10.59 ಕೋಟಿ ರೂ. ಹೆಚ್ಚುವರಿಯಾಗಿ ಪಾವತಿ: ಸಿಎಜಿ ವರದಿ ಬಹಿರಂಗ
270 ವಿದ್ಯಾರ್ಥಿನಿಲಯಗಳಿಗೆ ಅನಧಿಕೃತ ಏಜೆನ್ಸಿಗಳಿಂದ ದುಪ್ಪಟ್ಟು ದರದಲ್ಲಿ ವಾಷಿಂಗ್ ಮೆಷಿನ್, ಚಪಾತಿ ಮಾಡುವ ಯಂತ್ರ ಖರೀದಿ
ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 270 ವಿದ್ಯಾರ್ಥಿ ನಿಲಯಗಳಿಗೆ ವಾಷಿಂಗ್ ಮೆಷಿನ್ ಮತ್ತು ಚಪಾತಿ ಮಾಡುವ ಯಂತ್ರಗಳನ್ನು ಮಾರುಕಟ್ಟೆಯಲ್ಲಿರುವ ದರಕ್ಕಿಂತಲೂ ದುಪ್ಪಟ್ಟು ದರದಲ್ಲಿ ಮತ್ತು ಮೂಲತಃ ತಯಾರಕರಲ್ಲದ ಹಾಗೂ ಅನಧಿಕೃತ ಏಜೆನ್ಸಿಗಳಿಂದ ಖರೀದಿಸಿದ್ದ ಕಿಯೋನಿಕ್ಸ್ ಸಂಸ್ಥೆಯು ಸರಕಾರಕ್ಕೆ 11.13 ಕೋಟಿ ರೂ. ಮೊತ್ತಕ್ಕೆ ಮಾರಾಟ ಮಾಡಿತ್ತು. ಉಪಕರಣಗಳನ್ನು ಸರಬರಾಜು ಮಾಡಿದ್ದ ಅನಧಿಕೃತ ಏಜೆನ್ಸಿಗಳಿಗೆ 10.59 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿಸಿರುವ ಎಂಬ ಪ್ರಕರಣವನ್ನು ಸಿಎಜಿ ವರದಿಯು ತಿಳಿಸಿದೆ.
ಹಿಂದಿನ ಸರಕಾರದ ಅವಧಿಯಲ್ಲಿನ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಿಗೆ ಹಾಸಿಗೆ ದಿಂಬು ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸುತ್ತಿರುವ ಬಿಜೆಪಿ ಪಕ್ಷವು, ಇದೀಗ ತನ್ನದೇ ಪಕ್ಷದ ಸರಕಾರದ ಆಡಳಿತದಲ್ಲಿ ವಾಷಿಂಗ್ ಮೆಷಿನ್ ಮತ್ತು ಚಪಾತಿ ಮಾಡುವ ಯಂತ್ರಗಳ ಖರೀದಿಯಲ್ಲೂ ಅಕ್ರಮ ಎಸಗಿರುವುದು ಮುನ್ನೆಲೆಗೆ ಬಂದಿದೆ.
ಈ ಪ್ರಕರಣ ಕುರಿತು ಇಲಾಖೆಯು ಸ್ಟಾರ್ ಫಿಶ್ ವಾಷಿಂಗ್ ಮೆಷಿನ್‌ಗೆ ಸಮನಾಗಿ ಯಂತ್ರವೊಂದಕ್ಕೆ 4,55,900 ರೂ.ನಂತೆ ಬಿಲ್ ಮಾಡುವ ಮೂಲಕ ವಿಶ್ವಾಸ ಉಲ್ಲಂಘನೆ ಮಾಡಿದೆ ಮತ್ತು ಟೆಂಡರ್ ಷರತ್‌ಗಳನ್ನು ಉಲ್ಲಂಘನೆ ಮಾಡಿದೆ. ಹೆಚ್ಚುವರಿಯಾದ 7.77 ಕೋಟಿ ರೂ.ಮೊತ್ತ ವಸೂಲಾತಿಗಾಗಿ ವರ್ತಕರಿಗೆ ನೋಟಿಸ್ ನೀಡಲಾಗಿದೆ. ಚಪಾತಿ ತಯಾರಿಸುವ ಸಾಧನಕ್ಕೆ ಯೂನಿಟ್ ಒಂದಕ್ಕೆ 2.20 ಲಕ್ಷ ರೂ. ಹಾಗೂ ಜಿಎಸ್ಟಿ ಸೇರಿ ಒಟ್ಟಾರೆ 3,64,325 ರೂ.. ಮಾತ್ರ ಪಾವತಿಸಲಾಗಿದೆಯೇ ವಿನಃ ಹೆಚ್ಚುವರಿ ದರದಲ್ಲಿ ಖರೀದಿಸಿಲ್ಲ ಎಂದು ಉತ್ತರ ಮತ್ತು ಸಮಜಾಯಿಷಿ ನೀಡಿತ್ತು.
