×
Ad

ಗುಂಪಿನಿಂದ ಮತಾಂತರ ಆರೋಪ: ಘಾಝಿಯಾಬಾದ್‌ನಲ್ಲಿ ಪಾದ್ರಿ ಹಾಗೂ ಪತ್ನಿಯನ್ನು ಬಂಧಿಸಿದ ಪೊಲೀಸರು

Update: 2023-02-28 15:03 IST

ಘಾಝಿಯಾಬಾದ್: ಒತ್ತಡ ಹಾಗೂ ಆಮಿಷದ ಮೂಲಕ ಘಾಝಿಯಾಬಾದ್ ನಿವಾಸಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿದ್ದರು ಎಂಬ ಆರೋಪದಲ್ಲಿ ಪಾದ್ರಿ ಹಾಗೂ ಅವರ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು scroll.in ವರದಿ ಮಾಡಿದೆ.

ಹಿಂದುತ್ವವಾದಿ ಸಂಘಟನೆಯಾದ ಬಜರಂಗ ದಳದ ಕಾರ್ಯಕರ್ತರು ನೀಡಿದ ದೂರನ್ನು ಆಧರಿಸಿ ಪಾದ್ರಿ ಸಂತೋಷ್ ಜಾನ್ ಹಾಗೂ ಅವರ ಪತ್ನಿ ಜೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆದರೆ, ಜಾನ್ ಹಾಗೂ ಅವರ ಪತ್ನಿಗೆ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಕ್ರಿಶ್ಚಿಯನ್ ಕಾರ್ಯಕರ್ತೆ ಮೀನಾಕ್ಷಿ ಸಿಂಗ್  ಮತಾಂತರದ ಆರೋಪವನ್ನು ನಿರಾಕರಿಸಿದ್ದಾರೆ.

"ರವಿವಾರ ಪಾದ್ರಿ ಹಾಗೂ ಅವರ ಪತ್ನಿ ಸೇವಾಕಾರ್ಯ ನಡೆಸುವಾಗ ಸ್ಥಳಕ್ಕೆ ಆಗಮಿಸಿದ ಪುಂಡರ ಗುಂಪೊಂದು ಪ್ರಕ್ಷುಬ್ಧ ವಾತಾವರಣ ನಿರ್ಮಿಸಿತಲ್ಲದೆ, ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ,  ನಂತರ ಪೊಲೀಸರಿಗೆ ಕರೆ ಮಾಡಿತು. ಪೊಲೀಸರು ಪಾದ್ರಿ ಹಾಗೂ ಅವರ ಪತ್ನಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದರಾದರೂ, ವಿಚಾರಣೆಯ ನಂತರ ಬಿಡುಗಡೆ ಮಾಡಿದರು" ಎಂದು ಮೀನಾಕ್ಷಿ ಸಿಂಗ್ ಪ್ರತಿಪಾದಿಸಿದ್ದಾರೆ.

40-50 ಮಂದಿಯ ಗುಂಪು ಪೊಲೀಸ್ ಠಾಣೆಯೆದುರು ಪ್ರತಿಭಟನೆ ನಡೆಸಿ ಅವರ ಬಂಧನಕ್ಕೆ ಒತ್ತಾಯಿಸಿದ್ದರಿಂದ ಪೊಲೀಸರು ಮತ್ತೆ ದಂಪತಿಗಳನ್ನು ವಶಕ್ಕೆ ಪಡೆದರು. ಪುಂಡರ ಗುಂಪಿನಿಂದ ಒತ್ತಡಕ್ಕೆ ಒಳಗಾಗಿದ್ದರಿಂದ ಪೊಲೀಸರು ಮತ್ತೆ ಅವರನ್ನು ವಶಕ್ಕೆ ಪಡೆದಿದ್ದಾರೆ. ದಂಪತಿಗಳ ಫೋನ್ ಹಾಗೂ ಲ್ಯಾಪ್‌ಟಾಪ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಅವರು ಹೇಳಿದ್ದಾರೆ.

ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ಸುಗ್ರೀವಾಜ್ಞೆ, 2020ರ ಅಡಿಯಲ್ಲಿ ಘಾಝಿಯಾಬಾದ್ ನಿವಾಸಿ ಪ್ರವೀಣ್ ನಾಗರ್ ಎಂಬುವವರು ಸಲ್ಲಿಸಿರುವ ದೂರನ್ನು ಆಧರಿಸಿ, ಪ್ರಾಥಮಿಕ ಮಾಹಿತಿ ವರದಿಯನ್ನು ದಾಖಲಿಸಲಾಗಿದೆ.

ಮೀನಾಕ್ಷಿ ಸಿಂಗ್ ಪ್ರಕಾರ, ಈ ಪ್ರಕರಣವನ್ನು ರವಿವಾರ ರಾತ್ರಿ 9.30ರ ಹೊತ್ತಿಗೆ ದಾಖಲಿಸಲಾಗಿದೆ. ಸೋಮವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ ದಂಪತಿಗಳಿಗೆ ಜಾಮೀನು ನಿರಾಕರಿಸಿದೆ.

ಸುಪ್ರೀಂಕೋರ್ಟ್ ಮಾರ್ಗಸೂಚಿ ಪ್ರಕಾರ, ಅಪರಾಧ ದಂಡ ಸಂಹಿತೆಯ ಸೆಕ್ಷನ್ 41ರನ್ವಯ ಯಾವುದೇ ಅಪರಾಧ ಏಳು ವರ್ಷಗಳಿಗಿಂತ ಕಡಿಮೆ ಅವಧಿಯ ಶಿಕ್ಷೆಯನ್ನು ಮಾತ್ರ ಆಕರ್ಷಿಸುವಂತಿದ್ದರೆ ಅಂತಹ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿ, ಪೊಲೀಸರು ಬಂಧಿಸಬಹುದಾಗಿದೆ.

Similar News