ಶಾಸಕರಿಗೆ ಆಮಿಷ ಪ್ರಕರಣವನ್ನು ಸಿಬಿಐಗೆ ನೀಡುವುದರಿಂದ ನ್ಯಾಯಹರಣವಾಗುತ್ತದೆ: ಸುಪ್ರೀಂಕೋರ್ಟ್‌ಗೆ ತೆಲಂಗಾಣ ಸರ್ಕಾರ
ಹೊಸದಿಲ್ಲಿ: ಬಿಆರ್‌ಎಸ್ ಶಾಸಕರಿಗೆ ಆಮಿಷ ಒಡ್ಡಿದ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿರುವ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿರುವ ತೆಲಂಗಾಣ ಸರ್ಕಾರ, ಈ ಹಿಂದೆ ರಾಜ್ಯ ಪೊಲೀಸರು ಅಪರಾಧಗಳಲ್ಲಿ ಭಾಗಿಯಾಗಿದ್ದರೆ ಮಾತ್ರ ಅಂತಹ ಪ್ರಕರಣಗಳನ್ನು ಸಿಬಿಐಗೆ ಹಸ್ತಾಂತರಿಸಲಾಗುತ್ತಿತ್ತು ಎಂದು ಸೋಮವಾರ ಸುಪ್ರೀಂಕೋರ್ಟ್ ಎದುರು ವಾದ ಮಂಡಿಸಿದೆ ಎಂದು newindianexpress.com ವರದಿ ಮಾಡಿದೆ.
ನ್ಯಾ. ಬಿ.ಆರ್.ಗವಾಯಿ ನ್ಯಾಯಪೀಠದೆದುರು ತೆಲಂಗಾಣ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ದುಷ್ಯಂತ್ ದವೆ, "ಬಿಜೆಪಿ ಸರ್ಕಾರದ ನಿಯಂತ್ರಣದಲ್ಲಿರುವ ಸಿಬಿಐಗೆ ಈ ಪ್ರಕರಣವನ್ನು ವರ್ಗಾಯಿಸುವುದರಿಂದ ಗಂಭೀರ ಪರಿಣಾಮವಾಗಲಿದೆ. ಈ ತೀರ್ಪು ಪ್ರಜಾಪ್ರಭುತ್ವದ ಹೃದಯಕ್ಕೆ ಘಾಸಿ ಮಾಡಲಿದೆ" ಎಂದು ವಾದಿಸಿದರು.
"ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದರೆ ಅದರಿಂದ ತೀವ್ರ ನ್ಯಾಯ ಹರಣವಾಗಲಿದೆ" ಎಂದು ವಾದಿಸಿದ ದುಷ್ಯಂತ್ ದವೆ, "ಸ್ವತಃ ಬಿಜೆಪಿಯೇ ಎರಡು ಹಂತದಲ್ಲಿ ಸಿಬಿಐ ತನಿಖೆ ಅಗತ್ಯವಿಲ್ಲವೆಂದು ಹೇಳಿದೆ. ಅದಕ್ಕೆ ದಾಖಲೆಯೂ ಇದೆ. ಅಲ್ಲದೆ ವಿಶೇಷ ತನಿಖಾ ತಂಡದ ತನಿಖೆಯಲ್ಲಿ ಹಸ್ತಕ್ಷೇಪವಾಗಿರುವುದಕ್ಕೆ ಯಾವುದೇ ಪುರಾವೆ ಇಲ್ಲ. ಈ ವಿಚಾರವನ್ನು ಅಂತಿಮವಾಗಿ ಆಲಿಸಬೇಕು ಎಂದು ಗೌರವಯುತವಾಗಿ ಮನವಿ ಮಾಡಿಕೊಳ್ಳುತ್ತೇನೆ. ಇದರಿಂದ ಪ್ರಜಾಪ್ರಭುತ್ವದ ಹೃದಯ ಘಾಸಿಗೊಳ್ಳಲಿದೆ" ಎಂದು ಹೇಳಿದರು.
ಇದಕ್ಕೂ ಮುನ್ನ ಡಿಸೆಂಬರ್ 26ರಂದು ತೆಲಂಗಾಣ ಹೈಕೋರ್ಟ್ ಬಿಆರ್‌ಎಸ್ ಶಾಸಕರಿಗೆ ಆಮಿಷವೊಡ್ಡಿದ್ದ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಆದೇಶ ಹೊರಡಿಸಿತ್ತು. ಅಲ್ಲದೆ, ಪ್ರಾಥಮಿಕ ಹಂತದಲ್ಲಿ ಸಹಾಯಕ ಪೊಲೀಸ್ ಆಯುಕ್ತರ ಮಟ್ಟದಲ್ಲಿ ನಡೆದಿದ್ದ ತನಿಖೆ ಹಾಗೂ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸುವ ತೆಲಂಗಾಣ ಸರ್ಕಾರದ ನಿರ್ಧಾರವನ್ನೂ ಕೂಡಾ ಹೈಕೋರ್ಟ್ ವಜಾಗೊಳಿಸಿತ್ತು. ಈ ಆದೇಶದ ವಿರುದ್ಧ ತೆಲಂಗಾಣ ಸರ್ಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.