ಅದಾನಿ ಗ್ರೂಪ್ ಗೆ ಅನುಕೂಲವಾಗುವಂತೆ ಟೆಂಡರ್ ಶರತ್ತುಗಳನ್ನು ತಿರುಚಿಲ್ಲ: ಮಹಾರಾಷ್ಟ್ರ ಸರಕಾರ
ಧಾರಾವಿ ಕೊಳೆಗೇರಿ ಪುನರಾಭಿವೃದ್ಧಿ ಯೋಜನೆ
ಹೊಸದಿಲ್ಲಿ: ದೇಶದ ವಾಣಿಜ್ಯ ರಾಜಧಾನಿ ಮುಂಬೈನ ಧಾರಾವಿ ಕೊಳೆಗೇರಿಯ ಪುನರಾಭಿವೃದ್ಧಿಗೆ ಕರೆಯಲಾಗಿದ್ದ ಟೆಂಡರ್ನಲ್ಲಿ ಪಟ್ಟಿ ಮಾಡಲಾಗಿದ್ದ ಶರತ್ತುಗಳನ್ನು ಆದಾನಿ ಸಮೂಹ ಸಂಸ್ಥೆಗೆ ಬೇಕಾಗುವ ಹಾಗೆ ಪರಿಷ್ಕರಿಸಲಾಗಿತ್ತೆಂಬ ಆರೋಪಗಳನ್ನು ಮಹಾರಾಷ್ಟ್ರ ಸರಕಾರವು ತಳ್ಳಿಹಾಕಿದೆ.
ವಿಸ್ತೃತವಾದ ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ 2019 ಹಾಗೂ 2022ರವರೆಗಿನ ಅವಧಿಯಲ್ಲಿನ ದೇಶದ ಆರ್ಥಿಕ ಹಾಗೂ ಭೌತಿಕ ಸನ್ನಿವೇಶಗಳಲ್ಲಿ ಉಂಟಾದ ಬದಲಾವಣೆಗಳನ್ನು ಗಮನಕ್ಕೆ ತೆಗೆದುಕೊಂಡು ಟೆಂಡರ್ ಶರತ್ತುಗಳಲ್ಲಿ ಪರಿಷ್ಕರಣೆಯನ್ನು ಮಾಡಲಾಗಿದೆಯೆಂದು ಮಹಾರಾಷ್ಟ್ರ ಸರಕಾರದ ವಸತಿ ಇಲಾಖೆಯು ಬಾಂಬೆ ಹೈಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ತಿಳಿಸಿದೆ.
ಕೊಳೆಗೇರಿ ಪುನರ್ವಸತಿ ಪ್ರಾಧಿಕಾರವು ಧಾರಾವಿ ಕೊಳೆಗೇರಿ ಪುನರಾಭಿವೃದ್ಧಿ ಯೋಜನೆಗಾಗಿ ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಪ್ರಕಟಿಸಿದ ಟೆಂಡರ್ನಲ್ಲಿ ನಿಗದಿಪಡಿಸಿದ ಶರತ್ತುಗಳನ್ನು ಪ್ರಶ್ನಿಸಿ ದುಬೈ ಮೂಲದ ಸೆಕ್ಲಿಂಕ್ ಟೆಕ್ನಾಲಜಿ ಸಂಸ್ಥೆಯು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ನಡೆಸಿದ ಸಂದರ್ಭ ವಸತಿ ಇಲಾಖೆ ಈ ಅಫಿಡವಿಟ್ ಸಲ್ಲಿಸಿದೆ.
ತಜ್ಞರೊಂದಿಗೆ ಜಾಗರೂಕತೆಯಿಂದ ಚರ್ಚಿಸಿದ ಬಳಿಕವಷ್ಟೇ ನೂತನ ಟೆಂಡರ್ನಲ್ಲಿನ ಶರತ್ತುಗಳನ್ನು ನಿಗದಿಪಡಿಸಲಾಗಿದೆ. ನೂತನ ಶರತ್ತುಗಳನ್ನು ವೈಚಾರಿಕ ಹಾಗೂ ಯೋಗ್ಯ ನೆಲೆಗಟ್ಟಿನ ಆಧಾರದಲ್ಲಿ ರೂಪಿಸಲಾಗಿದೆಯೆಂದು ಸರಕಾರವು ಅಫಿಡವಿಟ್ನಲ್ಲಿ ತಿಳಿಸಿದೆ.
ಧಾರಾವಿ ಕೊಳೆಗೇರಿಗಳ ಪುನರಾಭಿವೃದ್ಧಿಯ ಟೆಂಡರನ್ನು ತಾನು 2019ರ ಜನವರಿಯಲ್ಲಿ ಪಡೆದಿದ್ದರೂ, ತನಗೆ ಕಂಟ್ರಾಕ್ಟ್ ನೀಡಿಲ್ಲವೆಂದ ಸೆಕ್ಲಿಂಕ್ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ದೂರಿದೆ. ತರುವಾಯ ಮಹಾರಾಷ್ಟ್ರ ಸರಕಾರವು ಟೆಂಡರ್ಗೆ ಹೆಚ್ಚುವರಿ ನಿಬಂಧನೆಗಳನ್ನು ಸೇರಿಸಿದ್ದರಿಂದಾಗಿ ಆದಾನಿ ಗ್ರೂಪ್ ಗೆ ಕಂಟ್ರಾಕ್ಟ್ ದೊರೆಯಿತೆಂದು ಕಂಪೆನಿಯು ಆರೋಪಿಸಿದೆ.
ರೈಲ್ವೆಗೆ ಸೇರಿದ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಇರುವ ಸಮಸ್ಯೆಗಳನ್ನು ಉಲ್ಲೇಖಿಸಿ ಈ ಯೋಜನೆಯ ಬಿಡ್ಡಿಂಗ್ ಪ್ರಕ್ರಿಯೆಯನ್ನು ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ್ ಅಘಾಡಿ ಸರಕಾರವು 2020ರ ಅಕ್ಟೋಬರ್ ನಲ್ಲಿ ರದ್ದುಪಡಿಸಿತ್ತು. ಆನಂತರ ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ನೂತನವಾಗಿ ರಚನೆಯಾದ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಸರಕಾರವು ಯೋಜನೆಗೆ ಹೊಸತಾಗಿ ಟೆಂಡರ್ ಕರೆದಿತ್ತು.