ಐದು ರಾಜ್ಯಗಳ ಉಪಚುನಾವಣೆ: ಎನ್‌ಡಿಎ, ಕಾಂಗ್ರೆಸ್‌ಗೆ ತಲಾ 3 ಸ್ಥಾನ

Update: 2023-03-03 03:23 GMT

ಹೊಸದಿಲ್ಲಿ: ಇತ್ತೀಚೆಗೆ ನಡೆದ ಐದು ರಾಜ್ಯಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಎನ್‌ಡಿಎ ಮಿತ್ರಪಕ್ಷಗಳು ತಲಾ ಮೂರು ಸ್ಥಾನಗಳನ್ನು ಗೆದ್ದುಕೊಂಡಿವೆ. ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ತೀವ್ರ ಆಘಾತ ಅನುಭವಿಸಿದ್ದರೆ, ಬಂಗಾಳ ಮತ್ತು ಮಹಾರಾಷ್ಟ್ರದಲ್ಲಿ ಗೆಲುವಿನ ನಗೆ ಬೀರಿದೆ.

2021ರ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿದ್ದ ಕಾಂಗ್ರೆಸ್ ಈ ಬಾರಿ ಬಂಗಾಳದ ಸಾಗರ್ದಿಘಿ ಕ್ಷೇತ್ರದಲ್ಲಿ ಅಚ್ಚರಿಯ ಗೆಲುವು ಸಾಧಿಸಿ ಪ್ರಸಕ್ತ ವಿಧಾನಸಭೆಗೆ ಮೊದಲ ಸದಸ್ಯನನ್ನು ಕಳುಹಿಸುವಲ್ಲಿ ಯಶಸ್ವಿಯಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೈರಾನ್ ನಿಸ್ವಾಸ್, ಎಡ ಪಕ್ಷಗಳ ಬೆಂಬಲದೊಂದಿಗೆ ತೃಣಮೂಲ ಕಾಂಗ್ರೆಸ್ ಪಕ್ಷದ ದೇಬಶಿಶ್ ಬ್ಯಾನರ್ಜಿ ವಿರುದ್ಧ 22 ಸಾವಿರ ಮತಗಳ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಪುಣೆಯ ಕಸಬಾಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರವೀಂದ್ರ ಧಂಗರ್‌ಕರ್ ಬಿಜೆಪಿಯ ಹೇಮಂತ್ ರಸಾನೆ ವಿರುದ್ಧ 10 ಸಾವಿರ ಮತಗಳ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಳೆದ ಮೂವತ್ತು ವರ್ಷಗಳಲ್ಲಿ ಇದು ಮೊದಲ ಗೆಲುವು. ಪುಣೆಯ ಚಿಂಚವಾಡ ಕ್ಷೇತ್ರದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಉಳಿಸಿಕೊಂಡಿದ್ದು, ಪಕ್ಷದ ಅಶ್ವಿನಿ ಜಗತಾಪ್ ಎನ್‌ಸಿಪಿಯ ನಾನಾ ಅಲಿಯಾಸ್ ವಿಠನ್ ಕಾಟೆ ಅವರನ್ನು 30 ಸಾವಿರ ಮತಗಳಿಂದ ಸೋಲಿಸಿದ್ದಾರೆ

ತಮಿಳುನಾಡಿನ ಪೂರ್ವ ಈರೋಡ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಇವಿಕೆ ಎಸ್.ಇಳಂಗೋವನ್ 60 ಸಾವಿರ ಮತಗಳ ಭಾರಿ ಅಂತರದ ಗೆಲುವು ಸಆಧಿಸಿದ್ದಾರೆ. ಈ ಗೆಲುವಿನ ಕೀರ್ತಿ ಮಿತ್ರಪಕ್ಷವಾದ ಡಿಎಂಕೆ ಹಾಗೂ ಸಿಎಂ ಎಂ.ಕೆ.ಸ್ಟಾಲಿನ್ ಅವರ ಒಳ್ಳೆಯ ಆಡಳಿತಕ್ಕೆ ಸಲ್ಲುತ್ತದೆ ಎಂದು ಕಾಂಗ್ರೆಸ್ ಹೇಳಿದೆ.

ಆದರೆ ಜಾರ್ಖಂಡ್‌ನಲ್ಲಿ ಆಡಳಿತಾರೂಢ ಕಾಂಗ್ರೆಸ್ ಆಘಾತ ಅನುಭವಿಸಿದ್ದು, ಬಿಜೆಪಿ ಮಿತ್ರಪಕ್ಷವಾದ ಎಜೆಎಸ್‌ಯು ಅಭ್ಯರ್ಥಿ ವಿರುದ್ಧ ಸೋಲು ಅನುಭವಿಸಿದ್ದಾರೆ. ಕಾಂಗ್ರೆಸ್‌ನ ಮಮತಾದೇವಿ ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ದಂಗೆ ಪ್ರಕರಣವೊಂದರಲ್ಲಿ ಶಿಕ್ಷಿತರಾಗಿ ಅವರು ಅನರ್ಹಗೊಂಡಿದ್ದರು. ಅವರ ಪತಿ ಬಜರಂಗ್ ಮಹತೋ, ಎಜೆಎಸ್‌ಯುನ ಸುನೀತಾ ಚೌಧರಿ ವಿರುದ್ಧ 22 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ಬಿಜೆಪಿಯ ತ್ಸೆರಿಂಗ್ ಲ್ಹಾಮು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Similar News