ಆದರೆ ಇದನ್ನು ಒಪ್ಪದ ಸಿಎಜಿಯು ‘ಈ ಪ್ರಕರಣದಲ್ಲಿ ಖರೀದಿಸಲಾಗಿರುವ ಸರಕುಗಳು ಮಾಹಿತಿ ತಂತ್ರಜ್ಞಾನೇತರ ಉತ್ಪನ್ನಗಳು ಆಗಿರುವುದರಿಂದ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಬಂಧಿತ ಉತ್ಪನ್ನಗಳಿಗೆ ಮಾತ್ರ ಅನ್ವಯಗೊಳ್ಳುತ್ತಿದ್ದ 4(ಜಿ) ವಿನಾಯಿತಿಯನ್ನು ಕಿಯೋನಿಕ್ಸ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ದುರುಪ ಯೋಗಪಡಿಸಿಕೊಂಡಿದೆ. ಉತ್ತರದಾಯಿತ್ವ/ಜವಾಬ್ದಾರಿಯನ್ನು ನಿಗದಿಪಡಿಸುವ ಸಲುವಾಗಿ ಹಾಗೂ ಸರಕಾರಕ್ಕೆ ಆಗಿರುವ ನಷ್ಟವನ್ನು ಸಂಬಂಧಿಸಿದವರಿಂದ ವಸೂಲಾತಿ ಮಾಡಬೇಕು. ಇದಕ್ಕಾಗಿ ಸರಕಾರವು ಸವಿವರವಾದ ತನಿಖೆ ನಡೆಸುವ ಅಗತ್ಯವಿದೆ,’ ಎಂದು ಸಿಎಜಿ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಕಿಯೋನಿಕ್ಸ್ ಮೂಲಕ 4(ಜಿ) ವಿನಾಯಿತಿ ಉಲ್ಲೇಖಿಸಿ ಉಪಕರಣಗಳನ್ನು ಖರೀದಿ ಮಾಡಿರುವುದು ಸಹ ನಿಯಮಬಾಹಿರದಿಂದ ಕೂಡಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ದರಗಳಿಗಿಂತ ಮೂರದಿಂದ ನಾಲ್ಕು ಪಟ್ಟು ಅಧಿಕ ದರದಲ್ಲಿ ಖರೀದಿ ಮಾಡಿರುವ ಕಾರಣ ಇದೊಂದೇ ಪ್ರಕರಣದಲ್ಲಿ ಅನಧಿಕೃತ ಏಜೆನ್ಸಿಗಳಿಗೆ 10.59 ಕೋಟಿ ರೂ. ಹೆಚ್ಚುವರಿಯಾಗಿ ಪಾವತಿಸಿರುವ ಪರಿಣಾಮ ಸರಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.
ವಿದ್ಯಾರ್ಥಿನಿಲಯಗಳಿಗೆ 15 ಕೆ.ಜಿ. ಸಾಮರ್ಥ್ಯದ 270 ವಾಷಿಂಗ್ ಮೆಷಿನ್‌ಗಳನ್ನು ಖರೀದಿಸಲು ಕಿಯೋನಿಕ್ಸ್ ಮೂಲಕ 15 ಕೋಟಿ ರೂ.ಮೊತ್ತಕ್ಕೆ ದರಪಟ್ಟಿ ಮತ್ತು ಪ್ರಸ್ತಾವ ಸಲ್ಲಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸರಕಾರವು ನಿರ್ದೇಶಿಸಿತ್ತು. ಅಲ್ಲದೇ ಅರೆ-ಸ್ವಯಂ ಚಾಲಿತ ಚಪಾತಿ ಮಾಡುವ ಯಂತ್ರಗಳನ್ನು ವಿದ್ಯಾರ್ಥಿ ನಿಲಯಗಳಿಗೆ ಖರೀದಿ ಮಾಡಲು 2020ರ ಮಾರ್ಚ್‌ನಲ್ಲಿ ಸರಕಾರವು ಇಲಾಖೆಗೆ ನಿರ್ದೇಶಿಸಿತ್ತು ಎಂಬುದು ಸಿಎಜಿ ವರದಿಯಿಂದ ಗೊತ್ತಾಗಿದೆ.
