ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸೋಲು: ಗಾವಸ್ಕರ್ ನೀಡಿದ ಕಾರಣವೇನು ಗೊತ್ತೆ?

Update: 2023-03-03 16:31 GMT

ಇಂದೋರ್: ಗಾವಸ್ಕರ್-ಬಾರ್ಡರ್ ಸರಣಿಯ ಮೂರನೆ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭಾರತ ತಂಡದ ವಿರುದ್ಧ ಒಂಬತ್ತು ವಿಕೆಟ್‌ಗಳಿಂದ ಜಯ ಸಾಧಿಸಿದ್ದು, ಸರಣಿಯಲ್ಲೀಗ 1-2 ಹಿನ್ನಡೆಯಲ್ಲಿದೆ.

ಈ ನಡುವೆ, ರವೀಂದ್ರ ಜಡೇಜಾ, ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಮಾರ್ನಸ್ ಲಾಬುಶೇನ್ ವಿಕೆಟ್ ಪಡೆದೂ, ಆ ಎಸೆತವನ್ನು ನೋಬಾಲ್ ಮಾಡಿದ್ದು ಭಾರತದ ಪಾಲಿಗೆ ದುಬಾರಿಯಾಗಿ ಪರಿಣಮಿಸಿತು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ವೀಕ್ಷಕ ವಿವರಣೆಗಾರ ಸುನೀಲ್ ಗಾವಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ ಎಂದು ndtv.com ವರದಿ ಮಾಡಿದೆ.

ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್‌ನಲ್ಲಿ ಲಾಬೂಶೇನ್ ಖಾತೆ ತೆರೆಯುವ ಮುನ್ನವೇ ರವೀಂದ್ರ ಜಡೇಜಾ ಅವರನ್ನು ಔಟಾಗಿಸಿದ್ದರು. ಬ್ಯಾಟ್‌ನಿಂದ ದೂರ ಹೋಗುತ್ತಿದ್ದ ಬಾಲಿನತ್ತ ಬ್ಯಾಟ್ ಬೀಸಿದ್ದ ಲಾಬೂಶೇನ್, ಆ ಬಾಲನ್ನು ಸ್ಟಂಪ್ಸ್‌ನತ್ತ ಎಳೆದುಕೊಂಡು ಬೋಲ್ಡ್ ಆಗಿದ್ದರು. ಆದರೆ, ಟಿವಿ ಅಂಪೈರ್ ರವೀಂದ್ರ ಜಡೇಜಾ ಗೆರೆ ದಾಟಿ ಬೌಲ್ ಮಾಡಿದ್ದನ್ನು ಗಮನಿಸಿದರು. ನಂತರ ಲಾಬೂಶೇನ್ 31 ರನ್ ಗಳಿಸಿದ್ದರಲ್ಲದೆ, ಉಸ್ಮಾನ್ ಖವಾಜಾರೊಂದಿಗೆ ಎರಡನೆ ವಿಕೆಟ್ ಜೊತೆಯಾಟದಲ್ಲಿ ಮಹತ್ವದ 96 ರನ್‌ಗಳನ್ನು ಒಟ್ಟುಗೂಡಿಸಿದ್ದರು. ಆ ಮೂಲಕ ಆಸ್ಟ್ರೇಲಿಯಾವನ್ನು ಆಪತ್ತಿನಿಂದ ಪಾರು ಮಾಡಿದ್ದರು. 

ಲಾಬೂಶೇನ್‌ಗೆ ರವೀಂದ್ರ ಜಡೇಜಾ ಮಾಡಿದ ಆ ನೋಬಾಲ್ ಭಾರತದ ಪಾಲಿಗೆ ದುಬಾರಿಯಾಗಿ ಪರಿಣಮಿಸಿತು ಎಂದು ಗಾವಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ. "ನೀವು ಟೆಸ್ಟ್ ಪಂದ್ಯದತ್ತ ಹಿಂದಿರುಗಿ ನೋಡಿದರೆ, ಭಾರತಕ್ಕೆ ಯಾವುದು ದುಬಾರಿಯಾಗಿ ಪರಿಣಮಿಸಿತು ಎಂದು ಹೇಳಬಹುದು. ಲಾಬೂಶೇನ್‌ ಶೂನ್ಯಕ್ಕೆ ಔಟಾಗಿದ್ದರು. ನಂತರ ಅವರು ಮಹತ್ವದ 96 ರನ್ ಜೊತೆಯಾಟವಾಡಿದರು. ಇದಾದ ನಂತರ ಭಾರತ ತಂಡ ಕೇವಲ 106 ರನ್‌ಗೆ ಔಟಾಯಿತು. ನನಗನ್ನಿಸುವಂತೆ ಅದೇ ಪಂದ್ಯಕ್ಕೆ ತಿರುವು ನೀಡಿದ ಘಟ್ಟ. ಆ ನೋಬಾಲ್ ಭಾರತದಿಂದ ಪಂದ್ಯವನ್ನು ಕಸಿದುಕೊಂಡಿತು ಎಂಬುದು ನನ್ನ ಅನಿಸಿಕೆ" ಎಂದು ಹೇಳಿದ್ದಾರೆ.

Similar News