×
Ad

ಸಹಕಾರಿ ಸಂಸ್ಥೆಗಳು ಕಾರ್ಪೋರೇಟ್ ಶೈಲಿಯಲ್ಲಿ ಬೆಳೆಯಬೇಕು: ಡಾ.ಎಂ.ಎನ್. ರಾಜೇಂದ್ರ ಕುಮಾರ್ ಸಲಹೆ

Update: 2023-03-02 20:16 IST

ಉಡುಪಿ: ಜಿಲ್ಲೆಯಲ್ಲಿರುವ ಎಲ್ಲಾ 54 ಸಹಕಾರಿ ಕ್ಷೇತ್ರದ ಸಂಸ್ಥೆಗಳೆಲ್ಲವೂ ಲಾಭದಾಯಕವಾಗಿ ನಡೆಯುತ್ತಿವೆ. ಇದಕ್ಕೆ ಸಹಕಾರಿ ಸಂಸ್ಥೆಗಳು ಜನರಿಗೆ ನೀಡುವ ನಗುಮೊಗದ ಸೇವೆಯೇ ಪ್ರಮುಖ ಕಾರಣ ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಹಾಗೂ ಮಂಗಳೂರಿನ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಉಡುಪಿ ಜಿಲ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಹೊಟೇಲ್ ಓಷಿಯನ್‌ಪರ್ಲ್ ಸಭಾಂಗಣದಲ್ಲಿ ಗುರುವಾರ ನಡೆದ ಉಡುಪಿ ಜಿಲ್ಲೆಯ ಎಲ್ಲಾ ಪ್ರಾಥಮಿಕ  ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಆಯೋಜಿಸಲಾದ ಒಂದು ದಿನದ ರಾಜ್ಯಮಟ್ಟದ ವಿಶೇಷ ಸಹಕಾರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇಂದು ವಾಣಿಜ್ಯ ಬ್ಯಾಂಕುಗಳು ವಿಕಸಿತಗೊಳ್ಳುವ ಬದಲು ಸಂಕುಚಿತಗೊಳ್ಳುತ್ತಿವೆ. ಜಿಲ್ಲೆಯಲ್ಲಿ ಹುಟ್ಟಿ, ಬೆಳೆದ ಬ್ಯಾಂಕುಗಳು ಅಸ್ತಿತ್ವವನ್ನು ಕಳೆದುಕೊಂಡಿವೆ. ಈಗ ಗ್ರಾಹಕನೊಬ್ಬ ಇಂಥ ಬ್ಯಾಂಕುಗಳಿಗೆ ಹೋದರೆ ಪರಕೀಯನೆಂಬ ಭಾವನೆ ಬರುವಂತಿದೆ. ಸ್ಥಳೀಯ ಭಾಷೆ, ಸಂಸ್ಕೃತಿ ಅರಿಯದವರಿಂದ ಉತ್ತಮ ಸೇವೆ ಕೊಡಲು ಸಾಧ್ಯವಿಲ್ಲ ಎಂದವರು ಹೇಳಿದರು.

ಆದರೆ ಸಹಕಾರಿ ಕ್ಷೇತ್ರದ ಸಂಸ್ಥೆಗಳಿಂದು ನವನೂತನ ಸೇವೆಗಳನ್ನು ನೀಡುವ  ಮೂಲಕ ಬಲಾಢ್ಯಗೊಳ್ಳುತ್ತಿವೆ. ಬ್ಯಾಂಕುಗಳಿನ್ನು ವಾರದಲ್ಲಿ ಐದು ದಿನ ಸೇವೆ ನೀಡಿದರೆ, ನಾವು ವರ್ಷವಿಡೀ ಸೇವೆಯಲ್ಲಿ ನಿರತರಾಗಿರುತ್ತೇವೆ. ಹೀಗಾಗಿ ಜನರಿಗೆ ನಮ್ಮಲ್ಲಿ ವಿಶ್ವಾಸ ಮೂಡಿದೆ ಎಂದು ಎಂ.ಎನ್.ಆರ್. ಅಭಿಪ್ರಾಯಪಟ್ಟರು.

ಕೇವಲ ಕೃಷಿ ಸಾಲ ನೀಡುವುದರಿಂದ ಸಹಕಾರಿ ಸಂಸ್ಥೆಗಳಿಗೆ ಲಾಭ ಸಿಗುವುದಿಲ್ಲ. ನಾವು ನೀಡುವ ಇತರ ಸೇವೆಗಳಿಂದ ನಿಜವಾಗಿಯೂ ನಾವು ಲಾಭ ಸಂಪಾದಿಸುತಿದ್ದೇವೆ ಎಂದ ರಾಜೇಂದ್ರಕುಮಾರ್, ದೇಶದಲ್ಲಿಂದು 66,000 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿವೆ. ಇವುಗಳನ್ನು 2ಲಕ್ಷಕ್ಕೇರಿಸುವುದಾಗಿ ಘೋಷಿಸಲಾಗಿದೆ. ಇಂಥ ಕ್ರಮಗಳಿಂದ ಸಂಸ್ಥೆ ಸದೃಢವಾಗಿ ಉಳಿಯಲು ಸಾಧ್ಯವಾಗುವುದಿಲ್ಲ. ಸಂಸ್ಥೆ ಸದೃಢಗೊಳ್ಳದೇ ಲಾಭ ಗಳಿಸಲು ಸಾಧ್ಯವಿಲ್ಲ ಎಂದೂ ಅವರು ಹೇಳಿದರು.