ಆದರೆ ಅರೆ-ಸ್ವಯಂ ಚಾಲಿತ ಚಪಾತಿ ತಯಾರಿಸುವ ಯಂತ್ರಗಳಿಗೆ ಸಂಬಂಧಿಸಿದಂತೆ ಕಿಯೋನಿಕ್ಸ್ ಮೂಲಕ ದರ ಪಟ್ಟಿ ಪಡೆದುಕೊಳ್ಳಲು ಸರಕಾರದಿಂದ ನೇರವಾಗಿ ಯಾವುದೇ ಆದೇಶಗಳಿರಲಿಲ್ಲ. ಆದರೂ ವಾಷಿಂಗ್ ಮೆಷಿನ್ ಜೊತೆಗೆ ಚಪಾತಿ ಮಾಡುವ ಯಂತ್ರಗಳ ಸರಬರಾಜಿಗೂ ಆದೇಶ ನೀಡಲಾಗಿತ್ತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.
ಸಾಮಗ್ರಿಗಳನ್ನು ನೇರವಾಗಿ ವಿದ್ಯಾರ್ಥಿನಿಲಯಗಳಿಗೆ ಜುಲೈ 2020 ಹಾಗೂ ಜುಲೈ 2021ರ ನಡುವೆ ಸರಬರಾಜು ಮಾಡಲಾಗಿತ್ತು. ಕಿಯೋನಿಕ್ಸ್ ಸಂಸ್ಥೆಯು ವಿದ್ಯಾರ್ಥಿ ನಿಲಯಗಳ ಅಧಿಕಾರಿಗಳಿಂದ ಸಾಮಗ್ರಿ ವಿತರಣೆ ಪ್ರಮಾಣ ಪತ್ರಗಳನ್ನು ಪಡೆದುಕೊಂಡ ನಂತರ 15.52 ಕೋಟಿ ರೂ.ಗಳನ್ನು ತನ್ನ ಸಹಭಾಗಿ ಸಂಸ್ಥೆಗಳಿಗೆ ಬಿಡುಗಡೆ ಮಾಡಿತ್ತು. ಇದನ್ನು ಪರಿಶೋಧನೆಗೆ ಒಳಪಡಿಸಿದ್ದ ಸಿಎಜಿ ನಿಯಮಬಾಹಿರ ಕ್ರಮಗಳನ್ನು ಮತ್ತು ನಷ್ಟವಾಗಿರುವ ಬಗೆಯನ್ನು ವರದಿಯಲ್ಲಿ ತೆರೆದಿಟ್ಟಿದೆ.
ವಾಷಿಂಗ್ ಮೆಷಿನ್‌ಗಳು ಹಾಗೂ ಚಪಾತಿ ಮಾಡುವ ಸಾಧನಗಳು ಗ್ರಾಹಕರು ಉಪಯೋಗಿಸುವ ಉತ್ಪನ್ನಗಳು. ಅವುಗಳು ಮಾರುಕಟ್ಟೆಯಲ್ಲಿ ಸಿದ್ಧವಾಗಿ ಲಭ್ಯವಿರುತ್ತವೆ. ಅಲ್ಲದೆ ದರಗಳು ತಯಾರಕರು/ಅಧಿಕೃತ ವರ್ತಕರ ಜಾಲತಾಣಗಳಲ್ಲಿ (2022ರ ಜನವರಿಯಲ್ಲಿದ್ದಂತೆ) ಲಭ್ಯವಿರುತ್ತವೆ. ಆದರೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 270 ವಾಷಿಂಗ್ ಮೆಷಿನ್ ಮತ್ತು 82 ಚಪಾತಿ ಮಾಡುವ ಸಾಧನಗಳನ್ನು ಸರಬರಾಜು ಮಾಡುವ ಸಲುವಾಗಿ 16.30 ಕೋಟಿ ರೂ.ಮೊತ್ತವನ್ನು ಕಿಯೋನಿಕ್ಸ್‌ಗೆ ಬಿಡುಗಡೆ ಮಾಡಿತ್ತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.
