ಮೇಘಾಲಯದಲ್ಲಿ ಅತಂತ್ರ ವಿಧಾನಸಭೆ: ಮುಖ್ಯಮಂತ್ರಿ ಸಂಗ್ಮಾ ಮನವಿ ಬೆನ್ನಿಗೇ ಬೆಂಬಲ ನೀಡಿದ ಅಮಿತ್ ಶಾ
ಶಿಲ್ಲಾಂಗ್: ಮೇಘಾಲಯ ವಿಧಾನಸಭಾ ಚುನಾವಣಾ ಫಲಿತಾಂಶಯಲ್ಲಿ ಬಹುಮತದ ಕೊರತೆ ಅನುಭವಿಸಿದ ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ, ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕರೆ ಮಾಡಿ ಬೆಂಬಲ ಕೋರಿದ ಬೆನ್ನಿಗೇ ಅವರ ಮನವಿಯನ್ನು ಪುರಸ್ಕರಿಸಲಾಗಿದೆ ಎಂದು NDTV ವರದಿ ಮಾಡಿದೆ.
ಗುರುವಾರ ಭಾರಿ ಭದ್ರತೆಯೊಂದಿಗೆ ನಡೆದ ಮತ ಎಣಿಕೆಯಲ್ಲಿ ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿದಂತೆಯೇ ಫಲಿತಾಂಶಗಳು ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸೂಚನೆ ನೀಡಿವೆ. ಕೊನ್ರಾಡ್ ಸಂಗ್ಮಾ ನೇತೃತ್ವದ ಪಕ್ಷವು ಈವರೆಗೆ 20 ಸ್ಥಾನಗಳನ್ನು ಜಯಿಸಿ, 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 60 ಸ್ಥಾನಗಳನ್ನು ಹೊಂದಿರುವ ಮೇಘಾಲಯ ವಿಧಾನಸಭೆಯಲ್ಲಿ ಬಹುಮತದ ಸಂಖ್ಯೆ 31 ಆಗಿದೆ. ಈ ಪೈಕಿ ಒಂದು ಮತಕ್ಷೇತ್ರದ ಚುನಾವಣೆ ರದ್ದಾಗಿದ್ದು, ಮುಂದೆ ನಡೆಯಲಿದೆ.
ಯುನೈಟೆೆಡ್ ಡೆಮಾಕ್ರಾಟಿಕ್ ಪಾರ್ಟಿ (UDP) ಎರಡನೆ ಸ್ಥಾನದಲ್ಲಿದ್ದು, 11 ಸ್ಥಾನ ಗಳಿಸಿದೆ. ಇದಲ್ಲದೆ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ತಲಾ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಿಜೆಪಿ ಎರಡು ಸ್ಥಾನಗಳಲ್ಲಿ ವಿಜಯಿಯಾಗಿದೆ.
ಈಶಾನ್ಯ ರಾಜ್ಯಗಳ ಟ್ರಬಲ್ ಶೂಟರ್ ಆಗಿರುವ ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಕಾನ್ರಾಡ್ ಸಂಗ್ಮಾ ಅವರಿಗೆ ಬೆಂಬಲ ನೀಡುವ ನಿರ್ಧಾರವನ್ನು ಪ್ರಕಟಿಸಿದರು. ಹೀಗಿದ್ದೂ ಸಂಗ್ಮಾ ನೇತೃತ್ವದ ಸರ್ಕಾರ ರಚನೆಯಾಗಲು ಮತ್ತಷ್ಟು ಶಾಸಕರ ಬೆಂಬಲ ಬೇಕಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: 1,257 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗೆಲುವು: 2ನೇ ಬಾರಿ ಮುಖ್ಯಮಂತ್ರಿ ಹುದ್ದೆಯತ್ತ ಮಾಣಿಕ್ ಸಹಾ