ಕಾಂಗ್ರೆಸ್ ನಾಯಕರ ರಕ್ಷಣೆಗಾಗಿ ಈ.ಡಿ. ಮುಖ್ಯಸ್ಥರ ಅಧಿಕಾರಾವಧಿ ವಿಸ್ತರಣೆ ಪ್ರಶ್ನಿಸಿ ಅರ್ಜಿ

ಸುಪ್ರೀಂ ಕೋರ್ಟ್ ಗೆ ತಿಳಿಸಿದ ಕೇಂದ್ರ

Update: 2023-02-26 17:47 GMT

ಹೊಸದಿಲ್ಲಿ: ಜಾರಿ ನಿರ್ದೇಶನಾಲಯ (ಈ.ಡಿ.)ದ ಮುಖ್ಯಸ್ಥ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿಯನ್ನು ಮೂರನೇ ಬಾರಿ ವಿಸ್ತರಿಸಿರುವುದನ್ನು ಪ್ರಶ್ನಿಸಿರುವ ಅರ್ಜಿಯ ನಿಜವಾದ ಉದ್ದೇಶ ಅಕ್ರಮ ಹಣ ವರ್ಗಾವಣೆ ಆರೋಪಗಳಲ್ಲಿ ಪ್ರಕರಣಗಳನ್ನು ಎದುರಿಸುತ್ತಿರುವ ಕಾಂಗ್ರೆಸ್ ನಾಯಕರನ್ನು ರಕ್ಷಿಸುವುದಾಗಿದೆ ಎಂದು ಕೇಂದ್ರ ಸರಕಾರವು ಶುಕ್ರವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಈ.ಡಿ.ಯಿಂದ ತನಿಖೆಗೆ ಒಳಗಾಗಿರುವುದರಿಂದ ರಾಜಕೀಯ ಲಾಭವನ್ನು ಪಡೆಯುವುದು ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಸಲ್ಲಿಸಿರುವ ಅರ್ಜಿಯ ಉದ್ದೇಶವಾಗಿದೆ ಎಂದು ಕೇಂದ್ರವು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅಫಿಡವಿಟ್ನಲ್ಲಿ ವಾದಿಸಿದೆ.

ತನ್ನ ಪಕ್ಷದ ನಾಯಕರ ವಿರುದ್ಧ ನಡೆಯುತ್ತಿರುವ ಕಾನೂನುಬದ್ಧ ತನಿಖೆಯ ದಾರಿ ತಪ್ಪಿಸುವುದು ಠಾಕೂರ್ ಅರ್ಜಿಯ ಉದ್ದೇಶವಾಗಿದೆ ಎಂದೂ ಅದು ಆರೋಪಿಸಿದೆ.
ಈ.ಡಿ.ಮತ್ತು ಸಿಬಿಐ ಮುಖ್ಯಸ್ಥರ ಅಧಿಕಾರಾವಧಿಯನ್ನು ವಿಶೇಷ ಸಂದರ್ಭಗಳಲ್ಲಿ ಪರಿಸ್ಥಿತಿಗಳನ್ನು ಅವಲಂಬಿಸಿ, ಆಯಾ ಶಾಸನದಡಿ ಸೂಚಿಸಲಾದ ಸಮಿತಿಯ ಶಿಫಾರಸಿನ ಮೇರೆಗೆೆ ಮತ್ತು ಲಿಖಿತ ಕಾರಣಗಳಿಂದಾಗಿ ಸಾರ್ವಜನಿಕ ಹಿತಾಸಕ್ತಿಯಲ್ಲಿ ಆರಂಭಿಕ ಅವಧಿಯಿಂದಾಚೆಗೆ ವಿಸ್ತರಿಸಬಹುದಾಗಿದೆ. ಸಿಬಿಐ ಅಥವಾ ಈ.ಡಿ.ನಿರ್ದೇಶಕರ ಅಧಿಕಾರಾವಧಿಯು ಎರಡು ವರ್ಷಗಳಿಗಿಂತ ಹೆಚ್ಚಿರಬಾರದು ಎಂಬ ಯಾವುದೇ ನಿರ್ಬಂಧವಿಲ್ಲ ಎಂದು ಕೇಂದ್ರವು ತನ್ನ ಅಫಿಡವಿಟ್ನಲ್ಲಿ ಹೇಳಿದೆ.

