ಐಐಟಿ ಬಾಂಬೆಯಲ್ಲಿ ದಲಿತ ವಿದ್ಯಾರ್ಥಿಯ ಆತ್ಮಹತ್ಯೆ: ತನಿಖೆಗೆ ವಿಶೇಷ ತಂಡ ರಚಿಸಿದ ಮಹಾರಾಷ್ಟ್ರ ಸರಕಾರ
ಮುಂಬೈ: ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ(ಐಐಟಿ) 18 ವರ್ಷದ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಲು ಮಹಾರಾಷ್ಟ್ರ ಸರಕಾರವು ಹಿರಿಯ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಗುಜರಾತ್‌ನ ಅಹಮದಾಬಾದ್ ಮೂಲದ ದರ್ಶನ್ ಸೋಲಂಕಿ(Darshan Solanki) ಅವರು ಐಐಟಿಬಿಯಲ್ಲಿ ಬಿ ಟೆಕ್ (ಕೆಮಿಕಲ್) ಕೋರ್ಸ್‌ನ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದು, ಫೆಬ್ರವರಿ 12 ರಂದು ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್ ಕಟ್ಟಡದ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ್ದಕ್ಕಾಗಿ ಸೋಲಂಕಿ ಐಐಟಿಬಿಯಲ್ಲಿ ತಾರತಮ್ಯವನ್ನು ಎದುರಿಸುತ್ತಿದ್ದ ಹಾಗೂ ಆತನ ಸಾವಿನಲ್ಲಿ ದುಷ್ಕೃತ್ಯವಿದೆ ಎಂದು ಸೋಲಂಕಿ ಕುಟುಂಬ ಶಂಕೆ ವ್ಯಕ್ತಪಡಿಸಿತ್ತು.
ಗುಜರಾತ್ ಕಾಂಗ್ರೆಸ್ ಶಾಸಕ ಹಾಗೂ ದಲಿತ ನಾಯಕ ಜಿಗ್ನೇಶ್ ಮೇವಾನಿ ಅವರು ಸೋಲಂಕಿ ಅವರ ಸಾವಿನ ಬಗ್ಗೆ ಎಸ್‌ಐಟಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು. ಈ ಘಟನೆಯನ್ನು "ಅನುಮಾನಾಸ್ಪದ" ಎಂದು ಬಣ್ಣಿಸಿದ್ದರು.
ಫೆಬ್ರವರಿ 24 ರಂದು, ಸೋಲಂಕಿ ಸಾವಿನ ತನಿಖೆಗೆ ಸರಕಾರ ಆದೇಶಿಸಿತ್ತು ಎಂದು ಅಧಿಕಾರಿ ಹೇಳಿದರು.