ಚತ್ತೀಸ್ ಗಢ: ಐಇಡಿ ಸ್ಫೋಟ; ಭದ್ರತಾ ಸಿಬ್ಬಂದಿ ಸಾವು
ನಾರಾಯಣಪುರ: ಚತ್ತೀಸ್ಗಢದ ನಾರಾಯಣಪುರ ಜಿಲ್ಲೆಯಲ್ಲಿ ಶಂಕಿತ ನಕ್ಸಲೀಯರು ಇರಿಸಿದ ಐಇಡಿ ರವಿವಾರ ಸ್ಫೋಟಗೊಂಡ ಪರಿಣಾಮ ಚತ್ತೀಸ್ಗಢ ಶಸಸ್ತ್ರ ಪಡೆ (ಸಿಎಎಫ್) ಹೆಡ್ ಕಾನ್ಸ್ಟೆಬಲ್ ಓರ್ವರು ಸಾವನ್ನಪ್ಪಿದ್ದಾರೆ.
ಈ ಘಟನೆ ಒರ್ಖಾ ಪೊಲೀಸ್ ಠಾಣಾ ವ್ಯಾಪ್ತಿಯ ಬತುಮ್ ಸಮೀಪ ಸುಮಾರ ಬೆಳಗ್ಗೆ 7 ಗಂಟೆಗೆ ಸಂಭವಿಸಿದೆ ಎಂದು ನಾರಾಯಣಪುರ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹೇಮಸಾಗರ್ ಸಿದಾರ್ ಅವರು ಹೇಳಿದ್ದಾರೆ. ಈ ಪ್ರದೇಶದಲ್ಲಿ ನಕ್ಸಲೀಯರು ಬ್ಯಾನರ್ ಹಾಕಿರುವ ಮಾಹಿತಿ ಸ್ವೀಕರಿಸಿದ ಬಳಿಕ ಚತ್ತೀಸ್ಗಢ ಶಸಸ್ತ್ರ ಪಡೆಯ ತಂಡ ಒರ್ಖಾ ಪೊಲೀಸ್ ಠಾಣೆಯಿಂದ ಗಸ್ತು ಆರಂಭಿಸಿತು ಎಂದು ಅವರು ಹೇಳಿದ್ದಾರೆ. ಗಸ್ತು ತಂಡ ಬಾತುಮ್ ಮೂಲಕ ಸಾಗುತ್ತಿರುವಾಗ ಚತ್ತೀಸ್ಗಢ ಶಸಸ್ತ್ರ ಪಡೆಯ 16ನೇ ಬೆಟಾಲಿಯನ್ಗೆ ಸೇರಿದ ಹೆಡ್ ಕಾನ್ಸ್ಟೆಬಲ್ ಸಂಜಯ್ ಲಾಖ್ರಾ ಐಇಡಿ ಮೇಲೆ ಕಾಲಿರಿಸಿದ್ದಾರೆ. ಇದರಿಂದ ಸ್ಫೋಟ ಸಂಭವಿಸಿ ಅವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚತ್ತೀಸ್ಗಢ ಜಿಲ್ಲೆಯ ಜಸ್ಪುರ ಜಿಲ್ಲೆ ನಿವಾಸಿಯಾಗಿರುವ ಲಾಕ್ರಾ ಅವರ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ತರಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಶನಿವಾರ ರಾಜ್ಯದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆ ಹಾಗೂ ಶಂಕಿತ ನಕ್ಸಲೀಯರ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಮೂರು ಮಂದಿ ಯೋಧರು ಸಾವನ್ನಪ್ಪಿದ್ದರು. ಫೆಬ್ರವರಿ 20ರಂದು ರಾಜ್ಯದ ರಾಜನಂದಗಾಂವ್ನಲ್ಲಿ ನಡೆದ ನಕ್ಸಲೈಟ್ ದಾಳಿಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದರು.