ಗ್ರೇಟರ್ ಟಿಪ್ರಾಲ್ಯಾಂಡ್ ಹೊರತುಪಡಿಸಿ ಟಿಪ್ರಾ ಮೋಥಾದ ಎಲ್ಲಾ ಬೇಡಿಕೆಗಳನ್ನು ಸ್ವೀಕರಿಸಲು ಸಿದ್ಧ: ಬಿಜೆಪಿ
ಅಗರ್ತಲಾ : ಮಾಜಿ ರಾಜಮನೆತನದ ಪ್ರದ್ಯೋತ್ ದೆಬ್ಬರ್ಮಾ ನೇತೃತ್ವದ ಹೊಸ ಪಕ್ಷವು ತನ್ನ ಬೆಂಬಲವನ್ನು ನೀಡಿದರೆ ಗ್ರೇಟರ್ ಟಿಪ್ರಾಲ್ಯಾಂಡ್ ಹೊರತುಪಡಿಸಿ ಟಿಪ್ರಾ ಮೋಥಾದ ಎಲ್ಲಾ ಬೇಡಿಕೆಗಳನ್ನು ಸ್ವೀಕರಿಸಲು ಸಿದ್ಧ ಎಂದು ಬಿಜೆಪಿ ಗುರುವಾರ ಹೇಳಿದೆ.
ಪಿಟಿಐ ಜೊತೆ ಮಾತನಾಡಿದ ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಸುಬ್ರತಾ ಚಕ್ರವರ್ತಿ, ರಾಜ್ಯದಲ್ಲಿ ಮುಂದಿನ ಸರಕಾರ ರಚಿಸಲು ತಮ್ಮ ಪಕ್ಷವು ಪ್ರಯತ್ನ ನಡೆಸುತ್ತಿದೆ ಎಂದರು.
"ನಾವು ಮೊದಲಿನಿಂದಲೂ ಹೇಳುತ್ತಿರುವಂತೆಯೇ ನಾವು ರಾಜ್ಯದಲ್ಲಿ ಮುಂದಿನ ಸರಕಾರವನ್ನು ರಚಿಸುತ್ತಿದ್ದೇವೆ. ಇಬ್ಬರು ಕೇಂದ್ರ ನಾಯಕರಾದ ಫಣೀಂದ್ರನಾಥ್ ಶರ್ಮಾ ಹಾಗೂ ಸಂಬಿತ್ ಪಾತ್ರ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಬಂದಿದ್ದಾರೆ. ಇಂದು ಹೆಚ್ಚಿನ ಕೇಂದ್ರ ನಾಯಕರು ಆಗಮಿಸುತ್ತಾರೆ ಎಂದು ಆಶಿಸುತ್ತೇವೆ" ಎಂದು ಅವರು ಹೇಳಿದರು.
ದೆಬ್ಬರ್ಮಾ ನೇತೃತ್ವದ ಪಕ್ಷದ ಬೆಂಬಲವನ್ನು ಪಡೆಯುವ ಸಾಧ್ಯತೆಯ ಕುರಿತು ಪ್ರತಿಕ್ರಿಯಿಸಿದ ಸುಬ್ರತಾ ಚಕ್ರವರ್ತಿ "ಗ್ರೇಟರ್ ಟಿಪ್ರಾಲ್ಯಾಂಡ್ ಹೊರತುಪಡಿಸಿ, ಅವರ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಬಿಜೆಪಿ ಸಿದ್ಧವಾಗಿದೆ" ಎಂದು ಹೇಳಿದರು.
60 ಸದಸ್ಯ ಬಲದ ಸದನದಲ್ಲಿ ಬಿಜೆಪಿ 33 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಅದರ ಪಾಲುದಾರ ಐಪಿಎಫ್‌ಟಿ ಒಂದು ಸ್ಥಾನದಲ್ಲಿ ಮುಂದಿದೆ.
ಐಪಿಎಫ್‌ಟಿಯ ಬುಡಕಟ್ಟು ಜನರ ಬೆಂಬಲವನ್ನು ಪಡೆದುಕೊಂಡಂತೆ ತೋರುತ್ತಿರುವ ಟಿಪ್ರಾ ಮೋಥಾ 11 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಪ್ರತಿಪಕ್ಷಗಳಾದ ಎಡ-ಕಾಂಗ್ರೆಸ್ ಮೈತ್ರಿಕೂಟ 15 ಸ್ಥಾನಗಳಲ್ಲಿ ಮುಂದಿದೆ.