ದಿಲ್ಲಿ ಮದ್ಯ ನೀತಿ ಪ್ರಕರಣ: ಮನೀಶ್ ಸಿಸೋಡಿಯಾರನ್ನು ಬಂಧಿಸಿದ ಸಿಬಿಐ

Update: 2023-02-26 17:57 GMT

ಹೊಸದಿಲ್ಲಿ: ಈಗ ಹಿಂಪಡೆಯಲಾದ ದಿಲ್ಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ರವಿವಾರ ಬಂಧಿಸಿದೆ. ಅವರನ್ನು ನಾಳೆ ಬೆಳಗ್ಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಮನೀಷ್ ಸಿಸೋಡಿಯಾ ಅವರ ವಿಚಾರಣೆಯನ್ನು ಸಿಬಿಐ ಇಂದು ಬೆಳಗ್ಗೆ ಆರಂಭಿಸಿತು. ಅನಂತರ 8 ಗಂಟೆಗಳ ಬಳಿಕ ಬಂಧಿಸಿತು. ಸತ್ಯೇಂದ್ರ ಜೈನ್ ನಂತರ ಬಂಧಿತರಾಗುತ್ತಿರುವ ದಿಲ್ಲಿಯ ಎರಡನೇ ಸಚಿವ ಮನೀಶ್ ಸಿಸೋಡಿಯಾ.

ಮನೀಶ್ ಸಿಸೋಡಿಯಾ ಅವರ ವಿಚಾರಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ದಕ್ಷಿಣ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದರು. ಮನೀಶ್ ಸಿಸೋಡಿಯ ಅವರ ನಿವಾಸ ಹಾಗೂ ಸಿಬಿಐ ಕಚೇರಿ ಹೊರಗೆ ಪೊಲೀಸ್ ತಂಡವನ್ನು ನಿಯೋಜಿಸಲಾಗಿತ್ತು. ಮನೀಶ್ ಸಿಸೋಡಿಯಾ ಅವರನ್ನು ಬೆಂಬಲಿಸಿ ಪ್ರತಿಭಟನೆ ನಡೆಸಿದ ಹಾಗೂ ಘೋಷಣೆಗಳನ್ನು ಕೂಗಿದ ಕನಿಷ್ಠ 50 ಜನರನ್ನು ವಶಕ್ಕೆ ತೆಗೆದುಕೊಂಡಿತ್ತು. ಇವರಲ್ಲಿ ಆಮ್ ಆದ್ಮಿ ಪಕ್ಷದ ವರಿಷ್ಠ ಗೋಪಾಲ್ ರಾಯ್, ಸಂಸದ ಸಂಜಯ್ ಸಿಂಗ್ ಹಾಗೂ ಪಕ್ಷದ ಇತರ ನಾಯಕರು ಕೂಡ ಸೇರಿದ್ದರು.

ಈ ನಡುವೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮನೀಶ್ ಸಿಸೋಡಿಯಾ ಅವರ ಕುಟುಂಬವನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ‘‘ನೀವು ದೇಶಕ್ಕಾಗಿ, ಸಮಾಜಕ್ಕಾಗಿ ಜೈಲಿಗೆ ಹೋದಾಗ, ಅದು ಶಾಪವಲ್ಲ. ಕೀರ್ತಿ. ನೀವು ಶೀಘ್ರ ಜೈಲಿನಿಂದ ಹಿಂದಿರುಗಲು ನಾನು ದೇವರನ್ನು ಪ್ರಾರ್ಥಿಸುತ್ತೇನೆ. ದಿಲ್ಲಿಯಲ್ಲಿರುವ ನಿಮ್ಮ ಕುಟುಂಬ ಹಾಗೂ ನಾವೆಲ್ಲರೂ ನಿಮಗಾಗಿ ಕಾಯುತ್ತಿರುತ್ತೇವೆ’’ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಇದಕ್ಕಿಂತ ಮುನ್ನ ತನ್ನ ವಿರುದ್ಧದ ಈ ಪ್ರಕರಣ ನಕಲಿ ಎಂದು ಕರೆದ ಮನೀಶ್ ಸಿಸೋಡಿಯಾ, ತಾನು ಏಳೆಂಟು ತಿಂಗಳು ಜೈಲಿನಲ್ಲಿರಲು ಸಿದ್ಧನಾಗಿದ್ದೇನೆ. ಆದುದರಿಂದ ಏಳೆಂಟು ತಿಂಗಳು ಜೈಲಿನಲ್ಲಿದ್ದರೂ ಪಶ್ಚಾತ್ತಾಪ ಉಂಟಾಗಲಾರದು. ಬದಲಾಗಿ ಹೆಮ್ಮೆ ಉಂಟಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

Similar News