ತಾವುಮಾಡಿದ್ದೆಂದು ಹೇಳಿಕೊಳ್ಳುತ್ತಿರುವವರ ಎದುರು,ಕಾಂಗ್ರೆಸ್ ಇತಿಹಾಸ,ಸಾಧನೆ ಬಗ್ಗೆ ಯಾರೂ ಹೇಳುತ್ತಿಲ್ಲಎಂಬುದೇ ಸಮಸ್ಯೆ

ಎಚ್. ವಿಶ್ವನಾಥ್

Update: 2023-02-27 06:52 GMT

ಮುಂದಿನ ವಿಧಾನಸಭಾ ಚುನಾವಣಾ ಸಿದ್ಧತೆಯ ಬಗ್ಗೆ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ‘ವಾರ್ತಾಭಾರತಿ’ಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

► ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರುವುದಾಗಿ ಹೇಳಿದ್ದೀರಿ?

ಕಾಂಗ್ರೆಸ್‌ನಲ್ಲಿ ೪೦ ವರ್ಷಗಳ ಸುದೀರ್ಘ ಯಾನ ನನ್ನದು. ಸಂಪರ್ಕ, ಸಂದರ್ಭ, ಸಂಘರ್ಷಗಳಲ್ಲಿ ಬಿಜೆಪಿ ಸೇರಬೇಕಾಗಿ ಬಂತು. ಕುಮಾರಸ್ವಾಮಿಯವರ ನಾಯಕತ್ವದಲ್ಲಿದ್ದ ಸಮ್ಮಿಶ್ರ ಸರಕಾರದ ನಿಷ್ಕ್ರಿಯತೆ, ದುರಹಂಕಾರ ಎಲ್ಲದರ ವಿರುದ್ಧ ಸಿಡಿದೆದ್ದದ್ದು ಸಮ್ಮಿಶ್ರ ಸರಕಾರದ ಪತನಕ್ಕೆ ಕಾರಣವಾಗಿ, ಬಿಜೆಪಿ ಸರಕಾರ ಸ್ಥಾಪನೆಯಾಯ್ತು. ಬಿಜೆಪಿಯ ಬಗ್ಗೆ ದೂರದಿಂದ ಕೇಳಿದ್ದೆವು. ಹತ್ತಿರದಿಂದ ಕಂಡ ಅನುಭವ ಇರಲಿಲ್ಲ. ನಾಡಿಗೆ ಒಳ್ಳೆಯದನ್ನು ಮಾಡಿಯಾರು ಎಂದು ಇವರನ್ನು ಬೆಂಬಲಿಸಿದ್ದೆವು.

► ಬಿಜೆಪಿಯ ಬಗ್ಗೆ ಗೊತ್ತಿದ್ದೂ ಅದರಿಂದ ಒಳ್ಳೆಯದಾಗುತ್ತದೆ ಎಂದುಕೊಂಡಿದ್ದೆ ಎಂದು ನೀವು ಹೇಳಿದರೆ ನಂಬಬೇಕೆ?

ನಾನು ಇಲ್ಲಿಯವರೆಗೆ ಯಾವುದನ್ನೂ ಕೆಟ್ಟ ದೃಷ್ಟಿಯಿಂದ ನೋಡಲಿಲ್ಲ. ಯಾವುದೇ ಪಕ್ಷಗಳ ಕಾರ್ಯಕ್ರಮಗಳು ಜನವಿರೋಧಿಯಲ್ಲ. ಆದರೆ ಅದನ್ನು ನಡೆಸುತ್ತಿದ್ದ ಜನ ನಾಯಕರ ಕೆಲವು ತೀರ್ಮಾನಗಳಿಂದ ಹಾಗಾಗುತ್ತಿತ್ತು. ಅಲ್ಪಸಂಖ್ಯಾತರು ಬೇಡ ಎಂದೆಲ್ಲ ಬಿಜೆಪಿ ಹೇಳುತ್ತದೆ ಎನ್ನುತ್ತಾರೆ. ಅದರೆ ಅವರ ತತ್ವಸಿದ್ಧಾಂತದಲ್ಲಿ ಎಲ್ಲಿಯೂ ಅದಿಲ್ಲ.

► ಹಿಂದೂ, ಹಿಂದುತ್ವ ಪರಿಕಲ್ಪನೆ ಯಾರದು ಹಾಗಾದರೆ?