ಆದರೆ ‘ಕಿಯೋನಿಕ್ಸ್ ಸಂಸ್ಥೆಯು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ನೀಡಿದ್ದ ದರಗಳು ಮಾರುಕಟ್ಟೆಯಲ್ಲಿನ ದರಕ್ಕಿಂತಲೂ ಮೂರರಿಂದ ನಾಲ್ಕು ಪಟ್ಟು ಅಧಿಕವಾಗಿದ್ದವು. ಅಲ್ಲದೇ ಕಿಯೋನಿಕ್ಸ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಈ ಉತ್ಪನ್ನಗಳನ್ನು ಯಾವ ದರಗಳಲ್ಲಿ ಖರೀದಿಸಬಹುದು ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳಲು ಯಾವುದೇ ಪ್ರಯತ್ನಗಳನ್ನೂ ಮಾಡಿರಲಿಲ್ಲ. ಇದು ಒಟ್ಟು 10.59 ಕೋಟಿ ರೂ. ನಷ್ಟಕ್ಕೆ ಕಾರಣವಾಗಿತ್ತು’ಎಂಬುದನ್ನು ಸಿಎಜಿ ವರದಿಯು ಪತ್ತೆ ಹಚ್ಚಿದೆ.
ಏಜೆನ್ಸಿಗಳಿಗೆ 8.97 ಕೋಟಿ ರೂ.ಹೆಚ್ಚುವರಿ ಲಾಭ: ಎಲ್‌ಜಿ ಕಂಪೆನಿಯ ವಾಷಿಂಗ್ ಮೆಷಿನ್ ಒಂದಕ್ಕೆ ಮಾರುಕಟ್ಟೆಯಲ್ಲಿ 1ಲಕ್ಷ ರೂ. ಇದ್ದರೆ ಕಿಯೋನಿಕ್ಸ್ ಸಂಸ್ಥೆಯು 4.56 ಲಕ್ಷ ರೂ. ದರದಲ್ಲಿ ಖರೀದಿಸಿತ್ತು. ಇದು 3.56 ಲಕ್ಷ ರೂ.ಯನ್ನು ಹೆಚ್ಚುವರಿಯಾಗಿ ಕಂಪೆನಿಗೆ ಲಾಭ ಮಾಡಿಕೊಟ್ಟಿತ್ತು. ಅದೇ ರೀತಿ ಸ್ಟಾರ್ ಫಿಶ್ ವಾಷಿಂಗ್ ಮೆಷಿನ್‌ಗೆ ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ 2.70 ಲಕ್ಷ ರೂ.ಇದ್ದರೆ ಕಿಯೋನಿಕ್ಸ್ ಸಂಸ್ಥೆಯು 4.56 ಲಕ್ಷ ರೂ. ದರದಲ್ಲಿ ಖರೀದಿಸಿತ್ತು. ಇದು ಮಾರುಕಟ್ಟೆಯಲ್ಲಿನ ದರಕ್ಕಿಂತಲೂ 1.86 ಲಕ್ಷ ರೂ. ಹೆಚ್ಚುವರಿಯಾಗಿತ್ತು.
ಚಪಾತಿ ಮಾಡುವ ಯಂತ್ರವೊಂದಕ್ಕೆ ಮಾರುಕಟ್ಟೆಯಲ್ಲಿ 1.20 ಲಕ್ಷ ರೂ. ಇದ್ದರೆ ಕಿಯೋನಿಕ್ಸ್ ಸಂಸ್ಥೆಯು 3.09 ಲಕ್ಷ ರೂ.ಗೆ ಖರೀದಿಸಿ ಸರಬರಾಜು ಮಾಡಿತ್ತು. ಇದು ಮಾರುಕಟ್ಟೆಯಲ್ಲಿನ ದರಕ್ಕಿಂತಲೂ 1.89 ಲಕ್ಷ ರೂ. ಹೆಚ್ಚುವರಿಯಾಗಿತ್ತು. ಜಿಎಸ್ಟಿ 1.61 ಕೋಟಿ ರೂ. ಸೇರಿ ಒಟ್ಟಾರೆ 10.59 ಕೋಟಿ ರೂ.ಹೆಚ್ಚುವರಿಯಾಗಿ ಪಾವತಿಸಲಾಗಿತ್ತು ಎಂಬುದು ಸಿಎಜಿ ವರದಿಯಿಂದ ಗೊತ್ತಾಗಿದೆ.
