ತೆಲಂಗಾಣ: ಮದುವೆ ಮನೆಯಲ್ಲಿ ನೃತ್ಯ ಮಾಡುವಾಗ ಕುಸಿದು ಬಿದ್ದು ಯುವಕ ಮೃತ್ಯು
ಒಂದೇ ವಾರದಲ್ಲಿ ನಾಲ್ಕನೇ ಘಟನೆ
ಹೈದರಾಬಾದ್: ದೇಶದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಜನರು ಹಠಾತ್ತನೆ ಕುಸಿದು ಬೀಳುವ ಹಾಗೂ ಕೆಲವು ಸಂದರ್ಭಗಳಲ್ಲಿ ಸಾಯುತ್ತಿರುವ ಆಘಾತಕಾರಿ ಘಟನೆ ವರದಿಯಾಗುತ್ತಿದೆ. ಇದೇ ರೀತಿಯ ಮತ್ತೊಂದು ಘಟನೆ ತೆಲಂಗಾಣದಿಂದ ವರದಿಯಾಗಿದೆ. 19 ವರ್ಷದ ಯುವಕ ತನ್ನ ಸಂಬಂಧಿಕರ ಮದುವೆ ಮನೆಯಲ್ಲಿ ನೃತ್ಯ ಮಾಡುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಹೈದರಾಬಾದ್‌ನಿಂದ 200 ಕಿ.ಮೀ. ದೂರದಲ್ಲಿರುವ ನಿರ್ಮಲ್ ಜಿಲ್ಲೆಯ ಪಾರ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಘಟನೆಯ ವೀಡಿಯೊದಲ್ಲಿ ಮಹಾರಾಷ್ಟ್ರ ಮೂಲದ ವ್ಯಕ್ತಿಯೊಬ್ಬರು ಮದುವೆಯ ಆರತಕ್ಷತೆಯಲ್ಲಿ ಹಾಡೊಂದಕ್ಕೆ ಉತ್ಸಾಹದಿಂದ ಡ್ಯಾನ್ಸ್ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ. ಆದರೆ, ಕೆಲವೇ ಸೆಕೆಂಡ್ ಗಳ ನಂತರ ಅವರು ಹಠಾತ್ತನೆ ಕುಸಿದು ನೆಲಕ್ಕೆ ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಯುವಕನಿಗೆ ತೀವ್ರ ಹೃದಯ ಸ್ತಂಭನ ಉಂಟಾಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.
*ಒಂದು ವಾರದಲ್ಲಿ ನಾಲ್ಕನೇ ಘಟನೆ
ಕಳೆದ 7 ದಿನಗಳಲ್ಲಿ ತೆಲಂಗಾಣದಲ್ಲಿ ನಡೆದ ನಾಲ್ಕನೇ ಘಟನೆ ಇದಾಗಿದೆ. ಇದಕ್ಕೂ ಮುನ್ನ ಹೈದರಾಬಾದ್‌ನಲ್ಲಿ ಶುಕ್ರವಾರ ಬಸ್ ಹಿಡಿಯಲು ಹೊರಟಿದ್ದ ಕಾರ್ಮಿಕನೊಬ್ಬನಿಗೆ ಇದ್ದಕ್ಕಿದ್ದಂತೆ ನೋವು ಕಾಣಿಸಿಕೊಂಡು ರಸ್ತೆಯಲ್ಲಿ ಕುಸಿದು ಬಿದ್ದಿದ್ದಾನೆ. ಆದಾಗ್ಯೂ, ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸ್ ರಾಜಶೇಖರ್ ಅವರಿಗೆ ಕಾರ್ಡಿಯೋಪಲ್ಮನರಿ(CPR) ಪುನಶ್ಚೇತನ ನೀಡುವ ಮೂಲಕ ಅವರ ಜೀವವನ್ನು ಉಳಿಸಿದರು.
ಫೆಬ್ರವರಿ 20 ರಂದು, ಹೈದರಾಬಾದ್‌ನಲ್ಲಿ ಹಲ್ದಿ ಸಮಾರಂಭದಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಕುಸಿದು ಸಾವನ್ನಪ್ಪಿದ್ದರು. ವರನ ಪಾದಗಳಿಗೆ ಅರಿಶಿನವನ್ನು ಲೇಪಿಸಲು ಮುಂದಕ್ಕೆ ಬಾಗಿದ ವ್ಯಕ್ತಿ ನೆಲದ ಮೇಲೆ ಕುಸಿದು ಬಿದ್ದಿರುವುದು ಘಟನೆಯ ವೀಡಿಯೊದಲ್ಲಿ ಕಂಡುಬಂದಿದೆ. ವ್ಯಕ್ತಿಯು ಹೃದಯ ಸ್ತಂಭನಕ್ಕೆ ಒಳಗಾಗಿದ್ದಾರೆ ಎಂದು ನಂಬಲಾಗಿದೆ.
ಫೆಬ್ರವರಿ 23 ರಂದು, 24 ವರ್ಷದ ಪೊಲೀಸ್ ಪೇದೆಯೊಬ್ಬರು ಹೈದರಾಬಾದ್‌ನ ಜಿಮ್‌ನಲ್ಲಿ ತಾಲೀಮು ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದರು.