×
Ad

ಉಡುಪಿ: ಬರಿಗೈಯಲ್ಲಿ 25 ಅಂತಸ್ತಿನ ಕಟ್ಟಡ ಏರಿದ ಸಾಹಸಿ ಕೋತಿರಾಜ್

ಅಡ್ವೆಂಚರ್ ಮಂಕಿ ಕ್ಲಬ್ ಸ್ಥಾಪನೆ ಗುರಿ: ನಿಧಿ ಸಂಗ್ರಹಕ್ಕೆ ಸಾಹಸ ಪ್ರದರ್ಶನ

Update: 2023-03-02 18:05 IST

ಉಡುಪಿ: ಚಿತ್ರದುರ್ಗದ ಸಾಹಸಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಗುರುವಾರ ಬರಿಗೈಯಲ್ಲಿ 25 ಅಂತಸ್ತಿನ 250 ಅಡಿ ಎತ್ತರದ ಬಹುಮಹಡಿ ಕಟ್ಟಡವನ್ನು ಏರುವ ಮೂಲಕ ಸಾಹಸ ಮೆರೆದಿದ್ದಾರೆ.

ಉದ್ಯಮಿ ವಿನೀತ್ ಅಮೀನ್ ಎಂಬವರ ಉಡುಪಿಯ ಬ್ರಹ್ಮಗಿರಿಯಲ್ಲಿರುವ ವುಡ್ಸ್‌ವಿಲ್ ವಸತಿ ಸಮುಚ್ಛಯವನ್ನು ಬೆಳಗ್ಗೆ 10.20ಕ್ಕೆ ಏರಿದ ಕೋತಿರಾಜ್, 20 ನಿಮಿಷದಲ್ಲಿ ಅಂದರೆ 10.40ಕ್ಕೆ 25ನೇ ಅಂತಸ್ತು ತಲುಪುವಲ್ಲಿ ಯಶಸ್ವಿಯಾದರು. ಕಟ್ಟಡದ ತುತ್ತ ತುದಿಯಲ್ಲಿ ಕೋತಿರಾಜ್ ಕನ್ನಡ ಧ್ವಜವನ್ನು ಹಾರಿಸುವ ಮೂಲಕ ಸಂಭ್ರಮಿಸಿದರು.

ಕಟ್ಟಡದ ಕೆಳಗೆ ನೆರೆದಿದ್ದ ನೂರಾರು ಸಂಖ್ಯೆಯ ಜನರು ಕರಡತನದ ಮೂಲಕ ಕಟ್ಟಡ ಹತ್ತುತ್ತಿದ್ದ ಕೋತಿ ರಾಜ್ ಅವರನ್ನು ಹುರುದಂಬಿಸಿದರು. ಕೋತಿರಾಜ್ ಯಾವುದೇ ಪರಿಕರದ ಸಹಾಯ ಇಲ್ಲದೆ ಕಟ್ಟಡ ಏರಿದರೂ ಇಲಾಖೆಯ ಸೂಚನೆಯಂತೆ ಸುರಕ್ಷತೆಯ ದೃಷ್ಠಿಯಿಂದ 25ಕ್ವಿಂಟಾಲ್ ಸಾಮರ್ಥ್ಯದ ರೋಪ್ ಅಳವಡಿಸಿಕೊಂಡಿದ್ದರು.

ಸ್ಥಳದಲ್ಲಿ ಉಡುಪಿ ನಗರ ಪೊಲೀಸರು ಹಾಗೂ ಅಗ್ನಿಶಾಮಕದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು. 

ಸುಡುವ ಬಿಸಿಲಿನಲ್ಲೂ ಸಾಹಸ

ಸುಡು ಬಿಸಿಲಿಗೆ ಬಿಸಿ ಏರಿದ ಸಮುಚ್ಛಯದ ಕಿಟಕಿಗಳ ಸರಳುಗಳನ್ನೇ ಹಿಡಿದು ಸುಟ್ಟ ಕೈಗಳಿಂದ ಕಟ್ಟಡ ಏರಿದ ಕೋತಿರಾಜ್ ಸಾಹಸ ಮೆರೆದರು.

