ಉ.ಪ್ರ.: ಮೇಲ್ಜಾತಿಗಳಿಂದ ಸಾಮಾಜಿಕ ಬಹಿಷ್ಕಾರಕ್ಕೊಳಗಾಗಿ ಬಲವಂತಕ್ಕೊಳಗಾಗಿ ಗ್ರಾಮ ತೊರೆದ ಎರಡು ದಲಿತ ಕುಟುಂಬಗಳು

Update: 2023-03-03 18:15 GMT

ಫತೇಹಾಬಾದ್,ಮಾ.3: ಮೇಲ್ಜಾತಿ ಸಮುದಾಯದವರು ಸಾಮಾಜಿಕ ಬಹಿಷ್ಕಾರ ಹಾಕಿದ್ದರಿಂದಾಗಿ ಎರಡು ದಲಿತ ಕುಟುಂಬಗಳ ಏಳು ಮಂದಿ ಸದಸ್ಯರು ತಮ್ಮ ಗ್ರಾಮವನ್ನೇ ತೊರೆದ ಘಟನೆ ಉತ್ತರಪ್ರದೇಶದ ಫತೇಹಬಾದ್ ಜಿಲ್ಲೆಯಲ್ಲಿ ನಡೆದಿದೆ. ಜಂಡ್ವಾಲಾ ಸೊಟೆರ್ ಗ್ರಾಮದಲ್ಲಿ ದಲಿತ ಸಮುದಾಯದವರೇ ಆದ ವಿವಾಹಿತ ಪುರುಷ (32) ಹಾಗೂ ಅವಿವಾಹಿತ ಮಹಿಳೆ (23)ಯ ನಡುವಿನ ಪ್ರೇಮಪ್ರಕರಣವನ್ನು ನೆಪವಾಗಿರಿಸಿಕೊಂಡು ಈ ದಲಿತ ಕುಟುಂಬಗಳನ್ನು ಬಲವಂತದಿಂದ ಗ್ರಾಮ ತೊರೆಯುವಂತೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಮೇಲ್ಜಾತಿ ಸಮುದಾಯಗಳ ಸಾಮಾಜಿಕ ಬಹಿಷ್ಕಾರದ ಹಿನ್ನೆಲೆಯಲ್ಲಿ ಯುವತಿಯ ತಂದೆ, ಗ್ರಾಮದ ಸರಪಂಚ,ಗ್ರಾಮಲೆಕ್ಕಿಗ ಸೇರಿದಂತೆ 18 ಮಂದಿ ವಿರುದ್ಧ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಲವು ಗ್ರಾಮಸ್ಥರು ಎರಡೂ ಕುಟುಂಬಗಳ ಸದಸ್ಯರನ್ನು ಹತ್ಯೆಗೈಯುವ ಹಾಗೂ ಅವರ ಮನೆಗೆ ಬೆಂಕಿ ಹಚ್ಚುವ ಬೆದರಿಕೆಯನ್ನು ಕೂಡಾ ಒಡ್ಡಿದ್ದಾರೆಂದು ಅವರು ಹೇಳಿದರು.

ಜಂದ್ವಾಲಾ ಸೊಟ್ಟೆರ್ ಗ್ರಾಮದ ನಿವಾಸಿ ಸೋಮಬೀರ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆಯೆಂದು ಫತೇಹಬಾದ್ ಪೊಲೀಸರು ತಿಳಿಸಿದ್ದಾರೆ.

ತಾನು ಹಾಗೂ ಸಹೋದರ ಮಂಗತ್ರಾಮ್ ವಿವಾಹಿತರಾಗಿದ್ದು, ಪ್ರತ್ಯೇಕ ಮನೆಗಳಲ್ಲಿ ವಾಸವಾಗಿರುವುದಾಗಿ ಸೋಮಬೀರ್ ದೂರಿನಲ್ಲಿ ತಿಳಿಸಿದ್ದಾರೆ. ಸೋದರ್ ಮಂಗತ್ರಾಮ್ಗೆ ಇಬ್ಬರು ಮಕ್ಕಳಿದ್ದು, ಆತ ಕೆಲವು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೇಮಿಸುತ್ತಿದ್ದ ಹಾಗೂ ಆಕೆಯ ಜೊತೆ ವಾಸವಾಗಿದ್ದ . ಇದರಿಂದಾಗಿ ತಮ್ಮಿಬ್ಬರ ನಡುವೆ ವಿರಸವುಂಟಾಗಿತ್ತೆಂದು ಸೋಮಬೀರ್ ಹೇಳಿದ್ದಾನೆ.

 ‘‘ ಯುವತಿಯ ಸಂಬಂಧಿಕರು ಮಂಗತ್ರಾಮ್ ಹಾಗೂ ನನ್ನ ವಿರುದ್ಧ ಗ್ರಾಮದ ಮುಖ್ಯಸ್ಥರಿಗೆ ದೂರು ನೀಡಿದ್ದರು ಆನಂತರ ಮೇಲ್ಜಾತಿಗೆ ಸೇರಿದ ಕೆಲವರು ಯುವತಿಯ ಕುಟುಂಬ ಸದಸ್ಯರ ಜೊತೆ ಸಂಚು ಹೂಡಿ, ಪಂಚಾಯತಿ ಕರೆದಿದ್ದರು. ನಮ್ಮ ಮನೆಯನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಿ ಗ್ರಾಮತೊರೆಯುವಂತೆ ಅವರು ಬಲವಂತಪಡಿಸಿದ್ದರು. ಈ ಪ್ರಕರಣದಲ್ಲಿ ತನ್ನ ಯಾವುದೇ ತಪ್ಪಿಲ್ಲವೆಂದು ನಾನು ಗೋಗರೆದರೂ, ಯಾರೂ ಕೂಡಾ ಕಿವಿಗೊಡಲಿಲ್ಲ’’ ಎಂದು ಸೋಮಬೀರ್ ತಿಳಿಸಿದ್ದಾರೆ.

ಫೆಬ್ರವರಿ 25ರಂದು ಕರೆಯಲಾದ ಪಂಚಾಯತ್ನಲ್ಲಿ ಆರೋಪಿಗಳು ತಮ್ಮ ವಿರುದ್ಧ ಜಾತಿ ನಿಂದನೆಗಳನ್ನು ಮಾಡಿದ್ದರು ಹಾಗೂ ಗ್ರಾಮವನ್ನು ತೊರೆಯುವಂತೆ ಬಲವಂತಪಡಿಸಿದ್ದರು ಎಂದು ಅವರು ಹೇಳಿದ್ದಾರೆ.

ದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಿದ ಘಟನೆಯ ಬಗ್ಗೆ ಸುದ್ದಿಗಾರರು ಫತೇಹಬಾದ್ ಎಸ್ಪಿ ಆಸ್ತಾ ಮೋದಿ ಅವರನ್ನು ಸಂಪರ್ಕಿಸಿದ್ದರು. ಆದರೆ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆಂದು ತಿಳಿದುಬಂದಿದೆ.

Similar News