ಹಿನ್ನೆಲೆ: ಮಿಶ್ರಾ 2018, ನ.19ರಂದು ಎರಡು ವರ್ಷಗಳ ಅವಧಿಗೆ ಮೊದಲ ಬಾರಿಗೆ ಈ.ಡಿ.ನಿರ್ದೇಶಕರಾಗಿ ನೇಮಕಗೊಂಡಿದ್ದರು. ಅವರು ನವಂಬರ್ 2020ರಲ್ಲಿ ಅಧಿಕಾರವನ್ನು ತೊರೆಯಬೇಕಿತ್ತು ಮತ್ತು ಅದೇ ವರ್ಷದ ಮೇ ತಿಂಗಳಿನಲ್ಲಿ ಅವರು 60 ವರ್ಷಗಳ ನಿವೃತ್ತಿ ವಯಸ್ಸನ್ನು ತಲುಪಿದ್ದರು. ಆದರೆ 2020, ನ.13ರಂದು ಆದೇಶವೊಂದರ ಮೂಲಕ ಕೇಂದ್ರ ಸರಕಾರವು ಅವರ ನೇಮಕ ಪತ್ರವನ್ನು ಪೂರ್ವಾನ್ವಯಗೊಳ್ಳುವಂತೆ ಪರಿಷ್ಕರಿಸಿತ್ತು ಮತ್ತು ಅವರ ಎರಡು ವರ್ಷಗಳ ಅಧಿಕಾರಾವಧಿಯನ್ನು ಮೂರು ವರ್ಷಗಳಿಗೆ ವಿಸ್ತರಿಸಿತ್ತು. ಎನ್ಜಿಒ ಕಾಮನ್ ಕಾಸ್ ಇದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.

ಕೇಂದ್ರದ ಪರಿಷ್ಕೃತ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ಅನುಮೋದಿಸಿದ್ದರೂ,ಮಿಶ್ರಾರ ಅಧಿಕಾರಾವಧಿಯನ್ನು ಇನ್ನಷ್ಟು ವಿಸ್ತರಿಸದಂತೆ ಸೆಪ್ಟಂಬರ್ 2021ರಲ್ಲಿ ಸರಕಾರಕ್ಕೆ ನಿರ್ದೇಶ ನೀಡಿತ್ತು.

ನವಂಬರ್ನಲ್ಲಿ ಸರಕಾರವು ಈ.ಡಿ.ಮತ್ತು ಸಿಬಿಐ ನಿರ್ದೇಶಕರು ಐದು ವರ್ಷಗಳವರೆಗೆ ಅಧಿಕಾರಾವಧಿಯನ್ನು ಹೊಂದಿರುವಂತೆ ಮಾಡಲು ಎರಡು ಅಧ್ಯಾದೇಶಗಳನ್ನು ತಂದಿತ್ತು. ಬಳಿಕ ನವಂಬರ್ 2022ರಲ್ಲಿ ಕೇಂದ್ರವು ಮಿಶ್ರಾ ಅವರ ಅಧಿಕಾರಾವಧಿಯನ್ನು ಮೂರನೇ ಬಾರಿಗೆ ವಿಸ್ತರಿಸಿತ್ತು.
ಈ ಆದೇಶದ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿರುವ ಠಾಕೂರ್, ಪದೇ ಪದೇ ಅಧಿಕಾರಾವಧಿ ವಿಸ್ತರಣೆಯು ದೇಶದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ನಾಶಗೊಳಿಸುತ್ತದೆ ಎಂದು ವಾದಿಸಿದ್ದಾರೆ.

Similar News