ದೇಶದಲ್ಲಿ ಹಲವಾರು ಜಾತಿ ಜನಾಂಗದವರು, ಭಾಷಿಕರಿದ್ದಾರೆ. ವಿಭಿನ್ನ ಸಂಸ್ಕೃತಿಯಿದೆ. ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡವರು ನಾವು. ಜನತಾಂತ್ರಿಕ ವ್ಯವಸ್ಥೆ ಯಲ್ಲಿ ಬದುಕುತ್ತಿರುವವರು. ಹಾಗಾಗಿ ಬಿಜೆಪಿಯವರೊ ಮತ್ಯಾರೊ ಒಂದೇ ಧರ್ಮದವರಿರಬೇಕು ಎಂದರೆ ಸಾಧ್ಯವಿಲ್ಲ. ಯಾರೂ ಅದನ್ನು ಪ್ರತಿಪಾದನೆ ಮಾಡುವು ದಕ್ಕೂ ಆಗುವುದಿಲ್ಲ. ದೇಶ ಕಟ್ಟುವ ಕಾರ್ಯದಲ್ಲಿ ಅಲ್ಪಸಂಖ್ಯಾತರೂ ಇದ್ದಾರೆ.

► ನಿಮ್ಮ ನಿಲುಗಳನ್ನು ಒಪ್ಪದ, ಅಥವಾ ತದ್ವಿರುದ್ಧವಾದ ಪಕ್ಷಕ್ಕೆ ಬೆಂಬಲ ನೀಡಿದಿರಲ್ಲ, ಅದನ್ನು ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆಯಲ್ಲವೇ?

ಅದು ಅರ್ಥವಾಗಬೇಕಾದರೆ ಇಷ್ಟು ದಿನವಾಯಿತು. ಕಾಂಗ್ರೆಸ್ ಬಿಟ್ಟು, ಜೆಡಿಎಸ್‌ಗೆ ಬಂದು, ದೇವೇಗೌಡರ ಸಹಕಾರದಿಂದ ಶಾಸಕನಾಗಿ, ಅದರ ರಾಜ್ಯಾಧ್ಯಕ್ಷನೂ ಆದೆ. ಕಾಂಗ್ರೆಸ್‌ನಲ್ಲಿ ಶಾಸಕ, ಸಂಸದ, ಮಂತ್ರಿಯಾಗಿ ಕೆಲಸ ಮಾಡಿದ್ದವನು. ಇವತ್ತಿಗೂ ನಾನು ಕಾಂಗ್ರೆಸ್ ನನ್ನ ತಾಯಿ ಎನ್ನುತ್ತೇನೆ. ನಾನೆಲ್ಲೇ ಇರಬಹುದು.

► ಕಾಂಗ್ರೆಸ್ ಬಿಡಲು ಸಿದ್ದರಾಮಯ್ಯ ಕೂಡ ಕಾರಣ ಎಂದಿದ್ದಿರಿ. ಈಗ ಅದೇ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವವೇ ಇದೆ. ಹೀಗಿದ್ದೂ ಕಾಂಗ್ರೆಸ್‌ಗೆ ಮರಳುತ್ತೇನೆ ಎನ್ನುತ್ತಿದ್ದೀರಿ. ಒಂದು ವರ್ಷದಲ್ಲಿ ಏನು ಬದಲಾಗಿದೆ?

ಸಂದರ್ಭಗಳು ಎಲ್ಲದಕ್ಕೂ ಕಾರಣ. ಕಾಲಾಯ ತಸ್ಮೈನಮಃ ಎನ್ನುತ್ತೇವೆ. ಕಾಂಗ್ರೆಸ್ ಬಿಟ್ಟಾಗಲೂ ಹೇಳಿದ್ದೆ, ಝೇಂಡಾ ಬದಲಾಗಬಹುದು, ಆದರೆ ಅಜೆಂಡಾ ಬದಲಾಗದು ಎಂದು.

► ನಿಮ್ಮ ಸಂದರ್ಭವನ್ನು ಅವಕಾಶವಾದಿ ರಾಜಕಾರಣ ಎಂದು ಕರೆಯಬಹುದೇ?

ಇಲ್ಲ. ನಾನು ಅವಕಾಶವಾದಿ ರಾಜಕಾರಣಿಯಲ್ಲ. ನನಗೆ ಎಲ್ಲ ಅವಕಾಶಗಳನ್ನೂ ಕಾಂಗ್ರೆಸ್ ಕೊಟ್ಟಿದೆ. ನಾನೂ ಹಲವು ರೀತಿಯಲ್ಲಿ ಕಾಂಗ್ರೆಸ್‌ಗೆ ದುಡಿದಿದ್ದೇನೆ. ಜೆಡಿಎಸ್‌ಗೆ ಕೂಡ ಹಲವಾರು ವಿಚಾರಗಳಲ್ಲಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್‌ಗೆ ಮರಳುವುದು ಎಂದರೆ ನನ್ನ ಮನೆಗೆ ಹೋಗುವುದು. ನನ್ನ ಮನೆಯೇ ಕಾಂಗ್ರೆಸ್. ಅವಿಭಾಜ್ಯ ಕುಟುಂಬದಲ್ಲಿ ಏನೋ ಮನಸ್ತಾಪಗಳು ಬರಬಹುದು. ಅಥವಾ ನಮ್ಮಲ್ಲಿ ತಪ್ಪು ತಿಳುವಳಿಕೆಗಳು ಬಂದಿರಬಹುದು. ಆಗ ಕೆಲವು ದಿವಸ ಮನೆ ಬಿಟ್ಟುಬಿಡುತ್ತೇವೆ. ಆದರೆ ಮನೆ ಸೇರಲೇಬೇಕು. ಹಾಗಾಗಿ ನಾನು ನನ್ನ ಮನೆಗೆ ವಾಪಸ್ ಹೋಗುತ್ತಿದ್ದೇನೆಯೇ ಹೊರತು ಪಕ್ಷಾಂತರ ಮಾಡುತ್ತಿಲ್ಲ.

► ರಾಷ್ಟ್ರಮಟ್ಟದಲ್ಲಿ ನಿತೀಶ್ ಕುಮಾರ್, ರಾಜ್ಯಮಟ್ಟದಲ್ಲಿ ಎಚ್ ವಿಶ್ವನಾಥ್ ಒಂದೇ ಬಗೆಯ ಆಲೋಚನೆ, ಸಾಮರ್ಥ್ಯವುಳ್ಳವರು. ಆದರೆ ತೆಗೆದುಕೊಂಡ ತೀರ್ಮಾನಗಳು, ವಿಶ್ವಾಸಾರ್ಹತೆಯ ಬಗ್ಗೆಯೇ ಅನುಮಾನ ಮೂಡಿಸುತ್ತವೆ?

ಸಾರ್ವಜನಿಕವಾಗಿ ಹಾಗೆ ಕಾಣಿಸುತ್ತದೆ. ವಿಶ್ವಾಸಾರ್ಹತೆ ಕಳೆದುಕೊಂಡರಾ ಎಂಬ ಅನುಮಾನ ಬರುತ್ತದೆ. ಆದರೆ ಮನಸ್ಸಿನ ಭಾವನೆಗಳನ್ನು ನೀವು ಗ್ರಹಿಸುತ್ತಾ ಹೋದರೆ ವಸ್ತುಸ್ಥಿತಿ ಗೊತ್ತಾಗುತ್ತದೆ. ಕಾಂಗ್ರೆಸ್‌ನಿಂದ ಜೆಡಿಎಸ್, ಅಲ್ಲಿಂದ ಬಿಜೆಪಿ, ಅಲ್ಲಿಂದ ಮತ್ತೆ ಕಾಂಗ್ರೆಸ್‌ಗೆ ವಾಪಸ್ ಹೋಗಲು ಮನಸ್ಸು ಮಾಡಿರುವುದು ಇವೆಲ್ಲವೂ ವಾಸ್ತವ.

► ನೀವು ಮರಳುತ್ತಿರುವುದರ ಬಗ್ಗೆ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆ ಹೇಗಿದೆ?

ಎಲ್ಲರಿಗೂ ಸಂತೋಷವಾಗಿದೆ. ವಿಶ್ವನಾಥ್ ಬೇಕು ಎನ್ನಿಸಿದೆ. ಯಾಕೆಂದರೆ ಮಂತ್ರಿಯಾಗಿರುವ ಸಂದರ್ಭದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಾನು ಈ ರಾಜ್ಯಕ್ಕೆ ಕೊಟ್ಟವನು. ಹಲವಾರು ರೀತಿಯಲ್ಲಿ ಮುಖ್ಯಮಂತ್ರಿಯವರಿಗೆ ಸಹಕಾರಿಯಾಗಿ ನಿಂತಿದ್ದವನು. ವೀರಪ್ಪ ಮೊಯ್ಲಿ, ಎಸ್.ಎಂ. ಕೃಷ್ಣ ಅವರೆಲ್ಲ ನನ್ನ ಆಲೋಚನೆಗಳಿಗೆ ಬೆಂಬಲ ಕೊಟ್ಟಿದ್ದವರು.

