×
Ad

ಅದಾನಿ ವಿವಾದ: ತನಿಖೆಗೆ ಆದೇಶಿಸಿದ ಸುಪ್ರೀಂ ಕೋರ್ಟ್‌; ತಜ್ಞರ ಸಮಿತಿ ರಚನೆ

Update: 2023-03-02 11:59 IST

ಹೊಸದಿಲ್ಲಿ: ಅಮೆರಿಕಾದ ಶಾರ್ಟ್‌ ಸೆಲ್ಲರ್‌ ಹಿಂಡೆನ್‌ಬರ್ಗ್‌ ಸಂಸ್ಥೆಯು ಅದಾನಿ ಸಮೂಹದ  ವಿರುದ್ಧ ಅವ್ಯವಹಾರಗಳ ಆರೋಪ ಹೊರಿಸಿ ಹೊರ ತಂದ ವರದಿಯಿಂದ ಉದ್ಭವಿಸಿರುವ ವಿವಿಧ ವಿಚಾರಗಳನ್ನು ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ ಇಂದು ಆದೇಶಿಸಿದೆಯಲ್ಲದೆ ತಜ್ಞರ ಸಮಿತಿಯನ್ನೂ ರಚಿಸಿದೆ.

ನಿವೃತ್ತ ನ್ಯಾಯಾಧೀಶ ಅಭಯ್‌ ಮನೋಹರ್‌ ಸಪ್ರೆ ಅವರ ನೇತೃತ್ವದ ಈ ಸಮಿತಿಯಲ್ಲಿ ಹಿರಿಯ ಬ್ಯಾಂಕರುಗಳಾದ ಕೆ ವಿ ಕಾಮತ್‌ ಮತ್ತು ಒ ಪಿ ಭಟ್‌, ಇನ್ಫೋಸಿಸ್‌ ಸಹ-ಸ್ಥಾಪಕ ನಂದನ್‌ ನಿಲೇಕಣಿ ಹಾಗೂ ನಿವೃತ್ತ ನ್ಯಾಯಮೂರ್ತಿ ಜೆ ಪಿ ದೇವಧರ್‌ ಇದ್ದಾರೆ.

ಅದಾನಿ ಸಮೂಹಕ್ಕೆ ಸಂಬಂಧಿಸಿದಂತೆ ಸದ್ಯ ನಡೆಯುತ್ತಿರುವ ತನಿಖೆಯನ್ನು ಸೆಬಿ ಎರಡು ತಿಂಗಳೊಳಗೆ ಪೂರ್ಣಗೊಳಿಸಿ ಸ್ಥಿತಿಗತಿ ವರದಿ ಸಲ್ಲಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಹೇಳಿದ್ದಾರೆ.  ಅದಾನಿ ಸಮೂಹ ನಿಯಮಗಳನ್ನು ಉಲ್ಲಂಘಿಸಿದೆಯೇ ಹಾಗೂ ಸ್ಟಾಕ್‌ ಬೆಲೆಗಳನ್ನು ತಿರುಚಿದೆಯೇ ಎಂಬ ಕುರಿತೂ ಸೆಬಿ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಅದಾನಿ ವಿವಾದದ ಕುರಿತು ತನಿಖೆ ನಡೆಸುವ ಕುರಿತಂತೆ ಹಾಗೂ ವಿವಿಧ ಸಂಬಂಧಿತ ವಿಷಯಗಳ ಕುಳಿತಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಜ್ಞ ಸಮಿತಿ ಶಿಫಾರಸು ಮಾಡಲಿದೆ.

ಹೂಡಿಕೆದಾರರ ಹಿತರಕ್ಷಣೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸುತ್ತಿದೆ.

Similar News