ಕಪಿಲ್‌ದೇವ್ ದಾಖಲೆ ಮುರಿದ ಆರ್.ಅಶ್ವಿನ್

Update: 2023-03-02 14:11 GMT

ಇಂದೋರ್, ಮಾ.2: ದಾಖಲೆ ಪುಡಿಗಟ್ಟುವುದನ್ನು ಮುಂದುವರಿಸಿರುವ ಭಾರತದ ಹಿರಿಯ ಸ್ಪಿನ್ನರ್ ಆರ್.ಅಶ್ವಿನ್ ಲೆಜೆಂಡರಿ ಕಪಿಲ್‌ದೇವ್‌ರನ್ನು ಹಿಂದಿಕ್ಕಿ ಎಲ್ಲ ಮಾದರಿ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್‌ಗಳನ್ನು ಪಡೆದ ಭಾರತದ ಮೂರನೇ ಬೌಲರ್ ಎನಿಸಿಕೊಂಡರು.

ಆಸ್ಟ್ರೇಲಿಯ ವಿರುದ್ಧ ಹೋಲ್ಕರ್ ಸ್ಟೇಡಿಯಮ್‌ನಲ್ಲಿ ಗುರುವಾರ ನಡೆದ 3ನೇ ಟೆಸ್ಟ್‌ನ 2ನೇ ದಿನ ಅಶ್ವಿನ್ ಈ ಮೈಲಿಗಲ್ಲು ತಲುಪಿದರು. ಅಲೆಕ್ಸ್ ಕಾರೆ ವಿಕೆಟನ್ನು ಕಬಳಿಸಿದ ಅಶ್ವಿನ್ ಅವರು ಕಪಿಲ್ ಅವರ 687 ವಿಕೆಟ್ ದಾಖಲೆಯನ್ನು ಮುರಿದರು. 953 ವಿಕೆಟ್‌ಗಳೊಂದಿಗೆ ಅನಿಲ್ ಕುಂಬ್ಳೆ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಆ ನಂತರ ಹರ್ಭಜನ್ ಸಿಂಗ್(707) ಅವರಿದ್ದಾರೆ.

ಪೀಟರ್ ಹ್ಯಾಂಡ್ಸ್‌ಕಾಂಬ್ ಹಾಗೂ ಕ್ಯಾಮರೂನ್ ಗ್ರೀನ್ ನಡುವಿನ ಜೊತೆಯಾಟವನ್ನು ಮುರಿದ ಅಶ್ವಿನ್ ಭಾರತಕ್ಕೆ ದಿನದಾರಂಭದಲ್ಲಿ ಮೇಲುಗೈ ಒದಗಿಸಿದರು. ಹ್ಯಾಂಡ್ಸ್‌ಕಾಂಬ್ ವಿಕೆಟ್ ಪಡೆದು ಅಶ್ವಿನ್ 20.3 ಓವರ್‌ಗಳಲ್ಲಿ 44 ರನ್‌ಗೆ 3 ವಿಕೆಟ್‌ಗಳನ್ನು ಉರುಳಿಸಿದರು.

ಅಶ್ವಿನ್ ಹಾಗೂ ಉಮೇಶ್ ಯಾದವ್(3-12) ಭಾರತ ಪರ ಮರು ಹೋರಾಟ ನೀಡಿ ಆಸ್ಟ್ರೇಲಿಯವನ್ನು 200ರೊಳಗೆ ಕಟ್ಟಿ ಹಾಕಿದರು.
 

Similar News