► ನಿಮ್ಮ ಬಗ್ಗೆ ಶ್ರೀನಿವಾಸ್ ಪ್ರಸಾದ್ ಮಾಡಿರುವ ಆರೋಪ, ಬಿಜೆಪಿ ಕೊಟ್ಟಿದ್ದ ೧೦ ಕೋಟಿ ರೂ.ಯನ್ನು ಜೇಬಿಗಿಳಿಸಿಕೊಂಡಿದ್ದೀರಿ ಎಂಬುದು?

ನಾನು ಶುದ್ಧ. ಇದನ್ನು ಧೈರ್ಯವಾಗಿ ಹೇಳಬಲ್ಲೆ. ಯಾಕೆಂದರೆ ನಾನು ದೇವರಾಜಅರಸು ಜೊತೆ ಬೆಳೆದುಬಂದವನು. ನಾನು ಎಂದೂ ಯಾರಲ್ಲೂ ಕೈಯೊಡ್ಡಿದವನಲ್ಲ. ನಾನು ಸತ್ಯಹರಿಶ್ಚಂದ್ರನಲ್ಲದೇ ಇದ್ದರೂ ಈ ನಾಡಿನಲ್ಲಿ ಪ್ರಾಮಾಣಿಕವಾಗಿ ಬದುಕಲು ಪ್ರಯತ್ನಿಸುವವರ ಪಟ್ಟಿಯಲ್ಲಿ ನಾನೂ ಒಬ್ಬ ಎಂಬ ಹೆಮ್ಮೆ ಇದೆ.

► ಬಾಂಬೇ ಬಾಯ್ಸ್, ಬಾಂಬೇ ಡೇಸ್ ಬಗ್ಗೆ ಏನು ಹೇಳುತ್ತೀರಿ?

ದುಡ್ಡು ತೆಗೆದುಕೊಂಡು ಹೋದರು ೧೭ ಜನರು ಎಂಬ ಭಾವನೆ ಬಂದಿರಬಹುದು. ಇರಬಹುದು. ಆದರೆ ನಾನು ದುಡ್ಡಿಗಾಗಿ ಹೋದವನಲ್ಲ, ಒಳ್ಳೆಯ ಉದ್ದೇಶಕ್ಕಾಗಿ ಹೋದೆ. ನಾನು ಉದ್ದಕ್ಕೂ ಒಂದು ಸಿದ್ಧಾಂತವಿಟ್ಟುಕೊಂಡು ಬಂದವನು. ರಾಜಕಾರಣಕ್ಕೆ ಬಂದೇ ೫೦ ವರ್ಷವಾಗಿದೆ.

► ಸಕ್ರಿಯ ರಾಜಕಾರಣದಲ್ಲಿ ಕಾಂಗ್ರೆಸ್‌ನಲ್ಲಿ ಹೇಗೆ ಮುಂದುವರಿಯಬೇಕೆಂದು ಕೊಂಡಿದ್ದೀರಿ?

ನಾನು ಯಾವುದೋ ಸ್ಥಾನ ಬೇಕು ಎಂದು ಹೋಗುತ್ತಿಲ್ಲ. ನನ್ನ ಉಳಿದ ಜೀವನ ವನ್ನು ಕಾಂಗ್ರೆಸ್‌ನಲ್ಲಿ ಕಳೆಯಬೇಕು.

► ಈ ಮುಖಾಂತರ ಮಗನ ಭವಿಷ್ಯಕ್ಕೆ ಬುನಾದಿ ಹಾಕುತ್ತಿದ್ದೀರಾ?