‘ಈ ಬಹುಮಹಡಿ ಕಟ್ಟಡವನ್ನು ಏರುವುದು ಸಾಕಷ್ಟು ಸವಾಲು ಆಗಿತ್ತು. ಯಾಕೆಂದರೆ ಸುಡು ಬಿಸಿಲಿಗೆ ಕಟ್ಟಡ ಕಿಟಕಿಗಳ ಕಂಬಿಗಳು ಬಿಸಿ ಏರಿದ್ದವು. ಆದರೂ ಆ ಸರಳುಗಳನ್ನು ಹಿಡಿದು ಮೇಲಕ್ಕೆ ಏರಿದೆ. ಇದರಿಂದ ಕೈ ಸುಟ್ಟರೂ ನಿಧಾನಕ್ಕೆ ಹತ್ತಿಕೊಂಡು ಹೋದೆ. ಜನ ನೀಡಿದ ಪ್ರೋತ್ಸಾಹಕ್ಕೆ ತುಂಬಾ ಖುಷಿ ಪಟ್ಟೆ’ ಎಂದು ಕೋತಿರಾಜ್ ಹೇಳಿದರು.
ಫೌಂಡೇಶನ್‌ಗಾಗಿ ತುಂಬಾ ಕಷ್ಟ ಪಟ್ಟು ಕಟ್ಟಡ ಹತ್ತಿದ್ದೇನೆ. ಕಟ್ಟಡದ ತುದಿಯಲ್ಲಿ ಅಳವಡಿಸಿರುವ ತಂತಿಯಲ್ಲಿ ನನ್ನ ಕಾಲು ಸಿಲುಕಿಕೊಂಡಿತ್ತು.  ಇದರಿಂದ ಮೇಲಕ್ಕೆ ಏರಲು ಆಗಿಲ್ಲ. ಆ ಅಂತಸ್ತಿನಿಂದ ವಾಪಾಸ್ಸು ಇಳಿದು ಮತ್ತೆ ಬೇರೆ ಕಡೆಯಿಂದ ಮೇಲೆ ಹತ್ತಿ 25 ಮಹಡಿ ಪೂರ್ಣಗೊಳಿಸಿದೆನು ಎಂದು ಅವರು ಮಾಹಿತಿ ಹಂಚಿಕೊಂಡರು.

ನಿಧಿ ಸಂಗ್ರಹಕ್ಕಾಗಿ ಪ್ರದರ್ಶನ

ಅಡ್ವೆಂಚರ್ ಮಂಕಿ ಕ್ಲಬ್ ಎಂಬ ಫೌಂಡೇಶನ್ ಸ್ಥಾಪನೆಗಾಗಿ ನಿಧಿ ಸಂಗ್ರಹಿ ಸುವ ಉದ್ದೇಶದಿಂದ ಕೋತಿರಾಜ್ ತನ್ನ ತಂಡ ಜೊತೆ ಇಡೀ ರಾಜ್ಯಾದ್ಯಂತ ಸಂಚರಿಸಿ ಸಾಹಸ ಪ್ರದರ್ಶನಗಳನ್ನು ನೀಡುತ್ತಿದ್ದಾರೆ.

ಸರಕಾರ ಯಾವುದೇ ನೆರವು ನೀಡದ ಹಿನ್ನೆಲೆಯಲ್ಲಿ ಜನರಿಂದ ಸಂಗ್ರಹಿಸಿದ ನಿಧಿಯಿಂದ ಜಾಗ ಖರೀದಿಸಿ ಅಲ್ಲಿ ಕಟ್ಟಡ ನಿರ್ಮಿಸಿ ಫೌಂಡೇಶನ್ ಸ್ಥಾಪಿಸಲು ಉದ್ದೇಶಿಸಿದ್ದೇನೆ. ಈಗಾಗಲೇ ಹಲವು ಮಕ್ಕಳನ್ನು ದತ್ತು ಪಡೆದು ನಾನೇ ಸಾಕುತ್ತಿದ್ದೇನೆ. ಇದರಲ್ಲಿ ಕೆಲವು ಮಕ್ಕಳು ಪೊಲೀಸ್ ಇಲಾಖೆಗೆ ಸೇರಿದರೆ ಇನ್ನು ಕೆಲವರು ಸೈನ್ಯಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ಕೋತಿರಾಜ್ ತಿಳಿಸಿದರು.

ಮಕ್ಕಳು ಹಾಗೂ ಯುವಕರಿಗೆ ಶಿಕ್ಷಣದ ಜೊತೆ ಕ್ಲಿಮ್ಮಿಂಗ್ ತರಬೇತಿ ಕೂಡ ನೀಡಲಾಗುವುದು. ಅದಕ್ಕಾಗಿ ಫೌಂಡೇಶನ್ ಮೂಲಕ ಕೃತಕ ಗೋಡೆಯನ್ನು ನಿರ್ಮಿಸಲಾಗುವುದು. ಇದೀಗ ಒಲಂಪಿಕ್ಸ್‌ನಲ್ಲಿ ಕ್ಲಿಮ್ಮಿಂಗ್ ಸೇರ್ಪಡೆಯಾಗಿ ರುವುದರಿಂದ ನಮ್ಮ ಮಕ್ಕಳಿಗೆ ಉತ್ತಮ ತರಬೇತಿ ನೀಡಿ ಪದಕ ಗೆಲ್ಲಬೇಕೆಂಬುದೇ ನನ್ನ ಬಹುದೊಡ್ಡ ಆಸೆಯಾಗಿದೆ ಎಂದು ಅವರು ಹೇಳಿದರು.

