×
Ad

3.40 ಲಕ್ಷ ಕೋಟಿ ರೂ.ಗೆ ಏರಿದ ಗುಜರಾತ್ ರಾಜ್ಯದ ಸಾಲ: ಪ್ರತಿಪಕ್ಷ, ಆರ್ಥಿಕ ತಜ್ಞರ ಕಳವಳ

Update: 2023-03-01 22:37 IST

ಹೊಸದಿಲ್ಲಿ, ಮಾ. 1:  ಗುಜರಾತ್‌ನ ಸಾರ್ವಜನಿಕ ಸಾಲ ಕಳೆದ ವರ್ಷ ಮಾರ್ಚ್ ಅಂತ್ಯದಲ್ಲಿ ದಾಖಲಾಗಿದ್ದ 3.20 ಲಕ್ಷ ಕೋಟಿ ರೂ.ನಿಂದ 3,40 ಲಕ್ಷ ಕೋ.ರೂ.ಗೆ ಏರಿಕೆಯಾಗಿದೆ.

ರಾಜ್ಯದ ಪ್ರತಿಪಕ್ಷ ಹಾಗೂ ಆರ್ಥಿಕ ತಜ್ಞರು ಸಾಲ ಏರಿಕೆಯಾಗುತ್ತಿರುವುದು ಹಾಗೂ ಆದಾಯ ಇಳಿಕೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಮಹಾಲೇಖಪಾಲರು (ಸಿಎಜಿ) ಸಾರ್ವಜನಿಕ ಸಾಲ ಏರಿಕೆಯಾಗುತ್ತಿರುವ ಕುರಿತು ರಾಜ್ಯ ಸರಕಾರವನ್ನು ಎಚ್ಚರಿಸಿದ್ದರು. ರಾಜ್ಯ ಸಾಲದ ಬಲೆಗೆ ಬೀಳುತ್ತಿದೆ ಎಂದು ಹೇಳಿದ್ದರು.
 
ರಾಜ್ಯ ಸರಕಾರ ಮಂಗಳವಾರ ವಾರ್ಷಿಕ ಮುಂಗಡಪತ್ರ ಮಂಡಿಸುವ ಸಂದರ್ಭ ಇತ್ತೀಚೆಗಿನ ಅಂಕಿ-ಅಂಶವನ್ನು ಬಿಡುಗಡೆ ಮಾಡಿದೆ. ‘‘ಗುಜರಾತ್‌ನ ಸಾರ್ವಜನಿಕ ಸಾಲ 3,50,000 ಕೋ.ರೂ.ಗೆ ಏರಿಕೆಯಾಗಬಹುದು ಎಂದು ನಮ್ಮ ಹಿಂದಿನ ಅಂದಾಜು ಹೇಳಿತ್ತು. 
ಆದರೆ, ಪರಿಷ್ಕೃತ ಅಂದಾಜಿನ ಪ್ರಕಾರ ಸಾರ್ವಜನಿಕ ಸಾಲ 3,40.000 ಕೋ.ರೂ.ಗೆ ಏರಿಕೆಯಾಗಿದೆ. ನಮ್ಮ ಅಂದಾಜಿನ ಪ್ರಕಾರ ಈ ಸಾರ್ವಜನಿಕ ಸಾಲ ಮುಂದಿನ ವರ್ಷದಲ್ಲಿ 3,81,000 ಕೋ.ರೂ.ಗೆ ಏರಿಕೆಯಾಗಲಿದೆ’’ ಎಂದು ರಾಜ್ಯ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ (ಆರ್ಥಿಕ ವ್ಯವಹಾರ) ಮೋನಾ ಕನಧಾರ್ ತಿಳಿಸಿದ್ದಾರೆ.
 
ಹಣಕಾಸು ಇಲಾಖೆಯ ಇನ್ನೋರ್ವ ಪ್ರಧಾನ ಕಾರ್ಯದರ್ಶಿ ಜೆ.ಪಿ. ಗುಪ್ತಾ, ರಾಜ್ಯ ಸಾಲ ಹಾಲಿ ನಿಯಮಗಳಿಗೆ ಅನುಗುಣವಾಗಿ ನಿವ್ವಳ ರಾಜ್ಯ ಆಂತರಿಕ ಉತ್ಪನ್ನ (ಜಿಎಸ್‌ಡಿಪಿ)ದ ಶೇ. 27ರ ಮಿತಿಯಲ್ಲಿರಬೇಕು. ಆದರೆ, ನಮ್ಮ ಜಿಎಸ್‌ಡಿಪಿ ಪ್ರಸಕ್ತ 22 ಲಕ್ಷ ಕೋಟಿ ಇದೆ. ಶೇ. 27ರಷ್ಟಿದ್ದರೆ, ನಾವು 5.75 ಲಕ್ಷ ಕೋ.ರೂ. ಸಾಲವನ್ನು ಭರಿಸಬಹುದಾಗಿದೆ. ಆದರೂ ಗುಜರಾತ್‌ನ ಸಾಲ 3.5 ಲಕ್ಷ ಕೋ.ರೂ.ಗಿಂತ ಕಡಿಮೆ ಇದೆ ಎಂದು ಗುಪ್ತಾ ಹೇಳಿದ್ದಾರೆ. 
ಸಾರ್ವಜನಿಕ ಸಾಲ ಹೆಚ್ಚಾಗುವುದರೊಂದಿಗೆ, ಪ್ರತಿಯೋರ್ವರಿಗೆ ಕಳೆದ ವರ್ಷದ 46,000 ರೂ.ಗೆ ಹೋಲಿಸಿದರೆ ಈ ವರ್ಷ 48,500 ರೂ. ಹೊರೆ ಬೀಳಲಿದೆ.

Similar News