ಮಗನ ಭವಿಷ್ಯ ಅವನದು. ನನ್ನ ಹಿರಿಯರೆಲ್ಲ ನಿರಕ್ಷರಕುಕ್ಷಿಗಳು. ನಮ್ಮ ಕುಟುಂಬದಲ್ಲಿ ನಾನೇ ಮೊದಲು ಕಲಿತವನು. ಅದನ್ನೆಲ್ಲ ಕೊಟ್ಟಿದ್ದು ಸಮಾಜ ಮತ್ತು ಸರಕಾರ. ಅದಕ್ಕೆ ಕೃತಜ್ಞನಾಗಿದ್ದೇನೆ. ಮಗ ಎಂಬಿಎ ಓದಿದವನು. ಅವನ ಭವಿಷ್ಯ ಅವನೇ ನೋಡಿಕೊಂಡು ಹೋಗುತ್ತಾನೆ.

► ಮೈಸೂರಿನಲ್ಲಿ ಈ ಬಾರಿ ಬಿಜೆಪಿ ಹಿಂದುತ್ವದ ಅಜೆಂಡಾವನ್ನು ಇಟ್ಟುಕೊಂಡು ಆಕ್ರಮಣಕಾರಿಯಾಗಿ ಚುನಾವಣೆ ಎದುರಿಸಲಿದೆ ಎನ್ನಲಾಗುತ್ತಿದೆ. ಏನೆನ್ನುತ್ತೀರಿ?

ಬಿಜೆಪಿ ಬಹಳ ಶ್ರಮ ಹಾಕುತ್ತಿದೆ. ಜೆಡಿಎಸ್, ಕಾಂಗ್ರೆಸ್ ಕೂಡ ಶ್ರಮ ಹಾಕುತ್ತಿವೆ. ಬಿಜೆಪಿ ಬಗ್ಗೆ ರಾಜ್ಯದಲ್ಲಿ ಭ್ರಮನಿರಸನ ಆಗಿದೆ. ನಾವೆಲ್ಲ ಸೇರಿ ಬಿಜೆಪಿ ಸರಕಾರ ತಂದೆವು, ಅವರಿಗೆ ಯಾವ ಕೃತಜ್ಞತೆಯೂ ಇಲ್ಲ. ನಾಡಿಗಾಗಿ ಏನನ್ನಾದರೂ ಮಾಡಬೇಕೆಂಬ ಹಂಬಲವೂ ಇಲ್ಲ. ನಾನು ಮೂರೂ ಪಕ್ಷಗಳನ್ನು ನೋಡಿದ್ದೇನೆ. ಆದರೆ ಬಿಜೆಪಿಯಲ್ಲಿ ಕಂಡಂಥ ಭ್ರಷ್ಟಾಚಾರ, ಸುಳ್ಳು, ಬೇರೆ ಯಾವ ಪಕ್ಷದಲ್ಲೂ ನೋಡಿಲ್ಲ, ಕೆಲ ವರ್ಷ ಹೋದರೆ ನರೇಂದ್ರ ಮೋದಿಯೇ ಮಹಾತ್ಮಾ ಗಾಂಧಿ ಎಂದು ಬಿಡುತ್ತಾರೆ.

► ನರೇಂದ್ರ ಮೋದಿಯವರ ಆಲೋಚನೆಗಳು ಉತ್ತಮವಾಗಿವೆ, ಬಿಜೆಪಿಯವರು ಜನತೆಗೆ ತಲುಪಿಸುತ್ತಿಲ್ಲ ಎಂದಿದ್ದಿರಿ. ನಿಮ್ಮಂಥವರೇ ಕಾಂಗ್ರೆಸ್ ಬಗ್ಗೆ ಮಾತಾಡದೆ ಬಿಜೆಪಿ ಬಗ್ಗೆ ಮಾತಾಡಿದ್ದನ್ನು ಹೇಗೆ ತೆಗೆದುಕೊಳ್ಳುವುದು?

ನಾನು ಅಭಿಮಾನದಿಂದ ಹೇಳಿದ್ದು. ಭಾರತದಂಥ ಎತ್ತರದ ಜನತಂತ್ರ ವ್ಯವಸ್ಥೆಯ ಪ್ರಧಾನಿ ಸ್ಥಾನವನ್ನು ಒಬ್ಬ ಹಿಂದುಳಿದ ವರ್ಗದವ ಏರುತ್ತಾನೆಂದರೆ ಹೆಮ್ಮೆಪಡಬೇಕು. ಎಲ್ಲವನ್ನೂ ವಿರೋಧಿಸಬೇಕಿಲ್ಲ. ಮೆಚ್ಚುವಂಥದ್ದನ್ನು ಮೆಚ್ಚಬೇಕು, ತಿರಸ್ಕರಿಸಬೇಕಾದ್ದನ್ನು ತಿರಸ್ಕರಿಸಬೇಕು. ಮೊನ್ನೆ ಮನಮೋಹನ ಸಿಂಗ್ ಬಗ್ಗೆ ಮಾತು ಬಂದಾಗಲೂ ಒಬ್ಬ ಪ್ರಧಾನಿ ಬಗ್ಗೆ ಸದನದಲ್ಲಿ ಲಘುವಾಗಿ ಮಾತನಾಡಬಾರದು ಎಂದು ಹೇಳಿದ್ದೆ.

