ಬೀದಿ ನಾಯಿಗಳ ದಾಳಿಗೆ ಮೂರು ವರ್ಷದ ಬಾಲಕಿ ಬಲಿ

Update: 2023-03-02 03:38 GMT

ಬರೇಲಿ: ಬೀದಿ ನಾಯಿಗಳ ಗುಂಪು ಮೂರು ವರ್ಷದ ಬಾಲಕಿಯೊಬ್ಬಳ ಮೇಲೆ ದಾಳಿ ಮಾಡಿ ಸಾಯಿಸಿದ ಹೃದಯ ವಿದ್ರಾವಕ ಘಟನೆ ಬರೇಲಿಯ ಸಿಬಿ ಗಂಜ್ ಪ್ರದೇಶದ ಬಂದಿಯಾ ಗ್ರಾಮದಲ್ಲಿ ನಡೆದಿದೆ. ಬಾಲಕಿಯ ದೇಹದಲ್ಲಿ 200 ಕಡೆಗಳಲ್ಲಿ ನಾಯಿ ಕಚ್ಚಿದ ಗುರುತುಗಳಿವೆ ಎಂದು ವೈದ್ಯರು ಹೇಳಿದ್ದಾರೆ.

ಅವಧೇಶ್ ಗಂಗ್ವಾರ್ ಎಂಬ ಕೂಲಿ ಕಾರ್ಮಿಕನ ನಾಲ್ವರು ಮಕ್ಕಳ ಪೈಕಿ ಪಾರಿ ಚಿಕ್ಕವಳು. ಮಂಗಳವಾರ ಸಂಜೆ ಬಾಲಕಿ ಮನೆಯ ಹೊರಗೆ ಇದ್ದಾಗ ಅಕ್ಕ ಸುನಿತಾ ರಾತ್ರಿಯ ಅಡುಗೆ ಮಾಡುತ್ತಿದ್ದಳು. ಪುಟ್ಟ ಮಗು ಆಟವಾಡಲು ಮೈದಾನಕ್ಕೆ ಹೋದ ಸಂದರ್ಭದಲ್ಲಿ ಹಸಿದ ಏಳೆಂಟು ನಾಯಿಗಳು ದಾಳಿ ಮಾಡಿದವು ಎನ್ನಲಾಗಿದೆ.

ಆಕೆ ನೆರವಿಗಾಗಿ ಕೂಗಿಕೊಂಡಾಗ ಒಬ್ಬ ಯುವಕ ಆಕೆಯನ್ನು ರಕ್ಷಿಸಲು ಧಾವಿಸಿದ. ಆತನಿಗೂ ನಾಯಿಗಳು ಕಚ್ಚಿ ಆತನಿಂದ ಪಾರಿಯನ್ನು ಕಿತ್ತುಕೊಂಡವು. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದಾಗ, ಮಗು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು.

"ಬಾಲಕಿ ಮನೆಯಿಂದ ದೂರ ತೆರಳಿದ್ದರಿಂದ ಆಕೆ ಕೂಗಿಕೊಂಡದ್ದು ಮನೆಯವರಿಗೆ ಕೇಳಿಸಲಿಲ್ಲ. ನಾಯಿಗಳು ಸುಮಾರು 50 ಮೀಟರ್ ದೂರಕ್ಕೆ ಬಾಲಕಿಯನ್ನು ಎಳೆದೊಯ್ದಿವೆ. ದೇಹದ ಎಲ್ಲೆಡೆ ಕಚ್ಚಿದ ಗುರುತುಗಳಿದ್ದವು. ಕತ್ತು ಸೇರಿದಂತೆ ಹಲವೆಡೆ ಆಳವಾದ ಗಾಯಗಳಿದ್ದವು" ಎಂದು ಮೃತ ಬಾಲಕಿಯ ಮಾವ ಜಿತೇಂದ್ರ ಕುಮಾರ್ ವಿವರಿಸಿದ್ದಾರೆ.

Similar News