಯಂತ ಹಮ್ಮಿಕೊಳ್ಳಲಾಗಿತ್ತು.