► ಆದರೆ ಪ್ರಧಾನಿಯ ನಡವಳಿಕೆ ಕೂಡ ಅಷ್ಟೇ ಕಾರಣವಾಗುತ್ತದಲ್ಲವೆ? ಮನಮೋಹನ ಸಿಂಗ್ ಅಥವಾ ಹಿಂದಿನ ಯಾವುದೇ ಪ್ರಧಾನಿಗಳ ಜೊತೆ ಮೋದಿ ನಡವಳಿಕೆ ಹೋಲಿಕೆ ಮಾಡಲು ಸಾಧ್ಯವಾಗುತ್ತದೆಯೆ?

ಮೋದಿ ನಡವಳಿಕೆ ಬಹಳ ಕೆಟ್ಟದಾಗಿದೆ ಎನ್ನಲಾರೆ. ಆದರೆ ಯಾರೋ ಒಬ್ಬರು ನಾನೇ ಎನ್ನುತ್ತಿರುವಾಗ, ಇಲ್ಲ ನಾವೂ ಇದ್ದೇವೆ ಎನ್ನಬೇಕಲ್ಲವೆ? ಯಾವ ಕಾಂಗ್ರೆಸ್ ನಾಯಕರು ಕಾಂಗ್ರೆಸ್‌ನ ಇತಿಹಾಸ ಹೇಳುತ್ತಿದ್ದಾರೆ? ಕಾಂಗ್ರೆಸ್‌ನ ಕಾರ್ಯಕ್ರಮಗಳ ಬಗ್ಗೆ ಹೇಳುತ್ತಿದ್ದಾರೆ? ಇಂದಿರಾ ಗಾಂಧಿಯವರ ಬಗ್ಗೆ ಯಾರು ಮಾತನಾಡುತ್ತಿದ್ದಾರೆ? ಮೊನ್ನೆ ಎಚ್‌ಎಎಲ್ ಗೆ ಬಂದು, ಏರ್ ಶೋನಲ್ಲಿ ಮೋದಿ ತಾನೇ ಮಾಡಿದ್ದು ಎಂದು ತೋರಿಸಿಕೊಂಡಾಗ ಕಾಂಗ್ರೆಸ್‌ನ ಯಾರಾದರೂ ಪ್ರತಿಕ್ರಿಯಿಸಿದರಾ? ಎಚ್‌ಎಎಲ್ ಕೊಟ್ಟಿದ್ದು ಯಾರು? ನೆಹರೂ. ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ನವರತ್ನ ಕೊಟ್ಟವರು ನೆಹರೂ. ಎಚ್‌ಎಂಟಿ, ಎಚ್‌ಎಎಲ್, ಎನ್‌ಎಎಲ್, ಡಿಆರ್‌ಡಿಒ, ಬಿಇಎಂಎಲ್, ನಿಮಾನ್ಸ್ ಇಂಥವನ್ನೆಲ್ಲ ಕೊಟ್ಟದ್ದು ನೆಹರೂ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆಯೆ? ದೇವರಾಜ ಅರಸು ೨೧ ಲಕ್ಷ ಎಕರೆ ಭೂಮಿಯನ್ನು ಬಡವರಿಗೆಗೆ ಕೊಟ್ಟರು. ಯಾಕೆ ಹೇಳುತ್ತಿಲ್ಲ? ನೀವು ಹೇಳದೇ ಇರುವುದರಿಂದ ಅವರೇ ದೊಡ್ಡವರು ಎಂದು ಕಾಣಿಸುತ್ತಿದೆ. ನೀವು ಹೇಳಲು ಶುರು ಮಾಡಿದರೆ ಆಗ ನೀವು ದೊಡ್ಡವರು ಎಂದು ಜನಕ್ಕೂ ಗೊತ್ತಾಗುತ್ತದೆ.

