ಉ.ಪ್ರ.: 6 ವರ್ಷದ ದಲಿತ ಬಾಲಕಿಯ ಅಸ್ಥಿಪಂಜರ ಪತ್ತೆ; ಅತ್ಯಾಚಾರದ ಆಯಾಮದಲ್ಲಿ ಪೊಲೀಸ್‌ ತನಿಖೆ

Update: 2023-03-01 18:02 GMT

ಲಕ್ನೋ, ಮಾ. 1: ಕಾನ್ಪುರದ ಸಜತಿ ಪೊಲೀಸ್ ಠಾಣಾ ವಾಪ್ತಿಯ ಗ್ರಾಮದ ನಿರ್ಜನ ಹೊಲದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 6 ವರ್ಷದ ಬಾಲಕಿಯ ಅಸ್ತಿಪಂಜರದ ಭಾಗ ಫೆಬ್ರವರಿ 28ರಂದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮೇಲ್ನೋಟಕ್ಕೆ ಬಾಲಕಿಯ ಅತ್ಯಾಚಾರ ಎಸಗಿ ಹತ್ಯೆ ನಡೆಸಿರುವಂತೆ ಕಂಡು ಬಂದಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
ಪೊಲೀಸರು ಚಂದ್ರಭಾನ್, ಆತನ ಪತ್ನಿ ಸುಧಾ ಹಾಗೂ ಸಹೋದರ ಸುಲ್ತಾನ್ ಸೇರಿದಂತೆ ಮೂವರನ್ನು ವಿಚಾರಣೆ ನಡೆಸಲು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೆಚ್ಚುವರಿ ಡಿಸಿಪಿ (ದಕ್ಷಿಣ) ಅಂಕಿತಾ ಶರ್ಮಾ ಅವರು ತಿಳಿಸಿದ್ದಾರೆ. 

ತನ್ನದೇ ಗ್ರಾಮದಲ್ಲಿರುವ ಮಾವನ ಮನೆಗೆ ಹೋಗಿ ಬರುತ್ತೇನೆ ಎಂದು ತೆರಳಿದ್ದ ಬಾಲಕಿ ಶನಿವಾರ ನಾಪತ್ತೆಯಾಗಿದ್ದಳು ಎಂದು ಅವರು ತಿಳಿಸಿದ್ದಾರೆ. 
ತೀವ್ರ ಹುಡುಕಾಟದ   ಬಳಿಕ ಅದೇ ದಿನ ರಾತ್ರಿ ಬಾಲಕಿಯ ಕುಟುಂಬ ಪೊಲೀಸರನ್ನು ಸಂಪರ್ಕಿಸಿ ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಬಾಲಕಿಯನ್ನು ಅಪಹರಿಸಿದ ಆರೋಪದಲ್ಲಿ ಚಂದ್ರಭಾನ್, ಆತನ ಪತ್ನಿ ಸುಧಾ, ತಂದೆ ರಾಮ್ ಪ್ರಕಾಶ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. 
ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿ ವಿಜ್ಞಾನ ತಜ್ಞರಿಗೆ ಕರೆ ನೀಡಲಾಗಿದೆ. ಬಾಲಕಿಯ ಮನೆಯಿಂದ ಒಂದೂವರೆ ಕಿ.ಮೀ. ದೂರದಲ್ಲಿ ಅಸ್ತಿಪಂಜರ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.  

‘‘ಮರಣೋತ್ತರ ಪರೀಕ್ಷೆಯ ಸಂದರ್ಭ ಸಾವಿನ ಖಚಿತ ಕಾರಣವನ್ನು ಖಚಿತಪಡಿಸಿಕೊಳ್ಳುವುದರೊಂದಿಗೆ ಅತ್ಯಾಚಾರದ ಆಯಾಮವನ್ನು ಕೂಡ ಶೋಧಿಸಲು ನಾವು ನಿರ್ಧರಿಸಿದ್ದೇವೆ. ಬಾಲಕಿಯ ಹತ್ಯೆ ನಡೆಸುವ ಮುನ್ನ ಅತ್ಯಾಚಾರ ನಡೆಸಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ’’ ಎಂದು ಶರ್ಮಾ ಹೇಳಿದ್ದಾರೆ. 

Similar News