ಕೋತಿರಾಜ್ ಸಿನೆಮಾ ಅರ್ಧಕ್ಕೆ ಸ್ಥಗಿತ!
‘ನನ್ನ ಜೀವನವನ್ನು ಆಧರಿಸಿ ತಯಾರಿಸುತ್ತಿರುವ ‘ಇನ್‌ಕ್ರೆಡಿಬಲ್ ಮಂಕಿ ಮ್ಯಾನ್’ ಎಂಬ ಹಾಲಿವುಡ್ ಸಿನೆಮಾ ಕೊರೋನಾದಿಂದ ಆರ್ಥಿಕ ಸಮಸ್ಯೆ ಯಿಂದ ಅರ್ಧಕ್ಕೆ ಸ್ಥಗಿತಗೊಂಡಿದೆ. ಇದರಲ್ಲಿ ನಾನೇ ನಟಿಸುತ್ತಿದ್ದು, ಮತ್ತೆ ಮುಂದುವರೆಯುವ ವಿಶ್ವಾಸ ಇದೆ. ಈಗಾಗಲೇ ಶೇ.60 ಚಿತ್ರೀಕರಣ ಮುಗಿದೆ ಎಂದು ಕೋತಿರಾಜ್ ತಿಳಿಸಿದರು.
ಅಮೆರಿಕಾದ ಏಂಜಲ್ಸ್ ಫಾಲ್ಸ್ ಹತ್ತಿ ಅಲ್ಲಿ ತ್ರೀವರ್ಣ ಧ್ವಜ ಹಾರಿಸಬೇಕು ಎಂಬುದು ನನ್ನ ಮುಂದಿನ ಗುರಿಯಾಗಿದೆ. ಭಾರತ ಬಿಟ್ಟು ಹೊರಗಡೆ ಇತಂಹ  ಸಾಹಸ ಮಾಡಿದರೆ ಭಾರತದ ಧ್ವಜವನ್ನು ದೇಶದೊಳಗೆ ಮಾಡಿದರೆ ಕನ್ನಡ ಧ್ವಜ ವನ್ನು ಹಾರಿಸುತ್ತೇನೆ. ಯಾಕೆಂದರೆ ನಾನು ಹುಟ್ಟಿರುವುದು ತಮಿಳುನಾಡು ಆದರೂ ನನ್ನನ್ನು ಬೆಳೆಸಿದ್ದು ಕರ್ನಾಟಕ. ನನಗೆ ಊಟ ಹಾಕಿರುವುದು ಕರ್ನಾಟಕ. ಹಾಗಾಗಿ ನಾನು ಕನ್ನಡಿಗನಾಗಿಯೇ ಸಾಯಬೇಕು ಎಂಬುದು ನನ್ನ ಮಹಾದಾಸೆ ಎಂದರು.

‘ಬಹುಮಹಡಿ ಕಟ್ಟಡ ಏರುತ್ತಿದ್ದ ಮಧ್ಯೆ ಉರಿ ಬಿಸಿಲಿನಿಂದ ನನ್ನ ಬಾಯಿ ಯೆಲ್ಲ ಒಣಗಿ ಜೋರು ಬಾಯರಿಕೆ ಆಗುತ್ತಿತ್ತು. ಆಗ ಸಮುಚ್ಛಯದ ಮಧ್ಯದ ಫ್ಲ್ಯಾಟ್‌ನಲ್ಲಿದ್ದ ಹಿರಿಯ ದಂಪತಿ ದೇವರಂತೆ ಬಂದು ಕಿಟಕಿ ಮೂಲಕ ನನಗೆ ನೀರು ಕೊಟ್ಟರು. ಆ ನೀರು ಕುಡಿದ ಬಳಿಕ ನನಗೆ ಮತ್ತೆ ಎನರ್ಜಿ ಬಂತು. ಮತ್ತೆ ಸಾಹಸವನ್ನು ಮುಂದುವರೆಸಿದೆ’
-ಕೋತಿರಾಜ್, ಸಾಹಸಿ

Full View

Similar News