► ನಿಮ್ಮ ಸಮಕಾಲೀನರಾದ ಯಡಿಯೂರಪ್ಪ ರಾಜಕೀಯ ನಿವೃತ್ತಿಯ ಮಾತನಾಡಿರುವುದರ ಬಗ್ಗೆ?

ಅವರಿಗೆ ವಯಸ್ಸಾಗಿದೆ. ಸಾಕು ಅನ್ನಿಸಿದೆ. ಚುನಾವಣಾ ರಾಜಕೀಯ ಇಲ್ಲ. ರಾಜ್ಯದ ರಾಜಕೀಯದಲ್ಲಿ ಇರುತ್ತೇನೆ ಎಂದೂ ಹೇಳಿದ್ದಾರೆ. ಅವರ ಅನುಭವಗಳು ಬೇಕು.

► ರಾಜ್ಯದ ಜನ ಈ ಬಾರಿ ಧರ್ಮರಾಜಕಾರಣ ಬದಿಗಿಟ್ಟು ಅಭಿವೃದ್ಧಿ ರಾಜಕಾರಣ ಗಮನದಲ್ಲಿಟ್ಟುಕೊಂಡು ಮತಹಾಕುತ್ತಾರೆ ಎನ್ನಿಸುತ್ತಿದೆಯೇ?

ಜನರಿಗೆ ಅರ್ಥವಾಗುತ್ತಿದೆ. ಭಾರತ ಎಲ್ಲರನ್ನೂ ತನ್ನ ಮಡಿಲಲ್ಲಿ ಇಟ್ಟುಕೊಂಡು ಹೋಗುತ್ತಿರುವ ದೇಶ. ಇಂದಿರಾ ಗಾಂಧಿಯವರ ದೇವರಕೋಣೆಯಲ್ಲಿದ್ದುದು ಭಾರತಮಾತೆಯ ಫೋಟೊ ಅಷ್ಟೆ. ಈಗಲೂ ಅದು ಮ್ಯೂಸಿಯಂನಲ್ಲಿದೆ. ಇವರೆಲ್ಲ ಭಾರತ್ ಮಾತಾ ಕೀ ಜೈ ಎನ್ನುತ್ತಾರೆ ಅಷ್ಟೆ. ರಾಷ್ಟ್ರಪ್ರೇಮ ಇವರು ಹೇಳಿಕೊಡಬೇಕೆ? ರಾಷ್ಟ್ರಪ್ರೇಮ ಭಾರತೀಯರ ರಕ್ತದಲ್ಲೇ ಇದೆ.

► ಕರ್ನಾಟಕದ ಬಿಜೆಪಿ ನಾಯಕರು ಎಲ್ಲೇ ಮಾತನಾಡಿದರೂ ಟಿಪ್ಪು ಮತ್ತು ಸಾವರ್ಕರ್ ಹೆಸರು ತರುತ್ತಾರೆ?

ಟಿಪ್ಪು ಬಗ್ಗೆ ಶಾಲೆಯಲ್ಲಿ ಅವರೆಲ್ಲ ಓದಿಯೇ ಇರುತ್ತಾರೆ. ಈಗ ಹೇಳುವುದೆಲ್ಲ ಕಟ್ಟುಕಥೆಗಳು. ಮತಕ್ಕೋಸ್ಕರ ಒಂದು ಧರ್ಮದ ವಿರುದ್ಧ ಹೋಗಬಾರದು. ಸರ್ವಧರ್ಮೀಯರನ್ನೂ ಪ್ರೀತಿಸುವವರು ಭಾರತೀಯರು. ಸರಕಾರವೇನಾದರೂ ಜೀವಂತವಾಗಿದ್ದರೆ ಅಶ್ವತ್ಥನಾರಾಯಣ ಅವರನ್ನು ಇಷ್ಟು ಹೊತ್ತಿಗೆ ಒಳಗೆ ಹಾಕಬೇಕಿತ್ತು. ಒಬ್ಬ ಸಂಪುಟ ದರ್ಜೆ ಸಚಿವ, ಉನ್ನತ ಶಿಕ್ಷಣ ಮಂತ್ರಿಯ ಯೋಚನೆಗಳು ಉನ್ನತವಾಗಿರಬೇಕು. ಆದರೆ ಅವು ಬಹಳ ಕನಿಷ್ಠವಾಗಿವೆ. ಕ್ಯಾಬಿನೆಟ್ ಮಂತ್ರಿ ಎಂದರೆ ಸರಕಾರದ್ದೇ ಭಾಗ. ಅಂದರೆ ಸರಕಾರವೇ ವಿರೋಧಪಕ್ಷ ನಾಯಕನ ತಲೆತೆಗೆಯಲು ಕರೆಕೊಟ್ಟ ಹಾಗಾಯಿತು.