ಇದಷ್ಟೇ ಅಲ್ಲ, ವಾಷಿಂಗ್ ಮೆಷಿನ್‌ಗಳ ಬ್ರ್ಯಾಂಡ್ ಮತ್ತು ಮಾಡಲ್ ವಿವರಗಳನ್ನು ತಿಳಿಸಬೇಕಿದ್ದ ಕಿಯೋನಿಕ್ಸ್ ಸಂಸ್ಥೆಯು ಇದಾವುದನ್ನೂ ದಾಖಲೆಗಳಲ್ಲಿ ಒದಗಿಸದೆಯೇ ಷರತ್ತುಗಳನ್ನು ಉಲ್ಲಂಘಿಸಿತ್ತು. ಸಿದ್ದಾರ್ಥ ಏಜೆನ್ಸಿಸ್ ನೀಡಿದ್ದ ಇನ್ವಾಯ್ಸ್‌ಗಳು ಹಾಗೂ ವಿದ್ಯಾರ್ಥಿ ನಿಲಯಗಳಿಂದ ಪಡೆದುಕೊಂಡಿರುವ ದಾಸ್ತಾನು ಪ್ರಮಾಣ ಪತ್ರಗಳು ಬ್ರ್ಯಾಂಡ್ ಮತ್ತು ಮಾಡೆಲ್ ವಿವರಗಳು ಇರಲಿಲ್ಲ.
ಹಾಗೆಯೇ 4(ಜಿ) ವಿನಾಯಿತಿ ಅಡಿಯಲ್ಲಿ ನಿರ್ದಿಷ್ಟಪಡಿಸಿರುವ ಷರತ್ತುಗಳ ಪ್ರಕಾರ ಕಿಯೋನಿಕ್ಸ್ ಸಿಬ್ಬಂದಿ ಸರಬರಾಜಿಗೆ ಮಾತ್ರ ಶೇ.5ರವರೆಗೆ ಸೇವಾ ಶುಲ್ಕ ಪಡೆದುಕೊಳ್ಳಲು ಅನುಮತಿ ಇದೆ. ಆದರೂ ಕಿಯೋನಿಕ್ಸ್ ಸಂಸ್ಥೆಯು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸರಕುಗಳನ್ನು ಸರಬರಾಜು ಮಾಡಿದ್ದಕ್ಕಾಗಿ ಷರತ್ತುಗಳನ್ನು ಉಲ್ಲಂಘಿಸಿ ಶೇ.3 ಅಥವಾ ಶೇ. 5ರಂತೆ ಒಟ್ಟು 54.49 ಲಕ್ಷ ರೂ.ಗಳನ್ನು (ವಾಷಿಂಗ್ ಮೆಷಿನ್‌ಗಳಿಗೆ 38.77 ಲಕ್ಷ ರೂ., ಚಪಾತಿ ಮಾಡುವ ಸಾಧನಗಳಿಗೆ 15.72 ಲಕ್ಷ ರೂ.) ಸೇವಾ ಶುಲ್ಕ ವಸೂಲು ಮಾಡಿತ್ತು.
ಸಿದ್ಧಾರ್ಥ ಏಜೆನ್ಸೀಸ್ ಮೂಲಕ ವಾಷಿಂಗ್ ಮೆಷಿನ್, ನ್ಯೂಜೆನ್ ಸೆಕ್ಯುರಿಟಿ ಸಲ್ಯೂಷನ್ಸ್ ಮೂಲಕ ಚಪಾತಿ ಮಾಡುವ ಯಂತ್ರಗಳನ್ನು ಖರೀದಿಸಲಾಗಿತ್ತು. ಆದರೆ ಈ ಎರಡೂ ಏಜೆನ್ಸಿಗಳೂ ಮೂಲತಃ ಉಪಕರಣಗಳ ತಯಾರಕ ಸಂಸ್ಥೆಗಳಾಗಿರಲಿಲ್ಲ ಮತ್ತು ಅಧಿಕೃತವಾಗಿ ಮನ್ನಣೆ ಪಡೆದಿರುವ ವರ್ತಕರೂ ಆಗಿರಲಿಲ್ಲ. ಹೀಗಾಗಿ ಇಂತಹ ಸಂಸ್ಥೆಗಳನ್ನು ಅನುಮೋದಿತ/ಅಧಿಕೃತ ಪಟ್ಟಿಯಲ್ಲಿ ಸೇರಿಸಬಾರದಾಗಿತ್ತು. ಆದರೆ ಇಲಾಖೆ ಮತ್ತು ಕಿಯೋನಿಕ್ಸ್ ಈ ಎರಡೂ ಸಂಸ್ಥೆಗಳನ್ನು ಅನುಮೋದಿತ ಪಟ್ಟಿಯಲ್ಲಿ ಸೇರಿಸುವ ಮೂಲಕ ಆರ್‌ಎಫ್‌ಪಿ ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸಿತ್ತು ಎಂಬುದನ್ನು ಸಿಎಜಿ ವರದಿಯು ಬಹಿರಂಗಗೊಳಿಸಿದೆ.