ಬಿಸಿಲಿನ ತಾಪ ಸಂಬಂಧಿ ಆರೋಗ್ಯ ಸಮಸ್ಯೆಗಳು, ಸಾವುಗಳ ಮಾಹಿತಿ ಒದಗಿಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ
ತಾಪಮಾನ ಏರಿಕೆ ಹಿನ್ನೆಲೆ
ಹೊಸದಿಲ್ಲಿ: ದೇಶದಲ್ಲಿ ತಾಪಮಾನದ ಏರಿಕೆ ಸಂಬಂಧಿತ ಅನಾರೋಗ್ಯ (heat-related illnesses) ಪ್ರಕರಣಗಳು ಹಾಗೂ ಬಿಸಿಲಿನ ಝಳದಿಂದ ಉಂಟಾದ ಸಾವುಗಳ ಕುರಿತ ಮಾಹಿತಿಯನ್ನು ನಿಗದಿತ ವೆಬ್ ಪೋರ್ಟಲ್‌ನಲ್ಲಿ ಎಲ್ಲಾ ಆರೋಗ್ಯ ಸೇವಾ ಸಂಸ್ಥೆಗಳು ಒದಗಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ಕೇಂದ್ರದ ಸೂಚನೆಯ ಅನುಸಾರ ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯ ಕುರಿತ ರಾಷ್ಟ್ರೀಯ ಕಾರ್ಯಕ್ರಮದಡಿಯಲ್ಲಿ ತೀವ್ರ ಸೆಖೆ ಸಂಬಂಧಿತ ಅನಾರೋಗ್ಯಗಳ ಕುರಿತು ದೈನಂದಿನ ಸರ್ವೇಕ್ಷಣೆ ಬುಧವಾರದಿಂದ ಆರಂಭಗೊಂಡಿದೆ.
"ತಾಪಮಾನಗಳು ಈಗಾಗಲೇ ಕೆಲವೊಂದು ಕಡೆಗಳಲ್ಲಿ ಅಸಹಜ ಏರಿಕೆ ಕಂಡಿವೆ ಹಾಗೂ ವರ್ಷದ ಈ ಸಮಯದಲ್ಲಿ ಸಾಮಾನ್ಯವಾಗಿ ಕಂಡುಬರುವ ತಾಪಮಾನಗಳಿಗಿಂತ ಈ ಬಾರಿ ಬಹಳಷ್ಟು ವ್ಯತ್ಯಾಸ ಕೆಲವೊಂದು ಜಿಲ್ಲೆಗಳು/ರಾಜ್ಯಗಳಿಂದ ವರದಿಯಾಗಿದೆ," ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.
ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ಸೂಕ್ತ ಔಷಧಿಗಳು, ಇಂಟ್ರಾವೇನಸ್ ಫ್ಲೂಯಿಡ್‌ಗಳು, ಐಸ್ ಪ್ಯಾಕ್‌ಗಳು, ಒಆರ್‌ಎಸ್ ಪ್ಯಾಕೆಟ್‌ಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಇರಿಸಿಕೊಳ್ಳುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತಗಳಿಗೆ ಸೂಚಿಸಿದೆ.
ಕಳೆದ ವಾರವಷ್ಟೇ ಹವಾಮಾನ ಇಲಾಖೆಯು ಮಹಾರಾಷ್ಟ್ರ ಮತ್ತು ಗುಜರಾತಿನ ಕೆಲ ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಾಗುವ ಎಚ್ಚರಿಕೆ ನೀಡಿತ್ತು.
ಇದನ್ನೂ ಓದಿ: ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸ ನೀಡುವುದಕ್ಕೂ ಮೊದಲು ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