► ಆದರೆ ಹೀಗೆ ಮಾತನಾಡುವುದೇ ಅವರ ದಿನನಿತ್ಯದ ಚಟುವಟಿಕೆಯಾಗಿ ಬಿಟ್ಟಿದೆಯಲ್ಲವೆ?

ನೂರು ಸಲ, ಸಾವಿರ ಸಲ ಸುಳ್ಳು ಹೇಳಿ ಸತ್ಯ ಮಾಡುವುದು. ಒಂದು ದಿನ ಅದು ಸುಳ್ಳು ಎಂದು ಗೊತ್ತಾಗುತ್ತದೆ. ಸದ್ಯಕ್ಕೆ ಏನೋ ಲಾಭವಾಗಬಹುದು. ಈಗಾಗಲೇ ಜನಕ್ಕೆ ಎಷ್ಟೋ ಆರ್ಥವಾಗಿದೆ. ಆದರೆ ಮೊದಲ ಸಲ ಮತ ಹಾಕುವವರಿಗೆ ಮೋದಿಯೇ ಜಗತ್ತು ಎಂಬುದು ತಲೆಯೊಳಗಿದೆ. ಅಂಥ ಭಾವನೆಯನ್ನು ಅವರ ಮನಸ್ಸಿನ್ಸೊಳಗೆ ತುಂಬಲಾಗುತ್ತಿದೆ. ಅದಕ್ಕೆ ಪ್ರತಿಯಾಗಿ, ಹಾಗಲ್ಲ ಹೀಗೆ ಹೀಗೆ ಎನ್ನುವವರು ಬೇಕು. ಇಲ್ಲಿ ಅದು ಆಗುತ್ತಿಲ್ಲ.

►  ಕಾಂಗ್ರೆಸ್‌ಗೆ ಅಧಿಕೃತವಾಗಿ ಯಾವಾಗ ಸೇರ್ಪಡೆಯಾಗುತ್ತೀರಿ?

ಅಧಿಕೃತ ಅಂತೇನಿಲ್ಲ ಅದಕ್ಕೆ. ನನ್ನ ಮನಸ್ಸು, ಹೃದಯ, ಭಾವನೆಯೆಲ್ಲ ಕಾಂಗ್ರೆಸ್ ಆಗಿದೆ. ಹಾಗಾಗಿ ಇದು ಹೊಸದೇನಲ್ಲ.

►  ಇಂಥದೊಂದು ಸರಕಾರ ಬರಲು ಕಾರಣವಾದೆವು ಎಂಬ ಅಪರಾಧಿ ಭಾವನೆ ಇದೆಯಾ ಅಥವಾ ಇದನ್ನೂ ಒಂದು ಅನುಭವ ಎಂದುಕೊಳ್ಳುತ್ತೀರಾ?

ಅನುಭವದ ಜೊತೆಗೆ ಪಶ್ಚಾತ್ತಾಪವೂ ಇದೆ. ಯಾವಾಗ ಹೋಗಿ ಗಾಂಧಿ ಪ್ರತಿಮೆಯ ಬಳಿ ಕೂರುತ್ತೇನೊ ಗೊತ್ತಿಲ್ಲ.

► ಗಾಂಧಿ ತತ್ವಗಳು ನೇಪಥ್ಯಕ್ಕೆ ಸರಿದುಹೋಗುತ್ತಿವೆ ಎಂದೆನಿಸುತ್ತದೆಯೇ?

ಸಾಧ್ಯವೇ ಇಲ್ಲ. ಗಾಂಧಿ ತತ್ವ ಸಿದ್ಧಾಂತ ಮಾನವತಾ ಕೆಲಸಗಳು ಸೂರ್ಯ ಚಂದ್ರರಿರುವವರೆಗೂ ಜೀವಂತವಾಗಿರುತ್ತವೆ. ಒಮ್ಮೊಮ್ಮೆ ಮೋಡಗಳು ಆವರಿಸಿ ಕತ್ತಲಾಗಬಹುದು. ಆದರೆ ಮೋಡ ಸರಿದು ಬೆಳಕು ಬರುತ್ತದೆ.

Similar News