ಜಿಲ್ಲೆಯ ಸಹಕಾರಿ ಕ್ಷೇತ್ರದ ಸಂಸ್ಥೆಗಳು ಒಳ್ಳೆಯ ಕಾರ್ಪೋರೇಟ್ ಶೈಲಿಯಲ್ಲಿ ಬೆಳೆಯಬೇಕು. ಆಗ ಜನರಿಗೂ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ. ಈಗಾಗಲೇ ಜಿಲ್ಲೆಯ ಸಹಕಾರಿ ಸಂಸ್ಥೆಗಳು ಸ್ವಂತ ಕಟ್ಟಡ,  ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಉತ್ತಮ ಸೇವೆ ನೀಡುತ್ತಿವೆ. ಜನರ ವಿಶ್ವಾಸದಿಂದ ಸಂಸ್ಥೆ ಸದೃಢವಾಗಿ ಬೆಳೆಯಲು ಸಾಧ್ಯವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಹಾಗೂ ರಾಜ್ಯ ಸಹಕಾರಿ ಮಹಾಮಂಡಳದ ನಿರ್ದೇಶಕ ಬಿ.ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಸಹಕಾರ ಕ್ಷೇತ್ರ ಈ ಮಟ್ಟಕ್ಕೆ ಸದೃಢಗೊಂಡು ಬೆಳೆಯಲು ಕ್ಷೇತ್ರದ ಮೇಲೆ ಜನರಿಟ್ಟ ನಂಬಿಕೆ ಹಾಗೂ ವಿಶ್ವಾಸಗಳೇ ಕಾರಣ ಹಾಗೂ ಈ ಕ್ಷೇತ್ರದಲ್ಲಿ ಯಾವುದೇ ಸಮಸ್ಥೆಗಳು ಬಂದಾಗ ಪರಿಹಾರದ ಮಾರ್ಗದರ್ಶನ ನೀಡುವ ರಾಜೇಂದ್ರಕುಮಾರ್ ರಂಥವರ ಸಲಹೆ-ಸೂಚನೆಗಳೇ ಕಾರಣ ಎಂದರು.

ಯೂನಿಯನ್ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.  ಡಾ.ಎಂ.ಎನ್. ರಾಜೇಂದ್ರ ಕುಮಾರ್‌ರನ್ನು ಯೂನಿಯನ್ ವತಿಯಿಂದ ಸನ್ಮಾನಿಸಲಾಯಿತು. ಅಲ್ಲದೇ ಸಂಸ್ಥೆಯಿಂದ ನಿವೃತ್ತರಾದ ಲೆಕ್ಕಪರಿಶೋಧಕ ಗಣೇಶ್ ಮಯ್ಯ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಸಮಾರಂಭದಲ್ಲಿ ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ, ರಾಜು ಪೂಜಾರಿ, ರಾಜೇಶ್ ರಾವ್ ಪಾಂಗಾಳ, ಜಿಲ್ಲೆಯ ಸಹಕಾರ ಸಂಘ ಗಳ ಉಪನಿಬಂಧಕ ಲಕ್ಷ್ಮೀನಾರಾಯಣ ಜಿ.ಎನ್., ನಿವೃತ್ತ ಅಪರ ನಿಬಂಧಕ ಎಚ್.ಎಸ್.ನಾಗರಾಜಯ್ಯ, ಯೂನಿಯನ್‌ನ ನಿರ್ದೇಶಕರಾದ ಕಟಪಾಡಿ ಶಂಕರ ಪೂಜಾರಿ, ಎಚ್.ಗಂಗಾಧರ ಶೆಟ್ಟಿ, ಯಶಪಾಲ್ ಸುವರ್ಣ, ಅಕೋಶ್‌ಕುಮಾರ್ ಶೆಟ್ಟಿ,ಅಶೋಕ್ ಕುಮಾರ್ ಬಲ್ಲಾಳ್ ಉಪಸ್ಥಿತರಿದ್ದರು.

ಯೂನಿಯನ್‌ನ ನಿರ್ದೇಶಕ ಹರೀಶ್ ಕಿಣಿ ಅತಿಥಿಗಳನ್ನು ಸ್ವಾಗತಿಸಿದರೆ, ಶ್ರೀಧರ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹರೀಶ್ ಬಿ.ಬಿ. ವಂದಿಸಿದರು.

Similar News